ಶ್ರೀಮAಗಲ, ಜ. ೧೬: ಜನವರಿ ತಿಂಗಳಲ್ಲಿ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಯಿಂದ ಕಾಫಿ ಬೆಳೆಗೆ ಉಂಟಾಗಿರುವ ಹಾನಿಯ ಸಮೀಕ್ಷೆ ನಡೆಸಲು ಕೊಡಗು ಬೆಳೆಗಾರ ಒಕ್ಕೂಟ ಮನವಿ ಮಾಡಿದ ಹಿನ್ನೆಲೆ ಭಾರತೀಯ ಕಾಫಿ ಮಂಡಳಿಯಿAದ ಕಾಫಿ ಬೆಳೆ ನಷ್ಟದ ಸಮೀಕ್ಷೆಯನ್ನು ಆರಂಭಿಸಲಾಗಿದೆ.
ಕೊಡಗು ಬೆಳೆಗಾರ ಒಕ್ಕೂಟದ ನಿಯೋಗ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಮತ್ತು ಶಾಸಕರಾದ ಎ .ಎಸ್. ಪೊನ್ನಣ್ಣ ಹಾಗೂ ಜಿಲ್ಲಾಧಿಕಾರಿ ವೆಂಕಟ್ರಾಜಾ ಅವರನ್ನು ಭೇಟಿ ಮಾಡಿ ಬೆಳೆ ಹಾನಿಯ ಸಮೀಕ್ಷೆ ನಡೆಸಲು ಮನವಿ ಮಾಡಿತ್ತು.
ಈ ಹಿನ್ನೆಲೆಯಲ್ಲಿ ಕಾಫಿ ಮಂಡಳಿಯ ವಿವಿಧ ಅಧಿಕಾರಿಗಳ ತಂಡ ಕಾಫಿ ತೋಟಗಳಿಗೆ ತೆರಳಿ ಕಾಫಿ ಬೆಳೆ ಹಾನಿಯಾಗಿರುವ ಬಗ್ಗೆ ಸಮೀಕ್ಷೆ ಕೈಗೊಂಡಿದೆ. ಮಂಗಳವಾರ ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಣಗೇರಿ, ಹೈಸೊಡ್ಲೂರು ವ್ಯಾಪ್ತಿಯಲ್ಲಿ ಮತ್ತು ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೊರಾಡು, ಬಾಡಗರಕೇರಿ ಗ್ರಾಮಗಳಲ್ಲಿ ಸಮೀಕ್ಷೆ ನಡೆಸಲಾಯಿತು.
ಸಮೀಕ್ಷೆಯಲ್ಲಿ ಕಾಫಿ ಮಂಡಳಿಯ ಶ್ರೀಮಂಗಲ ವಿಭಾಗದ ಜೆ.ಎಲ್.ಓ. ಸುನಿಲ್ ಕುಮಾರ್, ಎ.ಇ.ಓ ಹಫೀದಾ, ಚೆಟ್ಟಳ್ಳಿ ಕಾಫಿ ಸಂಶೋಧನಾ ಕೇಂದ್ರದ ವಿಜ್ಞಾನಿ ಮಂಜುನಾಥ್ ಭಾಗವಹಿಸಿದ್ದರು. ಈ ಸಂದರ್ಭ ಕೊಡಗು ಬೆಳೆಗಾರ ಒಕ್ಕೂಟದ ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಸ್ಥಳೀಯ ಬೆಳೆಗಾರರಾದ ಬಲ್ಯಮೀದೇರಿರ ಪೊನ್ನಪ್ಪ, ಶರಣ್ ಚಂಗಪ್ಪ, ಸಂಪತ್, ಅಣ್ಣೀರ ಸುಬ್ಬಯ್ಯ ಹಾಜರಿದ್ದರು.