ಸೋಮವಾರಪೇಟೆ, ಜ. ೧೭: ಹಿರಿಯ ಸಾಹಿತಿ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ಎಸ್.ಸಿ. ರಾಜಶೇಖರ್ ನಿಧನ ಹೊಂದಿದ ಹಿನ್ನೆಲೆಯಲ್ಲಿ ಗೌರವಾರ್ಥ ಪಟ್ಟಣದ ವಿವಿಧ ಸಂಘ-ಸAಸ್ಥೆಗಳ ವತಿಯಿಂದ ಶನಿವಾರ ಸಂಜೆ ಪತ್ರಿಕಾಭವನದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.
ಕನ್ನಡ ಸಾಹಿತ್ಯ ಕೃಷಿಗೆ ರಾಜಶೇಖರ್ ಅವರ ಸೇವೆ ಅಪಾರವಾದುದು ಎಂದು ಗಣ್ಯರು ನೆನೆದರು. ಕನ್ನಡ ಶಿಕ್ಷಕರಾಗಿದ್ದ ಅವರ ಅನೇಕ ಶಿಷ್ಯರು ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ ಎಂದು ಹೇಳಿದರು.
ಶಿಸ್ತಿಗೆ ಹೆಸರಾಗಿದ್ದ ಅವರು, ಬಡ ವಿದ್ಯಾರ್ಥಿಗಳಿಗೆ ಸಹಕಾರ ನೀಡುತ್ತಿದ್ದರು. ಸೋಮವಾರಪೇಟೆ ನಿವೃತ್ತ ಸರ್ಕಾರಿ ನೌಕರರ ಸಂಘದ ಸ್ಥಾಪಕ ಅಧ್ಯಕ್ಷರಾಗಿ ೧೫ ವರ್ಷ ಸೇವೆ ಸಲ್ಲಿಸಿದ್ದಾರೆ ಎಂದು ಸಂಘದ ಹಾಲಿ ಅಧ್ಯಕ್ಷ ಸಿ.ಕೆ. ಮಲ್ಲಪ್ಪ ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಡಿ. ವಿಜೇತ್, ನಗರ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್. ಮಹೇಶ್, ಅಟೋ ಚಾಲಕರ ಸಂಘದ ಅಧ್ಯಕ್ಷ ಗಂಗಾಧರ್, ಮಹಿಳಾ ಸಮಾಜದ ಅಧ್ಯಕ್ಷೆ ಸುಮಾ ಸುದೀಪ್ ಮತ್ತಿತರ ಗಣ್ಯರು ಇದ್ದರು.