ಸೋಮವಾರಪೇಟೆ, ಜ.೧೭: ತಾಲೂಕಿನ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವಾರೆ ಗ್ರಾಮದ ಸಜ್ಜಳ್ಳಿಯ ಹಾರಂಗಿ ಹಿನ್ನೀರಿಗೆ ಬಿದ್ದು ಪಿರಿಯಾಪಟ್ಟಣದ ಕಾರ್ಮಿಕ ಯುವಕನೋರ್ವ ಸಾವನ್ನಪ್ಪಿರುವ ಘಟನೆ ಇಂದು ಸಂಜೆ ಬೆಳಕಿಗೆ ಬಂದಿದೆ.

ಕಳೆದ ೩ ತಿಂಗಳ ಹಿಂದೆ ಯಡವಾರೆ ಗ್ರಾಮದ ಮಚ್ಚಂಡ ಅಶೋಕ್ ಎಂಬವರ ಕಾಫಿ ತೋಟಕ್ಕೆ ಕೆಲಸಕ್ಕೆಂದು ಬಂದು ತೋಟದ ಲೈನ್ ಮನೆಯಲ್ಲಿ ನೆಲೆಸಿದ್ದ ಪಿರಿಯಾಪಟ್ಟಣದ ಆಲದಕಟ್ಟೆ ಗ್ರಾಮದ ಜೇನುಕುರುಬರ ರಾಮು-ಸಣ್ಣಮ್ಮ ದಂಪತಿಯ ಪುತ್ರ, ಅವಿವಾಹಿತನಾಗಿದ್ದ ಶಿವಾಜಿ(೩೩) ಎಂಬಾತನೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದವನು.

ಕಳೆದ ತಾ. ೧೫ರ ಸಂಕ್ರಾAತಿ ಹಬ್ಬದಂದು ಕೆಲಸಕ್ಕೆ ರಜೆ ಹಾಕಿದ್ದ ಶಿವಾಜಿ, ಮಧ್ಯಾಹ್ನ ನಂತರ ಗಾಳದೊಂದಿಗೆ ಸಜ್ಜಳ್ಳಿಯ ಹಾರಂಗಿ ಹಿನ್ನೀರು

ಹಿನ್ನೀರಿನಲ್ಲಿ ಮುಳುಗಿ ಯುವಕ ಸಾವು

(ಮೊದಲ ಪುಟದಿಂದ) ಪ್ರದೇಶಕ್ಕೆ ತೆರಳಿ, ಮೀನಿಗಾಗಿ ಗಾಳ ಹಾಕಿದ್ದಾನೆ. ಕೆಲ ಸಮಯದ ನಂತರ ಬಟ್ಟೆಗಳನ್ನು ಬಿಚ್ಚಿ ನೀರಿಗಿಳಿದ ಸಂದರ್ಭ ಆಕಸ್ಮಿಕವಾಗಿ ಮುಳುಗಿರಬಹುದು ಎನ್ನಲಾಗಿದೆ.

ತಾ.೧೫ರಿಂದ ನಾಪತ್ತೆಯಾಗಿದ್ದ ಕಾರ್ಮಿಕನ ಬಗ್ಗೆ ಪಕ್ಕದ ತೋಟದಲ್ಲಿದ್ದ ಪಿರಿಯಾಪಟ್ಟಣದ ಇತರ ಕಾರ್ಮಿಕರನ್ನು ವಿಚಾರಿಸಿದ ಸಂದರ್ಭ, ಊರಿಗೆ ತೆರಳಿದ್ದಾನೆ ಎಂಬ ಉತ್ತರ ಬಂದ ಹಿನ್ನೆಲೆ ತೋಟ ಮಾಲೀಕರು ಸುಮ್ಮನಾಗಿದ್ದರು. ಈ ನಡುವೆ ಇಂದು ಸಂಜೆ ಹಿನ್ನೀರು ಪ್ರದೇಶದಲ್ಲಿ ಸ್ಥಳೀಯ ಮಕ್ಕಳು ಕ್ರಿಕೆಟ್ ಆಡಲು ತೆರಳಿದ ಸಂದರ್ಭ ನೀರಿನಲ್ಲಿ ವ್ಯಕ್ತಿಯೋರ್ವರ ಮೃತದೇಹ ತೇಲುತ್ತಿದ್ದುದು ಪತ್ತೆಯಾಗಿದೆ.

ತಕ್ಷಣ ಸ್ಥಳೀಯರಿಗೆ ಮಾಹಿತಿ ನೀಡಿ, ಪೊಲೀಸರಿಗೆ ಸುದ್ದಿ ತಿಳಿಸಲಾಗಿದ್ದು, ಸೋಮವಾರಪೇಟೆ ಪೊಲೀಸ್ ಠಾಣಾ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿದ ನಂತರ ಮೃತದೇಹವನ್ನು ನೀರಿನಿಂದ ಹೊರತೆಗೆಯಲಾಯಿತು.

ಕಳೆದ ತಾ.೧೫ರಂದು ಲೈನ್ ಮನೆಯಿಂದ ಕಾಣೆಯಾಗಿದ್ದ ಶಿವಾಜಿಯ ಮೃತದೇಹ ಎಂದು ಗುರುತು ಪತ್ತೆಯಾದ ನಂತರ, ವಾರಸುದಾರರಿಗೆ ತಿಳಿಸಿ ಮೃತದೇಹವನ್ನು ಸೋಮವಾರಪೇಟೆ ಶವಾಗಾರಕ್ಕೆ ಸಾಗಿಸಲಾಯಿತು.

ಮದ್ಯದ ಅಮಲಿನಲ್ಲಿ ನೀರಿಗಿಳಿದ ಹಿನ್ನೆಲೆ ದುರಂತ ಸಂಭವಿಸಿದೆ ಎಂದು ಮೇಲ್ನೋಟಕ್ಕೆ ಹೇಳಲಾಗಿದ್ದು, ಸೋಮವಾರಪೇಟೆ ಪೊಲೀಸರು ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.