ಕೊಡಗಿನಲ್ಲಿ ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಕೇಂದ್ರ ಮಡಿಕೇರಿಯ ರಾಜಾಸೀಟು. ಇತ್ತೀಚೆಗೆ ಗ್ರೇಟರ್ ರಾಜಾಸೀಟಾಗಿ ಮಾರ್ಪಾಡುಗೊಂಡು ಇನ್ನಷ್ಟು ವಿಸ್ತರಿಸಲ್ಪಟ್ಟಿದೆ. ಸಹಸ್ರಾರು ಮಂದಿ ಪ್ರವಾಸಿಗರು ಬಂದರೂ ವಿಶಾಲವಾದ ಜಾಗ ಇರುವುದರಿಂದ ಒಳಗೆ ಜನದಟ್ಟಣೆ ಎನಿಸುವುದಿಲ್ಲ. ಹಾಗಾಗಿ ದಿನಂಪ್ರತಿ ಜನಜಂಗುಳಿ ಇದ್ದೇ ಇರುತ್ತದೆ.

ಪ್ರವಾಸಿ ಕೇಂದ್ರಗಳಲ್ಲಿ ಸಣ್ಣಪುಟ್ಟ ಆಹಾರ ಪದಾರ್ಥಗಳನ್ನು ಮಾರುವುದು ಎಷ್ಟು ಸಾಮಾನ್ಯವೋ, ಜನ ಅಂತಹವುಗಳನ್ನು ಅರಸಿ ಹೋಗುವುದು ಕೂಡ ಅಷ್ಟೇ ಸಾಮಾನ್ಯ. ಚುರುಮುರಿ, ಬಾಂಬೆ ಮಿಠಾಯಿ, ಹಣ್ಣು ಹಂಪಲುಗಳನ್ನು ಪ್ರವಾಸಿ ಕೇಂದ್ರಗಳಲ್ಲಿ ತಿನ್ನುವುದೇ ಒಂದು ರೀತಿಯ ಖುಷಿ.

ಮಡಿಕೇರಿಯ ರಾಜಾಸೀಟು ಇದಕ್ಕೆ ಹೊರತಾಗಿಲ್ಲ.

೧೦ - ೨೦ ವರ್ಷಗಳಿಂದ ಕೆಲವು ಮಂದಿ ಇಂತಹ ವ್ಯಾಪಾರಗಳಲ್ಲಿ ತೊಡಗಿಸಿಕೊಂಡು ತಮ್ಮ ಜೀವನೋಪಾಯವನ್ನು ಕಂಡುಕೊAಡಿದ್ದರು.

ಪ್ರಾಮಾಣಿಕವಾಗಿ ವ್ಯಾಪಾರ ನಡೆಸುತ್ತಿದ್ದವರ ನಡುವೆ ಹೊಸದಾಗಿ ಹಲವು ಮಂದಿ ಸೇರಿಕೊಂಡು ಒಳ್ಳೆಯ ವಾತಾವರಣವನ್ನೇ ಕೆಡಿಸಿಬಿಟ್ಟರು. ಸ್ಥಳೀಯರಿಗೊಂದು ದರ, ವಿದೇಶಿಯರಿಂದ ೧೦ ಪಟ್ಟು ದರ ವಸೂಲಾತಿಗೆ ಇಳಿದರು. ಲಂಗು ಲಗಾಮಿಲ್ಲದ ಅಶಿಸ್ತಿನ ವ್ಯಾಪಾರಿಗಳಿಂದ ಪ್ರಾಮಾಣಿಕರೂ ಎಲ್ಲರ ಕಣ್ಣಿಗೆ ಗುರಿಯಾಗುವಂತಾಯಿತು. ಆಹಾರ ಪದಾರ್ಥಗಳಲ್ಲದೆ ಇತರ ವಸ್ತುಗಳ ಮಾರಾಟವು ಆರಂಭಗೊAಡು ರಸ್ತೆಯ ಎಲ್ಲೆಡೆ ಓಡಾಟಕ್ಕೆ ತೊಂದರೆಯಾಗತೊಡಗಿತು. ಹೆಚ್ಚು ವಸೂಲಾತಿ.. ಜಗಳಗಳು ಮಾಮೂಲಿಯಾದವು.

ಹಿಂದಿನ ಜಿಲ್ಲಾಧಿಕಾರಿಗಳು ಎಲ್ಲಾ ವ್ಯಾಪಾರಿಗಳನ್ನು ತೆರವುಗೊಳಿಸಿ ಆದೇಶ ಹೊರಡಿಸಿದರು. ತೋಟಗಾರಿಕಾ ಇಲಾಖೆಗೆ ಸೇರಿದ್ದ ಜಾಗದಲ್ಲಿ ವ್ಯಾಪಾರಿಗಳನ್ನು ಹೊರಕ್ಕೆ ಹಾಕಿ ಅಲ್ಲಿ ಅವರುಗಳು ಮತ್ತೆ ಪ್ರವೇಶಿಸದಂತೆ ಪ್ರವೇಶ ದ್ವಾರವನ್ನು ಮುಚ್ಚಲಾಯಿತು. ಜೀವನೋಪಾಯಕ್ಕೆ ದಾರಿಕಾಣದ ಬಡ ವ್ಯಾಪಾರಿಗಳು ಅಲ್ಲಲ್ಲೇ ರಸ್ತೆ ಬದಿ, ತಳ್ಳುಗಾಡಿಗಳನ್ನು ಇಟ್ಟುಕೊಂಡು ವ್ಯಾಪಾರ ಪುನರಾರಂಭಿಸಿದರು. ಜನರ ಓಡಾಟಕ್ಕೆ ತೊಂದರೆ ಆಗುವುದರ ಜೊತೆಯಲ್ಲಿ ವಾಹನಗಳ ಓಡಾಟಕ್ಕೂ ಕಿರಿಕಿರಿಯಾಗತೊಡಗಿತು.

ಸಾರ್ವಜನಿಕರು, ಪೊಲೀಸರು ನಗರಸಭೆಗೆ ದೂರು ನೀಡಿದರು. ಜನರ ಹಿತದೃಷ್ಟಿಯಿಂದ ನಗರಸಭೆ ರಾಜಾಸೀಟು ವ್ಯಾಪ್ತಿ ಬಿಟ್ಟು ತಹಶೀಲ್ದಾರ್ ಕಚೇರಿ ರಸ್ತೆ, ನಾರ್ತ್ಕೂರ್ಗ್ ಕ್ಲಬ್ ಎದುರು ಹಾಗೂ ಹಳೆಯ ಖಾಸಗಿ ಬಸ್ ನಿಲ್ದಾಣದಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬರುವ ರಸ್ತೆಯ ಬದಿಯಲ್ಲಿ ಬೀದಿ ವ್ಯಾಪಾರಿಗಳಿಗೆ ಜಾಗ ಗುರುತಿಸಿ ಅಲ್ಲಿಗೆ ಸ್ಥಳಾಂತರಗೊಳ್ಳಲು ಸೂಚಿಸಿತು.

ವೈಜ್ಞಾನಿಕವಾಗಿ ಆಗಲೀ ವ್ಯಾಪಾರದ ದೃಷ್ಟಿಯಿಂದಾಗಲೀ ಈ ಜಾಗಗಳು ಬೀದಿ ವ್ಯಾಪಾರಿಗಳಿಗೆ ಖಂಡಿತಾ ಸೂಕ್ತವಾಗಿ ಕಾಣುತ್ತಿಲ್ಲ. ರಾಜಾಸೀಟಿಗೆ ಬರುವ ಪ್ರವಾಸಿಗರು ಚುರುಮುರಿಗಾಗಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಪಕ್ಕ ಬರುತ್ತಾರೆಯೇ? ಆ ಇಳಿಜಾರಿನಲ್ಲಿ ವ್ಯಾಪಾರ ಮಾಡಲು ಸಾಧ್ಯವೇ? ಹೆಚ್ಚಿನ ವಾಹನ ಸಂಚಾರ ಇರುವ ಇಂತಹ ಜಾಗದಲ್ಲಿ ಅಪಘಾತವನ್ನು ಆಹ್ವಾನಿಸುವುದಂತೂ ಖಂಡಿತ ಅಲ್ಲವೇ?

ಇಂತಹ ಸಂದರ್ಭದಲ್ಲಿ ಬೇಕು ಬೇಡಗಳ- ತಪ್ಪು ಸರಿಗಳ ಚರ್ಚೆಗಿಂತ ಎಲ್ಲರಿಗೂ ಒಪ್ಪಿಗೆಯಾಗುವಂತಹ ಪರಿಹಾರ ಕಂಡುಹಿಡಿಯಬೇಕಾದ ಅಗತ್ಯ ಮುಖ್ಯವಾಗಿದೆ.

ರಾಜಾಸೀಟಿನ ಎದುರು ಕೂರ್ಗ್ ವಿಲೇಜ್ ಎಂದು ಹೆಸರಿಟ್ಟಿರುವ ಜಾಗವೊಂದು ಇದೆ. ಹಿಂದೆ ಜಿಲ್ಲಾಧಿಕಾರಿಗಳಾಗಿದ್ದ ಅನೀಸ್ ಕಣ್ಮಣಿ ಜಾಯ್ ಅವರು ಆಸಕ್ತಿ ವಹಿಸಿ ಅದನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿದರು. ಹಲವು ಮಳಿಗೆಗಳು.. ವಿಶ್ರಾಂತಿಗಾಗಿ ಹಾಸುಗಲ್ಲುಗಳು.. ವಾಕಿಂಗ್ ಪಥ.. ಹೀಗೆ... ಹಲವು ಕೆಲಸಗಳನ್ನು ಕೈಗೆತ್ತಿಕೊಳ್ಳಲಾಯಿತು. ಮಳಿಗೆಗಳನ್ನು ಹಲವು ಇಲಾಖೆಗಳಿಗೆ ನೀಡಿ ಅದರ ಅನುಕೂಲತೆಯನ್ನು ಪಡೆದುಕೊಳ್ಳುವಂತೆ ಸೂಚಿಸಲಾಯಿತಾ ದರೂ ಯಾರೂ ಆಸಕ್ತಿ ವಹಿಸದೆ ಇದುವರೆಗೂ ಅಂಗಡಿಗಳು ತೆರೆಯಲ್ಪಟ್ಟಿಲ್ಲ. ಈ ಜಾಗ ಪಾಳುಬಿದ್ದಂತೆಯೇ ಕಾಣುತ್ತಿದೆ. ಕೂರ್ಗ್ ವಿಲೇಜ್‌ನ ವ್ಯಾಪ್ತಿ ರಾಜಾಸೀಟು ರಸ್ತೆಯಿಂದ ಮುಂದೆ ಲಿವಾ ಕ್ಲಿನಿಕ್‌ವರೆಗೂ ಇದ್ದು ಈ ಜಾಗ ಗುರುತಿಸಲ್ಪಟ್ಟು ತಂತಿಯನ್ನು ಅಳವಡಿಸಲಾಗಿದೆ.

ತೋಟಗಾರಿಕಾ ಇಲಾಖೆ ಜಾಗವಾದ ರಾಜಾಸೀಟಿನಲ್ಲಿ ಹಲವು ದಶಕಗಳಿಂದ ಪ್ರಾಮಾಣಿಕವಾಗಿ ವ್ಯಾಪಾರ ಮಾಡುತ್ತಿದ್ದ ಬೀದಿ ವ್ಯಾಪಾರಿಗಳು ಇದೀಗ ನಿಜಕ್ಕೂ ಬೀದಿ ಪಾಲಾಗಿದ್ದಾರೆ . ಮೇಲೆ ಹೇಳಿದ ಕೂರ್ಗ್ ವಿಲೇಜ್‌ನ ಒಳಭಾಗದಲ್ಲಿ ರಸ್ತೆಗೆ ಹೊಂದಿಕೊAಡAತೆ ಕನಿಷ್ಠ ೩೦ ಅಂಗಡಿಗಳನ್ನು ಸಾಲಾಗಿ ನೀಡಲು ಸಾಧ್ಯವಿದೆ. ರಸ್ತೆ ಬಿಟ್ಟು ಕನಿಷ್ಟ ಆರು ಅಡಿ ಒಳಭಾಗದಿಂದಲೂ ಅಂಗಡಿಗಳನ್ನು ಹಾಕಿಕೊಂಡರೆ ಪಾದಚಾರಿಗಳಿಗಾಗಲಿ , ವಾಹನ ಸಂಚಾರಕ್ಕಾಗಲೀ ಯಾವುದೇ ಅಡೆತಡೆ ಉಂಟಾಗುವುದಿಲ್ಲ.

ಮಡಿಕೇರಿ ಶಾಸಕ ಮಂತರ್ ಗೌಡ ಅವರು ಜಿಲ್ಲಾಧಿಕಾರಿ, ನಗರಸಭೆ, ತೋಟಗಾರಿಕಾ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಕಂಡು ಹಿಡಿಯುವುದಾಗಿ ತಿಳಿಸಿದ್ದಾರೆ. ಅದಕ್ಕೂ ಮುನ್ನ ಈ ಜಾಗವನ್ನು ಅವರು ಕೂಡ ಪರಿಶೀಲಿಸಿ ನಿರ್ಧರಿಸಲಿ.

ಅಂಗಡಿ ಮಳಿಗೆ ನೀಡುವುದಾದಲ್ಲಿ ದಶಕಗಳಿಂದ ವ್ಯಾಪಾರ ಮಾಡುತ್ತಿದ್ದವರನ್ನು ಮಾತ್ರ ಗುರುತಿಸಿ ಅಂತಹವರಿಗೆ ವ್ಯವಸ್ಥೆ ಕಲ್ಪಿಸಲಿ. ಹೊಸಬರಿಗೂ ವ್ಯವಸ್ಥೆ ಕಲ್ಪಿಸಿದಲ್ಲಿ ಮತ್ತೆ ಸಮಸ್ಯೆ ಉಲ್ಬಣಗೊಂಡು ಅನವಶ್ಯಕವಾದ ಮತ್ತು ಅಸೂಯೆಯ ವಾತಾವರಣ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿದಂತಾಗುತ್ತದೆ.