ವೀರಾಜಪೇಟೆ, ಜ. ೧೭: ಬೇಟೋಳಿ ಗ್ರಾಮದ ರಾಮನಗರದಲ್ಲಿರುವ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮಕರ ಸಂಕ್ರಾAತಿ ಪ್ರಯುಕ್ತ ಅಯ್ಯಪ್ಪ ಮಹೋತ್ಸವ ಹಾಗೂ ಮಕರ ಜ್ಯೋತಿ ಪೂಜೆ ನಡೆಯಿತು.

ದೇವಸ್ಥಾನದ ಪ್ರಧಾನ ಅರ್ಚಕರಾದ ವಿಶ್ವನಾಥ್ ಭಟ್ ಹಾಗೂ ವಾಮನಮೂರ್ತಿ ಭಟ್ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಬೆಳಿಗ್ಗೆ ದೇವತಾ ಪ್ರಾರ್ಥನೆ, ಶ್ರೀ ಮಹಾಗಣಪತಿ ಹೋಮ, ಗಣಪತಿ, ಶ್ರೀ ನಾಗ, ವನದುರ್ಗೆ ದೇವರುಗಳಿಗೆ ವಿಶೇಷ ಪ್ರಾರ್ಥನೆ ಹಾಗೂ ಪೂಜೆಯನ್ನು ಸಲ್ಲಿಸಲಾಯಿತು. ತದನಂತರ ಬೇಟೋಳಿ ಮಹಿಳಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ ಜರುಗಿತು. ಶ್ರೀ ಅಯ್ಯಪ್ಪ ಸ್ವಾಮಿಗೆ ಪುಷ್ಪಾರ್ಚನೆ, ಭಸ್ಮಾರ್ಚನೆ, ತುಪ್ಪಾಭಿಷೇಕ, ಹಾಲಿನ ಅಭಿಷೇಕ ನೆರವೇರಿಸಿ ಮಂಟಪದಲ್ಲಿ ಶ್ರೀ ಅಯ್ಯಪ್ಪ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಯಿತು.

ಮಧ್ಯಾಹ್ನ ಮಹಾಪೂಜೆ ಹಾಗೂ ಪ್ರಸಾದ ವಿತರಣೆ ಬಳಿಕ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.

ಸಂಜೆ ಅಯ್ಯಪ್ಪ ವ್ರತಧಾರಿಗಳಿಂದ ಭಜನೆ ಮತ್ತು ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ಸಭಾಂಗಣದಲ್ಲಿ ಎಲ್.ಈ.ಡಿ. ಪರದೆ ಮೂಲಕ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತಿ ಪ್ರಧಾನ ಚಲನಚಿತ್ರ ಮಾಳಿಕಪುರಂನ್ನು ಪ್ರದರ್ಶಿಸಲಾಯಿತು.

ಮಕರ ಜ್ಯೋತಿ ಪೂಜೆಯನ್ನು ನಡೆಸಲಾಯಿತು. ಅಯ್ಯಪ್ಪ ಸ್ವಾಮಿಗೆ ವಿಶೇಷ ಸೇವೆಗಳು ನಡೆದವು. ಮಹಾಮಂಗಳಾರತಿ ಬಳಿಕ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆಯಿತು.