ಎಸ್.ಸಿ. ಒಳ ಮೀಸಲಾತಿ ಜಾರಿ - ಕೇಂದ್ರಕ್ಕೆ ಶಿಫಾರಸು ಮಾಡಲು ನಿರ್ಧಾರ
ಬೆಂಗಳೂರು, ಜ. ೧೮: ಪರಿಶಿಷ್ಟ ಜಾತಿಗೆ (ಎಸ್ಸಿ) ಒಳ ಮೀಸಲಾತಿ ಕಲ್ಪಿಸುವ ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಈ ಕುರಿತು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಪರಿಶಿಷ್ಟ ಜಾತಿಯಲ್ಲಿರುವ ವಿವಿಧ ಸಮುದಾಗಳಿಗೆ ಒಳ ಮೀಸಲಾತಿ ಕಲ್ಪಿಸಲು ಸಂವಿಧಾನಕ್ಕೆ ತಿದ್ದುಪಡಿ ತರುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲು ಒಪ್ಪಿಗೆ ಸೂಚಿಸಲಾಗಿದೆ. ಸಂಪುಟ ಸಭೆ ಬಳಿಕ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಚಿವರಾದ ಹೆಚ್.ಕೆ. ಪಾಟೀಲ್ ಹಾಗೂ ಹೆಚ್.ಸಿ. ಮಹಾದೇವಪ್ಪ ಅವರು, ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ಕಲ್ಪಿಸುವ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಬಗ್ಗೆ ವಿವರಿಸಿದರು.
ಗೃಹಜ್ಯೋತಿ ಯೋಜನೆಯಲ್ಲಿ ಬದಲಾವಣೆ
ಬೆಂಗಳೂರು, ಜ. ೧೮: ಉಚಿತ ವಿದ್ಯುತ್ ಯೋಜನೆ ಗೃಹಜ್ಯೋತಿ ನಿಯಮದಲ್ಲಿ ರಾಜ್ಯ ಸರ್ಕಾರ ಮಹತ್ವದ ಬದಲಾವಣೆ ಮಾಡಿದ್ದು, ವಾರ್ಷಿಕ ಸರಾಸರಿ ಬಳಕೆಯ ಮೇಲೆ ಹೆಚ್ಚುವರಿ ಶೇ.೧೦ ರಷ್ಟು ಉಚಿತ ವಿದ್ಯುತ್ ನೀಡುವ ಮಾನದಂಡವನ್ನು ೧೦ ಯೂನಿಟ್ಗೆ ಬದಲಾಯಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೆ.ಜೆ. ಜಾರ್ಜ್ ಅವರು, ಗೃಹಜ್ಯೋತಿ ಯೋಜನೆಯಡಿ ೨೦೦ ಯೂನಿಟ್ ವಿದ್ಯುತ್ ಉಚಿತ ಅಂತಾ ಹೇಳಿದ್ವಿ. ಇದರನ್ವಯ ವಾರ್ಷಿಕ ಸರಾಸರಿ ಮೇಲೆ ಶೇ. ೧೦ ರಷ್ಟು ವಿದ್ಯುತ್ ಹೆಚ್ಚು ಬಳಕೆ ಮಾಡಲು ಗ್ರಾಹಕರಿಗೆ ಅವಕಾಶ ನೀಡಲಾಗಿತ್ತು. ಕೇವಲ ೨೦, ೩೦, ೪೦ ಯೂನಿಟ್ ಬಳಕೆ ಮಾಡುವ ಗ್ರಾಹಕರಿಗೆ ಶೇ. ೧೦ ರಷ್ಟು ಹೆಚ್ಚುವರಿ ಯೂನಿಟ್ ಅಂದರೆ ಕಡಿಮೆ ವಿದ್ಯುತ್ ಸಿಗುತ್ತಿದೆ. ಹೀಗಾಗಿ ೪೮ ಯೂನಿಟ್ ಒಳಗೆ ಉಪಯೋಗ ಮಾಡುವ ಗ್ರಾಹಕರಿಗೆ ಶೇ. ೧೦ ರಷ್ಟು ವಿದ್ಯುತ್ ಬದಲಾಗಿ ೧೦ ಯೂನಿಟ್ ಹೆಚ್ಚುವರಿ ನೀಡಲು ಕ್ಯಾಬಿನೆಟ್ ಒಪ್ಪಿಗೆ ನೀಡಿದೆ ಎಂದರು.
ದೋಣಿ ಮುಳುಗಿ ೧೨ ವಿದ್ಯಾರ್ಥಿಗಳು - ೨ ಶಿಕ್ಷಕರು ಸಾವು
ಅಹಮದಾಬಾದ್, ಜ. ೧೮: ಗುಜರಾತ್ನ ವಡೋದರಾದ ಹರಣಿ ಸರೋವರದಲ್ಲಿ ದೋಣಿ ಮುಳುಗಿ ೧೨ ಶಾಲಾ ಮಕ್ಕಳು ಮತ್ತು ಇಬ್ಬರು ಶಿಕ್ಷಕರು ಸೇರಿದಂತೆ ಒಟ್ಟು ೧೪ ಜನ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ದೋಣಿಯಲ್ಲಿ ನ್ಯೂ ಸನ್ರೈಸ್ ಶಾಲೆಯ ೨೭ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು ಮತ್ತು ಅವರಲ್ಲಿ ಯಾರೂ ಲೈಫ್ ಜಾಕೆಟ್ಗಳನ್ನು ಧರಿಸಿರಲಿಲ್ಲ. ಉಳಿದ ವಿದ್ಯಾರ್ಥಿಗಳ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೋಣಿಯಲ್ಲಿ ೨೭ ಮಕ್ಕಳಿದ್ದರು, ನಾವು ಇತರರನ್ನು ಪತ್ತೆಹಚ್ಚಲು ಮತ್ತು ರಕ್ಷಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ವಡೋದರಾ ಜಿಲ್ಲಾಧಿಕಾರಿ ಎ.ಬಿ. ಗೋರ್ ಅವರು ಹೇಳಿದ್ದಾರೆ. ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ದುರಂತದ ನಂತರ ಸಂತಾಪ ಸೂಚಿಸಿದ್ದು, ಪ್ರಾಣ ಕಳೆದುಕೊಂಡ ಅಮಾಯಕ ಮಕ್ಕಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ರಾಮಮಂದಿರ ಲೋಕಾರ್ಪಣೆ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ
ದೆಹಲಿ, ಜ. ೧೮: ಶ್ರೀ ರಾಮಮಂದಿರ ಉದ್ಘಾಟನಾ ಮಹೋತ್ಸವಕ್ಕೆ ಕೇವಲ ನಾಲ್ಕು ದಿನ ಇರುವಂತೆಯೇ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರ ಲೋಕಾರ್ಪಣೆ ಸ್ಮರಣಾರ್ಥ ವಿಶೇಷ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದರು. ಜಗತ್ತಿನಾದ್ಯಂತ ಶ್ರೀರಾಮನ ಕುರಿತು ಬಿಡುಗಡೆ ಮಾಡಿರುವ ಅಂಚೆ ಚೀಟಿಗಳ ಪುಸ್ತಕ ರಾಮಾಯಣವನ್ನೂ ಅವರು ಬಿಡುಗಡೆ ಮಾಡಿದರು. ಬಿಡುಗಡೆಗೊಂಡಿರುವ ಆರು ಅಂಚೆ ಚೀಟಿಗಳು ರಾಮಾಯಣದ ಪ್ರಮುಖ ವ್ಯಕ್ತಿಗಳು ಮತ್ತು ಅಂಶಗಳನ್ನು ಪ್ರತಿನಿಧಿಸುತ್ತವೆ. ಇವುಗಳಲ್ಲಿ ರಾಮ ಮಂದಿರ, ಗಣೇಶ, ಹನುಮಂತ, ಜಟಾಯು, ಕೇವತ್ರಾಜ್ ಮತ್ತು ಶಬರಿ ಸೇರಿವೆ.
ಕೇಂದ್ರ ಸರ್ಕಾರಿ ಕಚೇರಿಗಳಿಗೆ ಅರ್ಧ ದಿನ ರಜೆ
ನವದೆಹಲಿ, ಜ. ೧೮: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ತಾ. ೨೨ ರಂದು ದೇಶದಾದ್ಯಂತ ಎಲ್ಲಾ ಕೇಂದ್ರ ಸರ್ಕಾರಿ ಕಚೇರಿಗಳಿಗೆ ಅರ್ಧ ದಿನ ರಜೆ ಘೋಷಿಸಿ ಕೇಂದ್ರ ಸಿಬ್ಬಂದಿ ಸಚಿವಾಲಯ ಗುರುವಾರ ಆದೇಶ ಹೊರಡಿಸಿದೆ. ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯನ್ನು ದೇಶದಾದ್ಯಂತ ೨೨ನೇ ಜನವರಿ ೨೦೨೪ ರಂದು ಆಚರಿಸಲಾಗುತ್ತಿದೆ. ನೌಕರರು ಸಹ ಈ ಸಂಭ್ರಮದಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ದೇಶಾದ್ಯಂತ ಎಲ್ಲಾ ಕೇಂದ್ರ ಸರ್ಕಾರಿ ಕಚೇರಿಗಳು, ಕೇಂದ್ರ ಸಂಸ್ಥೆಗಳು ಮತ್ತು ಕೇಂದ್ರ ಕೈಗಾರಿಕಾ ಸಂಸ್ಥೆಗಳ ನೌಕರರಿಗೆ ಅರ್ಧ ದಿನ ರಜೆ ನೀಡಲು ನಿರ್ಧರಿಸಲಾಗಿದೆ. ೨೦೨೪ ರ ಜನವರಿ ೨೨ ರಂದು ಮಧ್ಯಾಹ್ನ ೨.೩೦ ರವರೆಗೆ ರಜೆ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.