ಐಗೂರು, ಜ. ೧೬: ಹರದೂರು ಗ್ರಾಮ ಪಂಚಾಯಿತಿ ವತಿಯಿಂದ ಮಕ್ಕಳ ಗ್ರಾಮ ಸಭೆಯನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗರಗಂದೂರು ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಶಾಲಾ ವಿದ್ಯಾರ್ಥಿನಿ ಸುಫೈಲಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಾಲಾ ಮುಖ್ಯ ಶಿಕ್ಷಕಿ ಪಾರ್ವತಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳು ಸರಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ತಮ್ಮ ಹಕ್ಕುಗಳನ್ನು ರಕ್ಷಣೆ ಮಾಡುವ ಬಗ್ಗೆ ವಿವರಿಸಿದರು. ವಿವಿಧ ಶಾಲಾ ವಿದ್ಯಾರ್ಥಿಗಳು ಸಭೆಗೆ ಹಾಜರಾಗಿ ತಮ್ಮ ಬೇಡಿಕೆಗಳಾದ ತಡೆಗೋಡೆ ನಿರ್ಮಾಣ, ನೀರಿನ ಸಮಸ್ಯೆ, ಶಾಲೆಗೆ ಹೋಗಿ ಬರುವ ರಸ್ತೆಗಳ ಅಭಿವೃದ್ಧಿಯ ಬಗ್ಗೆ ಮತ್ತು ಸಾರಿಗೆ ವ್ಯವಸ್ಥೆಯ ಬಗ್ಗೆ ಬೇಡಿಕೆಗಳನ್ನು ಮಂಡಿಸಿದರು.

ಇವುಗಳಲ್ಲಿ ಮುಖ್ಯವಾಗಿ ಶೌಚಾಲಯದ ಶುಚಿತ್ವಕ್ಕೆ ಕಾರ್ಮಿಕರನ್ನು ನೇಮಿಸುವ ಬಗ್ಗೆ ಗಂಭೀರ ಚರ್ಚೆ ನಡೆಯಿತು. ಅಹವಾಲು ಸ್ವೀಕರಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ಅವರು ವಿದ್ಯಾರ್ಥಿಗಳು ಶಾಲೆಗೆ ಗೈರು ಹಾಜರಾಗದೆ ಪಾಠ ಪ್ರವಚನಗಳಲ್ಲಿ ಉತ್ತಮ ಕಲಿಕೆಯೊಂದಿಗೆ ಮುಂದೆ ಸಾಗಬೇಕೆಂದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಲೀಂ ಹೊಸತೋಟ, ಸಭೆಯನ್ನು ಉದ್ದೇಶಿಸಿ ವಿದ್ಯಾರ್ಥಿಗಳು ಇಂದು ನೀಡಿದ ಬೇಡಿಕೆಗಳನ್ನು ಆದ್ಯತೆ ಮೇಲೆ ಅನುದಾನದ ಲಭ್ಯತೆಯಲ್ಲಿ ಈಡೇರಿಸಲಾಗುವುದು, ಸಮಾಜದಲ್ಲಿ ಶಾಲಾ ಆವರಣದಲ್ಲಿ ಶುಚಿತ್ವ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು. ಸಭೆಯಲ್ಲಿ ಹಾಜರಿದ್ದ ಸುಂಟಿಕೊಪ್ಪ ಪೊಲೀಸ್ ಠಾಣೆಯ ಗ್ರಾಮಗಸ್ತು ಆರಕ್ಷಕ ನಿಶಾಂತ್ ಮಾತನಾಡಿದರು. ಮಕ್ಕಳ ಗ್ರಾಮ ಸಭೆಯ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಸಭೆಯಲ್ಲಿ ಪಿಡಿಒ ಪೂರ್ಣಿಮ ಸ್ವಾಗತಿಸಿ ವಂದಿಸಿದರು. ಈ ಸಂದರ್ಭ ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಭೋಜಮ್ಮ, ಉಷಾ ಕುಂಬಾರಬಾಣೆ, ರಮೇಶ್, ಸುಬ್ಬಯ್ಯ ,ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಪಂಚಾಯಿತಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.