ಸಂದರ್ಶನ - ಅನಿಲ್ ಎಚ್.ಟಿ.

ಅಯೋಧ್ಯೆಯಲ್ಲಿರುವ ಪುಟ್ಟ ಗಲ್ಲಿಯೊಂದರಲ್ಲಿನ ಹಳೇ ಕಾಲದ ಮನೆ ಅದು.. ಹೊರಗಿನಿಂದ ನೋಡಿದರೆ ಇಲ್ಲಿ ಜನ ವಾಸವಾಗಿದ್ದಾರೆ ಎಂಬ ಕುರುಹೇ ಕಾಣದಂಥ ಸ್ಥಿತಿಯಲ್ಲಿರುವ ಪ್ರಾಚೀನ ನಿವಾಸ ಅದು.

ಇಲ್ಲಿ ಕಳೆದ ೬೦ ವರ್ಷಗಳಿಂದ ವಾಸವಾಗಿದ್ದಾರೆ ಮಹಂತ ಸತ್ಯೇಂದ್ರ ದಾಸ್. ಇವರು ಯಾರು ಎಂದರೆ, ಜನವರಿ ೨೨ ರಂದು ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಲೋಕಾರ್ಪಣೆಯಾಗುತ್ತಿದೆಯಲ್ಲ.. ಈ ರಾಮಮಂದಿರದಲ್ಲಿ ನಿತ್ಯ ಶ್ರೀರಾಮನ ಪೂಜೆ ಮಾಡುವ ಮುಖ್ಯ ಅರ್ಚಕರೇ ಸತ್ಯೇಂದ್ರದಾಸ್. ಬಾಬರಿ ಮಸೀದಿ ಕೆಡವಲ್ಪಟ್ಟ ದಿನ ನಡೆದ ಗಲಭೆ ಸಂದರ್ಭ ಶ್ರೀರಾಮ, ಸೀತೆ, ಲಕ್ಷö್ಮಣ, ಆಂಜನೇಯರ ಮೂರ್ತಿಗಳನ್ನು ಕೈಯಲ್ಲಿ ಹಿಡಿದು ಮಸೀದಿ ಕೆಡವಲ್ಪಡುತ್ತಿದ್ದ ಸ್ಥಳದಿಂದ ದೂರಕ್ಕೆ ಓಡಿ ಮೂರ್ತಿಗಳಿಗೆ ಯಾವುದೇ ಹಾನಿಯಾಗದಂತೆ ತಡೆದ ಅರ್ಚಕರೇ ಸತ್ಯೇಂದ್ರ ದಾಸ್.

೩೨ ವರ್ಷಗಳಿಂದ ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾನಿಗೆ ಪೂಜೆ ಸಲ್ಲಿಸುತ್ತಿರುವ ಇವರಿಗೆ ಈಗ ೮೦ ವರ್ಷ. ಈ ಇಳಿ ಪ್ರಾಯದಲ್ಲಿಯೂ ನಿರ್ಬೀತಿಯ ನಿಲುವಿನ ಮೂಲಕ ಗಮನ ಸೆಳೆದಿರುವ ಸತ್ಯೇಂದ್ರದಾಸ್ ಅಯೋಧ್ಯೆಯಲ್ಲಿನ ಪ್ರತಿಯೊಂದು ವಿದ್ಯಮಾನಗಳನ್ನೂ ೬ ದಶಕಗಳಿಂದ ಹತ್ತಿರದಿಂದ ನೋಡಿದವರು. ಅಯೋಧ್ಯೆ ಮತ್ತು ಶ್ರೀರಾಮನ ಬಗ್ಗೆ ಅತ್ಯಂತ ಪ್ರಖರವಾಗಿ ಮಾತನಾಡಬಲ್ಲ ವಿದ್ವಾಂಸರು.

``ಶಕ್ತಿ’’ ಪರವಾಗಿ ಸತ್ಯೇಂದ್ರದಾಸ್ ಅವರನ್ನು ಮಾತನಾಡಿಸುವ ಅವಕಾಶ ಸುಮಾರು ೪ ಗಂಟೆಗಳ ಕಾಯುವಿಕೆ ಬಳಿಕ ದೊರಕಿತು. ಖಡಕ್ ಆಗಿ ಮಾತನಾಡುವ ಮಹಂತ ಸತ್ಯೇಂದ್ರದಾಸ್ ಈ ಸಂದರ್ಶನದಲ್ಲಿಯೂ ತಮ್ಮ ಕಠಿಣ ನಿಲುವನ್ನು ಬಹಿರಂಗಪಡಿಸಿದ್ದಾರೆ.

- ನಮಸ್ಕಾರ ಮಹಂತರಿಗೆ. ಜ.೨೨ ರಂದು ಶ್ರೀರಾಮನ ಪ್ರಾಣ ಪ್ರತಿಷ್ಠೆ ನಡೆಯುತ್ತಿದೆ. ೬೦ ವರ್ಷಗಳಿಂದ ನೀವು ಕಾತುರದಿಂದ ಕಾಯುತ್ತಿದ್ದ ಕ್ಷಣ ಇನ್ನೇನು ಹತ್ತಿರಲ್ಲಿದೆ. ಹೇಗನ್ನಿಸುತ್ತಿದೆ ಈಗ?

ಮೊದಲನೇಯದ್ದಾಗಿ, ನೀವು ಕರ್ನಾಟಕದಿಂದ ಬಂದಿದ್ದೀರಿ. ಅಯೋಧ್ಯೆಗೆ ಸ್ವಾಗತ.. ಕರ್ನಾಟಕ ಎಂದರೆ ಅದು ರಾಮನ ಪರಮ ಭಕ್ತನಾದ ಹನುಮಾನ್‌ನ ನಾಡು. ಅಯೋಧ್ಯೆಗೂ ಕರ್ನಾಟಕಕ್ಕೂ ಬಹಳ ನಿಕಟ ನಂಟಿದೆ. ಈ ಬೆಸುಗೆಯೇ ಇದೀಗ ರಾಮಲಲ್ಲಾ ಮೂರ್ತಿ ಕೂಡ ಕನ್ನಡನಾಡಿನವರಿಂದಲೇ ಮಾಡಿಸಿರುವುದಾಗಿದೆ.

ಇರಲಿ, ೬ ದಶಕಗಳಿಂದ ನಾನು ಕನಸು ಕಾಣುತ್ತಿದ್ದ ಸಂದರ್ಭ ಈಗ ಬರುತ್ತಿದೆ. ಅಯೋಧ್ಯೆ ಮಾತ್ರವಲ್ಲ ಭಾರತ ದೇಶವೇ ಈ ದಿನವನ್ನು ರಾಮೋತ್ಸವವಾಗಿ ಸಂಭ್ರಮಿಸುತ್ತಿದೆ. ಯಾರೆಲ್ಲಾ ಶ್ರೀರಾಮನ ಮಂದಿರಕ್ಕಾಗಿ ಪ್ರಾರ್ಥಿಸುತ್ತಿದ್ದರೋ ಅಂಥವರ ಪ್ರಾರ್ಥನೆಯ ಫಲ ಈಡೇರುತ್ತಿದೆ. ಛಳಿ, ಗಾಳಿ, ಬಿಸಿಲನ್ನೂ ಟೆಂಟ್‌ನಲ್ಲಿ ಸಹಿಸಿಕೊಂಡಿದ್ದ ಶ್ರೀರಾಮನ ಮೂರ್ತಿ ಈಗ ಭವ್ಯ ಮಂದಿರದಲ್ಲಿ ರಾಜನಂತೆ ವಿರಾಜಮಾನವಾಗುತ್ತಿದ್ದಾನೆ. ರಾಮನ ಕಷ್ಟದ ದಿನಗಳನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಈಗ ರಾಮನ ಸಂಕಷ್ಟಗಳ ವನವಾಸ ಅಂತ್ಯವಾಗುವ ಕಾಲ ಬಂದಿದೆ. ಇಂಥ ದಿನ ನನ್ನ ಜೀವಿತಾವಧಿಯಲ್ಲಿ ಬರಲಿದೆ ಎಂದು ಯೋಚಿಸಿರಲಿಲ್ಲ. ನನ್ನ ಜೀವನ ಸಾರ್ಥಕವಾಗುವ ದಿನ ಅದಾಗಲಿದೆ. .

- ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣದ ಕೀರ್ತಿ ನಿಮ್ಮ ಪ್ರಕಾರ ಯಾರದ್ದು?

ಅರ್ಥವಾಯಿತು ನಿನ್ನ ಪ್ರಶ್ನೆ.. ಯಾವ ಹಿಂದೂ ಹಗಲಿರುಳು ರಾಮಧ್ಯಾನದ ಮೂಲಕ ಶ್ರೀರಾಮನಿಗೆ ಅವನ ಹುಟ್ಟೂರಿನಲ್ಲಿಯೇ ದೇವ ಮಂದಿರ ನಿರ್ಮಾಣವಾಗಬೇಕು ಎಂದು ಪ್ರಾರ್ಥಿಸಿದ್ದನೋ ಅಂಥ ರಾಮಭಕ್ತನ ಪ್ರಾರ್ಥನೆಗೆ ಪ್ರತಿಫಲ ದೊರಕಿದೆ. ಹೀಗಾಗಿ ಪ್ರತಿಯೋರ್ವ ರಾಮಭಕ್ತನಿಗೆ ಈ ಮಂದಿರ ನಿರ್ಮಾಣದ ಯಶಸ್ಸು ಹೋಗಲೇಬೇಕು. ನೋಡು.. ಇಲ್ಲೊಂದು ವಿಷಯವಿದೆ. ಇಷ್ಟು ವರ್ಷಗಳ ಕಾಲ ಉತ್ತರ ಪ್ರದೇಶದಲ್ಲಿ, ಭಾರತದಲ್ಲಿ ಅನೇಕ ಸರ್ಕಾರಗಳು ಆಡಳಿತ ನಡೆಸಿವೆ. ಯಾವ ಸರ್ಕಾರಕ್ಕೂ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಮಾಡಬೇಕೆಂಬ ನಿರ್ಧಾರ ಕೈಗೊಳ್ಳಲು ಸಾಧ್ಯವೇ ಇರಲಿಲ್ಲ. ಆದರೆ ಮೋದಿ ಸರ್ಕಾರ ರಾಮಮಂದಿರ ನಿರ್ಮಾಣವನ್ನು ಹಠದಿಂದ, ಛಲವಾಗಿ ಸ್ವೀಕರಿಸಿತು. ಕೋರ್ಟ್ ಆದೇಶ ನೀಡಿದ ೫ ತಿಂಗಳಲ್ಲಿಯೇ ಮಂದಿರಕ್ಕೆ ಶಿಲನ್ಯಾಸ ಆಯಿತು. ಅಂದು ಘೋಷಿಸಿದ್ದಂತೆಯೇ ಮೂರು ವರ್ಷಗಳಲ್ಲಿ ಮಂದಿರ ಕೂಡ ನಿರ್ಮಾಣವಾಯಿತು. ಈಗ ಹೇಳು.. ಈ ಕ್ರೆಡಿಟ್ ಯಾರಿಗೆ ಸಲ್ಲಬೇಕು?

- ಅಂದರೆ ಮೋದಿಯಿಂದಾಗಿ ಮಂದಿರವಾಯಿತು ಅನ್ನುತ್ತಿದ್ದೀರಿ. ಹಾಗಿದ್ದರೆ ಮೋದಿ ಶ್ರೀರಾಮಮಂದಿರ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ ಅಂಥ ಅನ್ನಿಸುವುದಿಲ್ಲವೇ?

ಏಯ್.. ಯಾವುದು ರಾಜಕೀಯ.?. ನಿಮಗೆ ಪತ್ರಕರ್ತರಿಗೆ ಮಾತ್ರ ಇಂಥ ರಾಜಕೀಯದ ಸಣ್ಣತನ ವಿಚಾರಗಳು ಕಾಣುತ್ತಿದೆ. ನಿನಗೆ ಗೊತ್ತಿರಲಿ.. ರಾಜನೀತಿಯನ್ನು ರಾಜಕಾರಣಿಗಳೆಲ್ಲಾ ಪಾಲಿಸುತ್ತಾರೆ. ಅಧಿಕಾರಕ್ಕಾಗಿ ರಾಜನೀತಿ ಬಳಕೆ ರಾಜರ ಕಾಲದಿಂದಲೂ ಇದೆ. ಆದರೆ, ರಾಜನೀತಿಯನ್ನು ಮೀರಿದ ಧರ್ಮನೀತಿ ಅಂಥ ಒಂದಿದೆ. ಅದನ್ನು ಸರಿಯಾಗಿ ಪಾಲಿಸಿದವನು ಮಾತ್ರ ಧರ್ಮನೀತಿಯೊಂದಿಗೆ ರಾಜನೀತಿಯನ್ನೂ ಗೆಲ್ಲಬಲ್ಲ. ಈ ದೇಶದ ರಾಜನಾಗಿ (ಪ್ರಧಾನಿ) ಮೋದಿ ಧರ್ಮನೀತಿಯನ್ನು ಅನುಸರಿಸಿಯೇ ದೇಶದ ಜನತೆಯನ್ನು ಗೆದ್ದಿದ್ದಾರೆ. ಯಾರು ಧರ್ಮವನ್ನು ಸಂರಕ್ಷಿಸುತ್ತಾರೆಯೋ ಅಂಥವರನ್ನು ಧರ್ಮಕೂಡ ಸಂರಕ್ಷಿಸುತ್ತದೆ. ರಾಜನೀತಿ ಮತ್ತು ಧರ್ಮನೀತಿ ಎಂದರೇನು ಎಂದು ತಿಳಿದುಕೊಳ್ಳಬೇಕು. ರಾಜನೀತಿ ಅಧಿಕಾರಕ್ಕಾಗಿ ಚಲಾಯಿಸುವಂಥದ್ದು, ಧರ್ಮ ನೀತಿ ವಿಶ್ವಾಸದಿಂದ ಪ್ರಾಮಾಣಿಕತೆಯಿಂದ ದೇಶದಲ್ಲಿ ಧರ್ಮ ಸಂಸ್ಥಾಪನೆಗಾಗಿ ಜಾರಿಗೊಳಿಸುವಂಥದ್ದು. ಮೋದಿ ಅವರ ವಿಶ್ವಾಸ ಧರ್ಮನೀತಿಯಾಗಿದೆ.

- ನಿಮ್ಮ ಮಾತಿನರ್ಥ, ಮೋದಿ ಧರ್ಮನೀತಿ ಮೂಲಕ ರಾಜಕೀಯವಾಗಿ ರಾಜನೀತಿಯಲ್ಲಿಯೂ ಗೆದ್ದಿದ್ದಾರೆ ಎಂದೇ?

ಹೇಗೆ ಬೇಕಾದರೂ ಅರ್ಥ ಮಾಡಿಕೋ... ಅಯೋಧ್ಯೆ ಜನರಿಗೆ, ಇಲ್ಲಿನ ಸಾಧುಸಂತರಿಗೆ ಶ್ರೀರಾಮಮಂದಿರ ನಿರ್ಮಾಣವಾಗುವುದರ ಹಿಂದೆ ಮೋದಿ ಮತ್ತು ಯೋಗಿ ಆದಿತ್ಯ ನಾಥ್ ಎಷ್ಟೆಲ್ಲಾ ಶ್ರಮ ಪಟ್ಟಿದ್ದಾರೆ ಎಂದು ತಿಳಿದಿದೆ. ವನವಾಸದಿಂದ ರಾಮನನ್ನು ಮತ್ತೆ ರಾಜಮಂದಿರಕ್ಕೆ ಇವರೀರ್ವರೂ ಕರೆತಂದಿದ್ದಾರೆ.

- ನೀವು ಮೋದಿ ಪರವಾಗಿ ಮಾತನಾಡುತ್ತಿದ್ದೀರಿ?

ನಾನು ಮೋದಿ ಪರವಾಗಿ ಮಾತನಾಡುತ್ತಿಲ್ಲ, ನಾನು ಧರ್ಮ ಸಂರಕ್ಷಿಸಿದವನ ಪರ ಮಾತನಾಡುತ್ತಿದ್ದೇನೆ. ದೇಶದ ಜನ ಮೂರ್ಖರಲ್ಲ. ಅವರು ಎಲ್ಲವನ್ನೂ ಗಮನಿಸುತ್ತಲೇ ಇದ್ದಾರೆ, ಬರೆದಿಟ್ಟುಕೋ. ಮೋದಿ ಮೂರನೇ ಬಾರಿ ಪ್ರಧಾನಿಯಾಗಲಿದ್ದಾರೆ ನಾನು ಕೂಡ ಏನೇ ತಂತ್ರ ಮಾಡಿದರೂ ಇದನ್ನು ತಡೆಯಲಾಗುವುದಿಲ್ಲ. ಸತ್ಯೇಂದ್ರದಾಸ್.. ಶ್ರೀರಾಮ ಮಂದಿರದ ಪ್ರಧಾನ ಪುರೋಹಿತ್ ಮೋದಿ ಪರ ಎಂದು ಬರಿಯುತೀಯಾ? ಬರೆದುಕೋ.. ಶ್ರೀರಾಮ ಯಾವ ಇಚ್ಚೆಯನ್ನು ಹೊಂದುತ್ತಾನೆಯೋ ಹಾಗೇ ಆಗಲಿದೆ. ಜನರ ಇಚ್ಚೆಯೇ ರಾಮನ ಇಚ್ಚೆ ಕೂಡ ಆಗಲಿದೆ. ರಾಮಮಂದಿರ ಜನರ ಅಗತ್ಯ ಮತ್ತು ಬೇಡಿಕೆಯಾಗಿದೆ. ಹೀಗಾಗಿ ಜನರ ಬೇಡಿಕೆಯನ್ನು ಪ್ರಧಾನಿಯಾಗಿ ಯಾರೇ ಆದರೂ ಈಡೇರಿಸಬೇಕಾಗಿತ್ತು. ಮೊದಲು ಪ್ರಧಾನಿಯಾಗಿದ್ದವರ ಕಾಲದಲ್ಲಿ ದೇವಾಲಯ ನಿರ್ಮಾಣ ಆಗಲಿಲ್ಲವೇಕೆ? ಈಗ ಮಂದಿರ ನಿರ್ಮಾಣದಿಂದ . ಲಾಭ ಆಗಿದ್ದರೆ ಆ ಲಾಭ ಮೋದಿಗಲ್ಲ. ಲಾಭ ಆಗಿರುವುದು ಅಯೋಧ್ಯೆಯಂಥ ನಗರಿಗೆ ..ಮಂದಿರ ಬೇಕು ಎನ್ನುತ್ತಿದ್ದ ಹಿಂದೂಗಳಿಗೆ. ಭಾರತ ದೇಶಕ್ಕೆ..

- ಕಾಂಗ್ರೆಸ್ ಸೇರಿದಂತೆ ಕೆಲವು ಪಕ್ಷಗಳು ಶ್ರೀರಾಮಮಂದಿರವನ್ನು ಬಿಜೆಪಿ ಮಂದಿರ ಎಂದು ಟೀಕೆ ಮಾಡಿವೆ.

ಯಾರು ರಾಮನ ಅಸ್ತಿತ್ವವೇ ಇಲ್ಲ ಎಂದಿದ್ದರೋ ಅಂಥವರು ಬೇರೆ ಏನು ಹೇಳಲು ಸಾಧ್ಯವಿದೆ.? ಅಂಥವರಿಗೆ ಆಹ್ವಾನ ಕೊಟ್ಟದ್ದೇ ತಪ್ಪು ಮಂದಿರ ಉದ್ಘಾಟನೆಯಂದು ಬರುವುದಿಲ್ಲ ಎಂಬ ಕಾಂಗ್ರೆಸ್ ಪ್ರಮುಖರ ನಿರ್ಧಾರ ಸರಿಯಾಗಿದೆ. ರಾಮನೇ ಇಲ್ಲ ಎಂದಿದ್ದವರು ಆ ದೇವರನ್ನು ನೋಡಲು ಇಲ್ಲಿಗೆ ಹೇಗೆ ಬರಲು ಸಾಧ್ಯ? ಅಷ್ಟಕ್ಕೂ ದೇವಾಲಯದ ಉದ್ಘಾಟನೆಗೆ ಬರಲು ಆಹ್ವಾನ ಬೇಕೇ? ದೇವರ ದರ್ಶನ ಮಾಡಲಿಕ್ಕೆ ಯಾರು ಅನುಮತಿ ಕೊಡಬೇಕು? ಎಷ್ಟೇ ವಿರೋಧವಿರಲಿ. ಅಯೋಧ್ಯೆಯ ಜನರಿಗೆ ಮಂದಿರದ ಬಗ್ಗೆ ಸ್ಪಷ್ಟವಾಗಿ ತಿಳಿದಿದೆ. ಬೇರೆ ಯಾರೂ ಈ ಬಗ್ಗೆ ಮಾತನಾಡಲು ಅರ್ಹರಿಲ್ಲ.

- ಮೋದಿ ಪ್ರಾಣ ಪ್ರತಿಷ್ಠಾಪನೆ ಮಾಡುವುದು ಎಷ್ಟು ಸರಿ?

ಯಾರು ಹೇಳಿದ್ದು ಇಂಥವುಗಳನ್ನು? ಇದೆಲ್ಲಾ ಮಾಧ್ಯಮಗಳ ಸೃಷ್ಟಿ. ಹಿಂದೂ ವಿರೋಧಿಗಳ ಸೃಷ್ಟಿ. ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯ ಜನವರಿ ೨೨ ರಂದು ಒಂದು ದಿನ ನಡೆಯುವಂಥದ್ದಲ್ಲ. ಯಾವುದೇ ದೇವಾಲಯದಲ್ಲಿ ದೇವರ ಪ್ರತಿಷ್ಠಾಪನೆ ಕೇವಲ ಒಂದು ದಿನದಲ್ಲಿ ಮುಕ್ತಾಯವಾಗುವುದಿಲ್ಲ. ಮಂದಿರದ ಉದ್ಘಾಟನೆಯ ದೈವಿಕ ವಿಧಿಗಳು ಸಂಕ್ರಾAತಿಯAದೇ ಪ್ರಾರಂಭವಾಗಿದೆ. ೭ ದಿನಗಳ ಕಾಲ ಅನೇಕ ಹೋಮಹವನಾದಿಗಳು ನಡೆಯಲಿದೆ. ಕೊನೇ ದಿನ ಮಾತ್ರ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಈ ಸಂದರ್ಭ ಮೋದಿ ಈ ದೇಶದ ಪ್ರಧಾನಿಯಾಗಿ ಹಾಜರಿದ್ದು ಪೂಜೆ ನೆರವೇರಿಸಲಿದ್ದಾರೆ. ಯಾಕೆ ಎಲ್ಲದಕ್ಕೂ ಮೋದಿಯನ್ನು ಎಳೆದು ತರುತ್ತೀರಿ? ಭಾರತದ ಪ್ರಧಾನಿಯಾಗಿ ಮಾತ್ರವಲ್ಲ ಶ್ರೀರಾಮ ಮಂದಿರ ನಿರ್ಮಾಣದ ಪ್ರಮುಖ ಕಾರಣಕರ್ತರಾಗಿ ಮೋದಿ ಎಂಬ ಈ ದೇಶದ ಪ್ರಧಾನಿ ಹಾಜರಿರುವುದಕ್ಕೆ ವಿರೋಧವೇಕೆ? ಸಾಧ್ಯವಿದ್ದರೆ ನೀವು ಮಂದಿರ ನಿರ್ಮಾಣ ಮಾಡಬೇಕಾಗಿತ್ತು, ಅದನ್ನು ಬಿಟ್ಟು ಮಂದಿರ ನಿರ್ಮಿಸಿದ ಎಂಬ ಕಾರಣಕ್ಕೆ ಮೋದಿ ಮಂದಿರ ಎಂದು ಟೀಕಿಸುವುದು ಎಂಥ ಮೂರ್ಖತನ? ಯಾರು ಹಿಂದೂಗಳಿಗಾಗಿ ಮಂದಿರವನ್ನು ನಿರ್ಮಿಸಲು ಮುಂದಾದರೋ ಅಂಥವರನ್ನು ಟೀಕಿಸುತ್ತಿರುವ ಮನಸ್ಸುಗಳನ್ನು ನಾನು ಒಪ್ಪುವುದಿಲ್ಲ. ಇದು ಹಿಂದೂಗಳು ಮಾತ್ರವಲ್ಲ ಅನೇಕ ಮಸ್ಲಿಮರೂ ಸೇರಿದಂತೆ ವಿವಿಧ ಧರ್ಮೀಯರು ದೇಣಿಗೆ ನೀಡಿ ನಿರ್ಮಿಸಲಾದ ಮಂದಿರವೇ ಹೊರತು ಯಾರಿಂದಲೂ ಆದ ಮಂದಿರವೇನಲ್ಲ. ಇಲ್ಲಿ ಎಲ್ಲರಿಗೂ ಭಕ್ತರಾಗಿ ಬರಲು ಅವಕಾಶವಿದೆ.

- ಚುನಾವಣೆ ಹಿನ್ನೆಲೆಯಲ್ಲಿ ಶ್ರೀರಾಮಮಂದಿರ ಉದ್ಘಾಟನೆಯನ್ನು ತರಾತುರಿಯಿಂದ ಮಾಡಲಾಗುತ್ತಿದೆ. ಮಂದಿರ ನಿರ್ಮಾಣ ಇನ್ನೂ ಮುಗಿದೇ ಇಲ್ಲ ಎಂಬ ಆರೋಪ ಇದೆ?

ನೀನು ಮನೆ ಕಟ್ಟಿದ್ದೀಯಾ? ಹೇಳು.. ಮನೆ ಕಟ್ಟಿದ ಸಂದರ್ಭ ಎಲ್ಲವನ್ನೂ ಒಟ್ಟಿಗೆ ಮುಗಿಸಿಯೇ ಮನೆ ಸೇರ್ಪಡೆಯಾದೆಯಾ? ಒಂದು ಹಂತ ಅಂಥ ಇರುತ್ತದೆ. ಹಾಗೇ ಮಂದಿರ ಕೂಡ. ಮೊದಲ ಹಂತದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಗೆ ಬೇಕಾದ ಕೆಲಸಗಳು ಮುಕ್ತಾಯವಾಗಿದೆ. ನಂತರ ವಿವಿಧ ಹಂತಗಳ ಕೆಲಸ ನಡೆಯಲಿದೆ. ಎಲ್ಲವನ್ನೂ ಮಾಡಿದ ಬಳಿಕವೇ ಮಂದಿರ ಉದ್ಘಾಟನೆಯಾಗಬೇಕು ಎಂದರೆ ಅನೇಕ ಜನರು ಆ ಸಂದರ್ಭ ಜೀವಂತ ಇರಲಿಕ್ಕಿಲ್ಲ. ಯಾಕೆ? ಅಂಥವರು ಮಂದಿರ ಲೋಕಾರ್ಪಣೆ ನೋಡುವುದು ಟೀಕಾಕಾರರಿಗೆ ಇಷ್ಟವಿಲ್ಲವೇ? ಸುಮ್ಮನೆ ಟೀಕೆ ಮಾಡುವುದು ಬಿಡಿ. ಮೊದಲು ಮಂದಿರಕ್ಕೆ ಬಂದು ಶ್ರೀರಾಮಲಲ್ಲಾನಿಗೆ ಮನಪೂರ್ವಕವಾಗಿ ಪೂಜೆ ಸಲ್ಲಿಸಿ.

- ಅಯೋಧ್ಯೆಯ ಶ್ರೀರಾಮ ಬಿಜೆಪಿ ರಾಮ ಎಂಬ ಟೀಕೆಯಿದೆ. ?

ಶ್ರೀರಾಮನ ಬಗ್ಗೆ ತಿಳಿಯದವರು ಹೀಗೆಲ್ಲಾ ಮಾತನಾಡುತ್ತಾರೆ. ಶ್ರೀರಾಮ ಎಲ್ಲರಿಗೂ ಸೇರಿದ ದೇವರು. ಶ್ರೀರಾಮ ಬಿಜೆಪಿಯವರಿಗೂ, ಕಾಂಗ್ರೆಸ್‌ನವರಿಗೂ, ಸಮಾಜವಾದಿ ಪಾರ್ಟಿಯವರಿಗೂ, ಶಿವಸೈನಿಕರಿಗೂ ಸೇರಿದ ದೇವರು.. ಶ್ರೀರಾಮ ಯಾವುದೇ ರಾಜಕೀಯ ಪಕ್ಷಗಳ ದೇವರಲ್ಲ. ಶ್ರೀರಾಮ ಜನರಿಗೆ ಸೇರಿದ ದೇವರು. ಅರ್ಥವಾಯಿತೇ? ನಾನು ದೇವಾಲಯದ ಅರ್ಚಕ, ನೀನು ಪತ್ರಕರ್ತ, ನಮ್ಮಿಬ್ಬರದ್ದೂ ಒಂದೇ ರೀತಿಯ ಕೆಲಸ. ಹೇಗೆ ಅಂತೀಯಾ? ಪತ್ರಿಕೆಯಲ್ಲಿ ಎಲ್ಲಾ ರೀತಿಯ ಸುದ್ದಿಗಳನ್ನು ಮುದ್ರಣ ಮಾಡುತ್ತೀರಿ. ನೀವು ಆ ಪಾರ್ಟಿ ಈ ಪಾರ್ಟಿ ಸುದ್ದಿ ಅಂಥ ತಾರತಮ್ಯ ಮಾಡೋದಿಲ್ಲ. ನಾನು ಕೂಡ ಹಾಗೇ, ಶ್ರೀರಾಮ ಮಂದಿರಕ್ಕೆ ಎಲ್ಲಾ ರೀತಿಯ ಜನ ಬರುತ್ತಾರೆ. ಹೀಗೆ ಬಂದ ಜನರನ್ನು ನೀವು ಬಿಜೆಪಿಯಾ, ಕಾಂಗ್ರೆಸಾ ಅಂತೆಲ್ಲಾ ಕೇಳೋದಿಲ್ಲ. ಭಕ್ತಿಯಿಂದ ಬಂದು ಕೈ ಮುಗಿಯುವ ಭಕ್ತನಿಗೆ ನಾನು ಆರತಿ ನೀಡಿ ಶ್ರೀರಾಮನಿಗೆ ಅವರ ಪರವಾಗಿ ಪ್ರಾರ್ಥಿಸುತ್ತೇನೆ. ಅಷ್ಟೇ ನನ್ನ ಕೆಲಸ. ಟೀಕಿಸುವವರು ಎಲ್ಲಾ ಕಾಲದಲ್ಲಿ ಇರುತ್ತಾರೆ, ಮುಂದೆಯೂ ಇರುತ್ತಾರೆ, ರಾಮಲಲ್ಲಾನೇ ಎಲ್ಲದಕ್ಕೂ ಎಲ್ಲರಿಗೂ ಉತ್ತರಿಸುತ್ತಾನೆ. ಪ್ರೇಮದಿಂದ ಶ್ರೀರಾಮನನ್ನು ಆರಾಧಿಸಿ, ರಾಮನ ಬಳಿ ಬನ್ನಿ, ರಾಮನ ಬಳಿಗೆ ಬರಲಿಕ್ಕೆ ರಾಜಕೀಯ ಬೇಡ.

- ಶ್ರೀರಾಮನ ಪ್ರತಿಷ್ಠಾಪನೆ ಬಳಿಕ ಭವಿಷ್ಯ ಹೇಗಿರುತ್ತೆ?

ದೇಶದಲ್ಲಿ ಸಾಕಷ್ಟು ಉತ್ತಮವಾದ ಪರಿವರ್ತನೆ ಸಂಕ್ರಾAತಿ ಬಳಿಕ ಆಗಲಿದೆ. ಮಂದಿರ ನಿರ್ಮಾಣದ ಉತ್ತಮ ಅಂಶಗಳು ಮುಂದಿನ ದಿನಗಳಲ್ಲಿ ಗೋಚರವಾಗಲಿದೆ. ಯಾರು ಭಾರತದ ಭವಿಷ್ಯವನ್ನು ಅದ್ಭ್ಬುತವಾಗಿ ಯೋಚಿಸಿದ್ದಾರೆಯೋ ಅಂಥವರ ನಂಬಿಕೆ ನಿಜವಾಗಲಿದೆ. ನಿಜವಾದ ರಾಮರಾಜ್ಯದ ದಿನಗಳು ಬರಲಿದೆ. ಸೂರ್ಯಚಂದ್ರರAತೆ ನನ್ನ ಮಾತು ಸತ್ಯವಾಗುತ್ತದೆ .

- ಧನ್ಯವಾದ ಮಹಂತ್ ಜೀ. ಕೊಡಗು ಎಂಬ ನನ್ನ ಪುಟ್ಟ ಜಿಲ್ಲೆಯಲ್ಲಿ ಉಗಮವಾಗುವ ಕಾವೇರಿಯ ತೀರ್ಥ ಕೂಡ ಶ್ರೀರಾಮನಿಗೆ ಪ್ರೋಕ್ಷಣೆಯಾಗಲಿದೆ. ನೀವೂ ಒಮ್ಮೆ ತಲಕಾವೇರಿಗೆ ಬರಬೇಕು. ಕೊಡಗಿನ ಜನತೆಯ ಪರವಾಗಿ ಇದು ಆಹ್ವಾನ.

ಖಂಡಿತಾ ಪ್ರಯತ್ನಿಸುವೆ. ಹನುಮಾನ್ ನಾಡಿನವರಾಗಿ ಕರ್ನಾಟಕ ರಾಜ್ಯದ ಜನರೂ ಶ್ರೀರಾಮನ ಪಾದಸ್ಪರ್ಷಕ್ಕಾಗಿ ಅಯೋಧ್ಯೆಗೆ ಬನ್ನಿ.

ಚಿತ್ರಗಳು - ರೀನಾ ಅನಿಲ್ ಎಚ್.