ಮಡಿಕೇರಿ, ಜ. ೧೭: ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆ ಗಳನ್ನು ಪರಿಣಾಮಕಾರಿ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡ ಲಾಗುವುದು ಎಂದು ಭಾರತೀಯ ಜನತಾ ಪಕ್ಷದ ಕೃಷಿ ಮೋರ್ಚಾದ ನೂತನ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ಮಡಿಕೇರಿಯ ಖ್ಯಾತ ಮಕ್ಕಳ ತಜ್ಞ ಡಾ. ಬಿ.ಸಿ. ನವೀನ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

ಈ ಕುರಿತು ‘ಶಕ್ತಿ’ಯೊಂದಿಗೆ ಮಾತನಾಡಿದ ಅವರು, ಸಾಮಾನ್ಯ ಕಾರ್ಯಕರ್ತನಾಗಿ ಬಂದ ತನಗೆ ರಾಜ್ಯ ಮೋರ್ಚಾದಲ್ಲಿ ಅವಕಾಶ ನೀಡಿರುವುದು ಸಂತಸ ತಂದಿದೆ. ಕಳೆದ ಅವಧಿಯಲ್ಲಿ ಕಾರ್ಯದರ್ಶಿಯಾಗಿದ್ದ ಸಂದರ್ಭ ಕೃಷಿ ಮೋರ್ಚಾದಲ್ಲಿ ಮಾಡಿದ ಕೆಲಸ ಪರಿಗಣಿಸಿ ಉನ್ನತ ಸ್ಥಾನ ದೊರತಿದೆ. ಕೇಂದ್ರ ಸರಕಾರ ೨೦೨೬ರ ವೇಳೆಗೆ ೧೦ ಸಾವಿರ ರೈತ ಉತ್ಪಾದಕ ಸಂಸ್ಥೆಗಳನ್ನು ಸೃಷ್ಟಿಸಬೇಕೆಂಬ ಗುರಿ ಯನ್ನು ಕೇಂದ್ರ ಸರಕಾರ ಹೊಂದಿತ್ತು. ಇದರ ಭಾಗವಾಗಿ ತಾನು ಕಾರ್ಯದರ್ಶಿ ಯಾಗಿದ್ದ ಅವಧಿಯಲ್ಲಿ ಶ್ರಮಿಸಿದ್ದೇನೆ. ೩೧ ಕಂದಾಯ ಜಿಲ್ಲೆಗಳಿಗೆ ಪ್ರವಾಸ ಕೈಗೊಂಡು ಅಧ್ಯಯನ ನಡೆಸಿ ರೈತರ ಮನ ಪರಿವರ್ತಿಸಿ, ಸಂಸ್ಥೆಗಳ ಸ್ಥಾಪನೆ ಯಿಂದಾಗುವ ಸದುಪಯೋಗಗಳ ಬಗ್ಗೆ ಜಾಗೃತಿ ಮೂಡಿಸಿ ರಾಜ್ಯದಲ್ಲಿದ್ದ ೩೦೪ ರೈತ ಉತ್ಪಾದಕ ಸಂಸ್ಥೆಗಳನ್ನು ೧೦೮೫ಕ್ಕೆ ಏರಿಸಿದ ಖುಷಿಯ ಜೊತೆಗೆ ರೈತಾಪಿ ವರ್ಗದ ಮತದಾರರನ್ನು ಸೆಳೆಯಲಾಗಿದೆ ಎಂದು ತಿಳಿಸಿದರು.

ರೈತರ ಧ್ವನಿಯಾಗಿ ಕೆಲಸ

ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಥಾನವನ್ನು ಬಳಸಿಕೊಂಡು ಕೇಂದ್ರ ಹಾಗೂ

(ಮೊದಲ ಪುಟದಿಂದ) ರಾಜ್ಯದ ರೈತಪರ ಯೋಜನೆಗಳನ್ನು ಪರಿಣಾಮಕಾರಿ ಯಾಗಿ ಅನುಷ್ಠಾನ ಮಾಡಲಾಗುವುದು. ತನ್ನ ವ್ಯಾಪ್ತಿಗೆ ಬರುವ ೨೨ ಜಿಲ್ಲೆಗಳಲ್ಲಿ ರೈತರ ಧ್ವನಿಯಾಗಿ ಕೆಲಸ ಮಾಡುವೆ ಎಂದು ಡಾ. ನವೀನ್ ತಮ್ಮ ಗುರಿಯ ಬಗ್ಗೆ ಹೇಳಿಕೊಂಡರು.

ರೈತರ ಸಮಸ್ಯೆಗಳಿಗೆ ಹೋರಾಟದ ಮೂಲಕ ಪರಿಹಾರ ದೊರಕಿಸಿಕೊಡಬೇಕಾಗಿದೆ. ಈ ಹಿನ್ನೆಲೆ ಪ್ರತಿ ಗ್ರಾಮಮಟ್ಟದಲ್ಲಿ ಓರ್ವ ಪುರುಷ ಹಾಗೂ ಮಹಿಳೆಗೆ ಜವಾಬ್ದಾರಿ ನೀಡಿ ಅವರಿಗೆ ಸೂಕ್ತ ತರಬೇತಿ ನೀಡಿ ಅವರಿಂದ ಯೋಜನೆಗಳನ್ನು ರೈತರಿಗೆ ತಲುಪಿಸುವ ಕೆಲಸ ಮಾಡಲಾ ಗುವುದು. ರೈತರ ಆರ್ಥಿಕ ಹಾಗೂ ಸಾಮಾಜಿಕವಾಗಿ ಸ್ವಾವಲಂಬಿ ಗಳಾಗುವಂತೆ ಮಾಡುವುದು ನಮ್ಮ ಉದ್ದೇಶವಾಗಿದೆ. ಮೋರ್ಚಾದ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಎ.ಎಸ್. ಪಾಟೀಲ್ ನರಹಳ್ಳಿ ಅವರ ಮಾರ್ಗದರ್ಶನ, ಜಿಲ್ಲೆಗಳ ಪ್ರಮುಖರು, ಅಲ್ಲಿನ ಮಾಜಿ-ಹಾಲಿ ಶಾಸಕರ ಸಲಹೆಗಳನ್ನು ಪಡೆದು ಮುನ್ನಡೆಯಲಾಗುವುದು ಎಂದು ವಿವರಿಸಿದರು.

೨೦೧೦ರಲ್ಲಿ ಪಕ್ಷದ ಸದಸ್ಯರಾಗಿ ಸೇರ್ಪಡೆಗೊಂಡ ಡಾ. ಬಿ.ಸಿ. ನವೀನ್ ಕುಮಾರ್ ಅವರು ೨೦೧೬ರಲ್ಲಿ ವೈದ್ಯಕೀಯ ಪ್ರಕೋಷ್ಠದ ಕೊಡಗು ಜಿಲ್ಲಾ ಸಂಚಾಲಕರಾಗಿ, ೨೦೧೭ರಲ್ಲಿ ವಿಭಾಗೀಯ ಸಂಚಾಲಕರಾಗಿ, ೨೦೨೦ರಲ್ಲಿ ಕೃಷಿ ಮೋರ್ಚಾದ ರಾಜ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ಮಡಿಕೇರಿಯಲ್ಲಿರುವ ಶ್ರೀರಾಜರಾಜೇಶ್ವರಿ ಆಸ್ಪತ್ರೆಯ ಮುಖ್ಯಸ್ಥರಾಗಿರುವ ಇವರು ಮಕ್ಕಳ ತಜ್ಞರಾಗಿ ಪ್ರಖ್ಯಾತಿ ಗಳಿಸಿದ್ದಾರೆ.