ನಾಪೋಕ್ಲು, ಜ. ೨೦: ಜನಸಾಮಾನ್ಯರಿಗೆ ಸಮಸ್ಯೆ ಆಗದಂತೆ ಎಚ್ಚರವಹಿಸಿ ಕ್ರಮಕೈಗೊಳ್ಳಿ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್. ಪೊನ್ನಣ್ಣ ಗ್ರಾಮ ಪಂಚಾಯಿತಿ ಸದಸ್ಯರಿಗೆ ಸೂಚಿಸಿದರು.

ಸ್ಥಳೀಯ ಕೊಡವ ಸಮಾಜದ ಮಾಜಿ ಅಧ್ಯಕ್ಷ ಮಣವಟ್ಟಿರ ಮಾಚಯ್ಯ ಅವರ ಮನೆ ಸಮೀಪ ತ್ಯಾಜ್ಯ ನೀರು ಶೇಖರಣೆಗೊಳ್ಳುತ್ತಿದ್ದು, ದುರ್ವಾಸನೆ ಬೀರುತ್ತಿದೆ. ಕೊಳಚೆ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಪರಿಹಾರ ಕಲ್ಪಿಸಿ ಎಂದು ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರು. ಆದರೆ ಗ್ರಾಮ ಪಂಚಾಯಿತಿ ಯಾವುದೇ ಪರಿಹಾರ ಕೈಗೊಳ್ಳದೆ ಇದ್ದುದರಿಂದ ಸಮಸ್ಯೆ ಪರಿಹಾರವಾಗಿರಲಿಲ್ಲ. ಶಾಸಕ ಎ.ಎಸ್. ಪೊನ್ನಣ್ಣ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರಿಂದ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಿಂದ ಮಾಹಿತಿ ಪಡೆದರು .ಸೂಕ್ತ ಕ್ರಮ ಕೈಗೊಳ್ಳುವಂತೆ ಪಂಚಾಯಿತಿಗೆ ಸೂಚಿಸಿದರು.

ಈ ಸಂದರ್ಭ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ. ಇಸ್ಮಾಯಿಲ್, ನಾಪೋಕ್ಲು ವಲಯ ಕಾಂಗ್ರೆಸ್ ಅಧ್ಯಕ್ಷ, ಪಂಚಾಯಿತಿ ಸದಸ್ಯ ಮಾಚೆಟ್ಟಿರ ಕುಸು ಕುಶಾಲಪ್ಪ, ಬಾಚಮಂಡ ಲವ ಚಿಣ್ಣಪ್ಪ, ಬೊಳ್ಳಂಡ ಶರೀನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.