ಮಡಿಕೇರಿ, ಜ. ೧೭: ವಿಶೇಷಚೇತನರಿಗೆ ರಾಜ್ಯಾದ್ಯಂತ ಬಸ್ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕೊಡಗು ಜಿಲ್ಲಾ ವಿಶೇಷಚೇತನರ ಸಂಘದಿAದ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಯಿತು.
ನಗರದ ಜಿಲ್ಲಾ ಪಂಚಾಯಿತಿ ಭವನದ ಮುಂಭಾಗ ಜಮಾಯಿಸಿದ ಸಂಘದ ಪ್ರಮುಖರು ಹಾಗೂ ಪದಾಧಿಕಾರಿಗಳು ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿದರು.
ಈ ಸಂದರ್ಭ ಮಾತನಾಡಿದ ಜಿಲ್ಲಾ ಜಿಲ್ಲಾ ವಿಶೇಷಚೇತನರ ಸಂಘದ ಅಧ್ಯಕ್ಷ ಜೆ.ಎ. ಮಹದೇಶ್ವರ, ಸರಕಾರ ವಿಶೇಷಚೇತನರನ್ನು ಮರೆಯುತ್ತಿದ್ದು, ವಿಶೇಷಚೇತನರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ವಿಫಲವಾಗಿದೆ. ತಕ್ಷಣವೇ ಕಾಯಂ ಹಾಗೂ ಸೇವಾ ಭದ್ರತೆ ಒದಗಿಸಬೇಕು. ಸಮಯಕ್ಕೆ ಸರಿಯಾಗಿ ಗೌರವಧನ ನೀಡಬೇಕು. ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಮತ್ತು ಔಷಧ ದೊರೆಯುವಂತೆ ಮಾಡಬೇಕು. ರೂ. ೫ ಸಾವಿರ ಮಾಸಿಕ ಭತ್ಯೆ, ವಸತಿ ವ್ಯವಸ್ಥೆ, ವಿಶೇಷಚೇತನರಿಗೆ ಪ್ರತ್ಯೇಕ ಬಿ.ಪಿ.ಎಲ್. ಕಾರ್ಡ್ ನೀಡಬೇಕು ಎಂದು ಒತ್ತಾಯಿಸಿದರು.
ಸಂಘದ ಕಾರ್ಯದರ್ಶಿ ತಿರುಮಲ್ಲೇಶ್ವರ್, ನಿರ್ದೇಶಕರಾದ ಕೆ.ಎಂ. ಹಸ್ಸನ್, ವೀಣಾ, ಹರೀಶ್, ಜಯ ಕುಮಾರ್, ಮಿಲನ್ ಮತ್ತಿತರರು ಪಾಲ್ಗೊಂಡಿದ್ದರು.