ಪಾಲಿಬೆಟ್ಟ, ಜ. ೧೬: ಸರಕಾರಿ ಪದವಿಪೂರ್ವ ಕಾಲೇಜು, ಪಾಲಿಬೆಟ್ಟ ಹಾಗೂ ಡೇರಿಯನ್ ಅಸೋಸಿಯೇಷನ್, ಮಡಿಕೇರಿ ಇವರ ಜಂಟಿ ಆಶ್ರಯದಲ್ಲಿ ಕೂತಂಡ ಪೂವಯ್ಯ ಹಾಗೂ ಪಾರ್ವತಿ ಪೂವಯ್ಯ ಜ್ಞಾಪಕಾರ್ಥ ವಾಗಿ ಜಿಲ್ಲಾಮಟ್ಟದ ರಸಪ್ರಶ್ನೆ ಸ್ಪರ್ಧೆ ಪಾಲಿಬೆಟ್ಟ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆಯಿತು.
ಸ್ವಾಮಿ ವಿವೇಕಾನಂದರ ಜೀವನ ಹಾಗೂ ಸಾಧನೆಯಲ್ಲಿ ನಡೆದ ಕೊಡಗು ಜಿಲ್ಲಾಮಟ್ಟದ ರಸಪ್ರಶ್ನೆ ಸ್ಪರ್ಧೆಗೆ ಮುಖ್ಯಮಂತ್ರಿಯವರ ಕಾನೂನು ಸಲಹೆಗಾರರು ಮತ್ತು ಶಾಸಕ ಎ.ಎಸ್. ಪೊನ್ನಣ್ಣ ಅವರು ಚಾಲನೆ ನೀಡಿ ಮಾತನಾಡಿ, ಪಠ್ಯ ಚಟುವಟಿಕೆಗಳ ಜೊತೆಗೆ ಮಕ್ಕಳ ಮನೋವಿಕಾಸಕ್ಕೆ ಹಾಗೂ ಜ್ಞಾನಾರ್ಜನೆಗೆ ಸಹಕಾರಿಯಾಗುವ ರಸಪ್ರಶ್ನೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಅವರ ಭವಿಷ್ಯದ ಜೀವನದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಹಾಯಕಾರಿಯಾಗಲಿದೆ, ಶಿಕ್ಷಣವು ಈಗಾಗಲೇ ಮುಂದುವರಿದಿದ್ದು ಅದಕ್ಕೆ ಸರಿಯಾಗಿ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸಕ್ಕೆ ಒತ್ತು ನೀಡಬೇಕಾಗಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದರು.
ನಂತರ ಶಾಸಕರೇ ಸ್ವತಃ ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳಿ ವಿದ್ಯಾರ್ಥಿಗಳೊಂದಿಗೆ ಬೆರೆತರು. ಇದೇ ಸಂದರ್ಭ ಶಾಸಕರನ್ನು ಸನ್ಮಾನಿಸಿ ಗೌರವಿಸಲಾಯಿತು. ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಮೂರ್ನಾಡು ಪಿಯು ಕಾಲೇಜು ತಂಡ, ದ್ವಿತೀಯ ಸಿದ್ದಾಪುರ ಇಕ್ರಾ ಪಿಯು ಕಾಲೇಜು ತಂಡ, ತೃತೀಯ ಪಾಲಿಬೆಟ್ಟ ಪಿಯು ಕಾಲೇಜು ತಂಡ ಬಹುಮಾನವನ್ನು ಪಡೆದುಕೊಂಡಿತು.
ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ಪಿಯು ಕಾಲೇಜಿನ ಡಾ. ರಾಜೇಂದ್ರ ಪ್ರಸಾದ್, ಡೇರಿಯನ್ ಅಸೋಸಿಯೇಶನ್ ಅಧ್ಯಕ್ಷ ಕೆ.ಪಿ. ಉತ್ತಪ್ಪ, ಕಾಲೇಜಿನ ಪ್ರಾಂಶುಪಾಲರಾದ ಕೆ.ಕೆ. ಶೈನಾ, ಕಾಲೇಜಿನ ಉಪಾಧ್ಯಕ್ಷ ಸಾಬು ಕಾಳಪ್ಪ, ಕಾಲೇಜಿನ ಉಪನ್ಯಾಸಕರುಗಳಾದ ಶಿವದಾಸ್, ಪಾರ್ವತಿ, ಸುನೀತ, ಭೀಮಪ್ಪ, ಕೀರ್ತನ, ಭೂಮಿಕ ಸಿಬ್ಬಂದಿ ಶಾಲಿನಿ ಹಾಜರಿದ್ದರು.