ವೀರಾಜಪೇಟೆ, ಜ. ೧೭: ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರಲ್ಲಿ ಕನ್ನಡ, ನೆಲ, ಜಲ ಮತ್ತು ಭಾಷೆಯ ಬಗ್ಗೆ ಅಭಿಮಾನ ಮೂಡಿಸುವ ಕೆಲಸ ಮಾಡುತ್ತಾ ಕನ್ನಡಿಗರಲ್ಲಿ ಜಾಗೃತವಾಗಿರುವ ಕನ್ನಡ ಅಭಿಮಾನವನ್ನು ಬಡಿದೆಬ್ಬಿಸುತ್ತಿದೆ ಎಂದು ದೇವಣಗೇರಿ ಬಿ.ಸಿ. ಪ್ರೌಢಶಾಲೆಯ ಅಧ್ಯಕ್ಷ ಮುಕ್ಕಾಟೀರ ಐ. ಸುನೀಲ್ ನಾಣಯ್ಯ ಹೇಳಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ದೇವಣಗೇರಿ ಬಿ.ಸಿ. ಪ್ರೌಢಶಾಲೆ ವತಿಯಿಂದ ಶಾಲಾ ಸಭಾಂಗಣದಲ್ಲಿ ನಡೆದ ಮುಲ್ಲೆಂಗಡ ಶಂಕರಿ ಪೊನ್ನಪ್ಪ ಮತ್ತು ಮುಲ್ಲೇಂಗಡ ಮಧೋಶ್ ಪೂವಯ್ಯ ಅವರು ಸ್ಥಾಪಿಸಿದ ದಿ. ಸಾಹಿತಿ ಮುಲ್ಲೇಂಗಡ ಬೇಬಿ ಚೋಂದಮ್ಮ ಸ್ಮರಣಾರ್ಥ ದತ್ತಿನಿಧಿ ಕಾರ್ಯಕ್ರಮ ಉದ್ಘಾಟಿಸಿದರು. ನಮ್ಮ ಶಾಲೆಯನ್ನು ಗುರುತಿಸಿ. ಈ ಕಾರ್ಯಕ್ರಮ ಮಾಡಿ ಸಾರ್ಥಕತೆಯನ್ನು ಪಡೆದುಕೊಂಡಿದೆ. ಪ್ರತಿಯೊಬ್ಬರಿಗೂ ಸ್ಫೂರ್ತಿ ಆಗಿ ಎಲ್ಲ ಮಕ್ಕಳು ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡು ಜೀವನದಲ್ಲಿ ಸಾಹಿತ್ಯವನ್ನು ಅಳವಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ದೇವಣಗೇರಿ ಬಿ.ಸಿ. ಪ್ರೌಢಶಾಲೆ ಮುಖ್ಯೋಪಾಧ್ಯಾಯ ಹೆಚ್.ಡಿ. ಲೋಕೇಶ್ ಅವರು, ಕನ್ನಡದ ಹಿರಿಯ ಕವಿ ಸಾಹಿತಿಗಳ ಸಾಹಿತ್ಯದ ಬಗ್ಗೆ ಉಲ್ಲೇಖಿಸಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಹೆಚ್.ಜಿ. ಸಾವಿತ್ರಿ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ ಪ್ರಚಲಿತ ವಿದ್ಯಾಮಾನದಲ್ಲಿ ಮಕ್ಕಳಿಗೆ ಮಾತೃಭಾಷೆ ಕಲಿಕೆ ಬಹಳ ಅತ್ಯವಶ್ಯಕವಾಗಿದೆ, ಕನ್ನಡ ಶಾಲೆಗೆ ಮಕ್ಕಳನ್ನು ನೋಂದಣಿ ಮಾಡಿಸುವಲ್ಲಿ ಪೋಷಕರ ಆಸಕ್ತಿ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿರುವುದು ಆತಂಕದ ವಿಷಯವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸಾಹಿತಿ ಪುಷ್ಪಲತಾ ಶಿವಪ್ಪ ಕೊಡಗಿನ ಮಹಿಳಾ ಸಾಹಿತಿಗಳ ಕುರಿತು ಉಪನ್ಯಾಸ ನೀಡಿ ಮಾತನಾಡಿ ಕೊಡಗಿನ ಸಾಹಿತ್ಯ ಪರಂಪರೆ ನಡೆದು ಬಂದ ಹಾದಿ ಬಗ್ಗೆ ವಿವರಿಸಿ ಕೊಡಗಿನ ಸಾಹಿತ್ಯಕ್ಕೆ ಜಾನಪದ ಸೊಗಡು ಹೇಗೆ ತಳಕು ಹಾಕಿಕೊಂಡು ಬಂದಿದೆ. ಕರ್ನಾಟಕದ ಮಹಿಳಾ ಮಣಿಗಳು ಸಾಹಿತ್ಯ ಕ್ಷೇತ್ರಕ್ಕೆ ಯಾವ ರೀತಿ ದುಡಿದು ಜಾನಪದದ ಮೂಲಕ ಕತೆ ಕವಿತೆ ಬರೆದು ಸಾಹಿತ್ಯ ರಚನೆ ಮಾಡಿದ್ದಾರೆ ಎನ್ನುವ ಬಗ್ಗೆ ವಿವರಿಸಿದರಲ್ಲದೆ.
ಕೊಡಗಿನ ಮುಲ್ಲೇಂಗಡ ಬೇಬಿ ಚೋಂದಮ್ಮ ಅವರು ಸಾಹಿತ್ಯ ಪಂಡಿತೆ ಎನ್ನುವ ಬಿರುದು ಪಡೆದುಕೊಂಡಿದ್ದಾರೆ. ಕೊಡಗಿನ ಪ್ರಥಮ ಬರಹಗಾರ್ತಿ ಕೊಡಗಿನ ಗೌರಮ್ಮ ಪ್ರಶಸ್ತಿ ಪಡೆದುಕೊಂಡ ಅನೇಕ ಸಾಹಿತಿಗಳು ನಮ್ಮಲ್ಲಿದ್ದಾರೆ ಎಂದು ಎಲ್ಲ ಬರಹಗಾರರ ಬಗ್ಗೆ ಮಾಹಿತಿ ನೀಡಿದರು. ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಪಿ. ರಾಜೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದೇ ಸಂದರ್ಭ ಸತತ ೭ ವರ್ಷಗಳಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ. ೧೦೦ ಫಲಿತಾಂಶ ಪಡೆದ ಹಿನ್ನೆಲೆ ಶಾಲಾ ಮುಖ್ಯೋಪಾಧ್ಯಾಯ ಹೆಚ್.ಡಿ. ಲೋಕೇಶ್ ಅವರನ್ನು ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನಿಸಲಾಯಿತು.
ಸಾಹಿತಿಗಳಾದ ಬಡಕಡ ರಜಿತ ಕಾರ್ಯಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಸೋಮೆಯಂಡ ಕೌಸಲ್ಯ ಸತೀಶ್, ಶಿಕ್ಷಕಿ ಪ್ರಮೀಳಾ, ಎ.ಸಿ. ಸುನೀತ ಸೇರಿದಂತೆ ಶಾಲಾ ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಇದ್ದರು.