ಸೋಮವಾರಪೇಟೆ, ಜ. ೧೪: ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಹಾಗೂ ಸೋಮವಾರಪೇಟೆ ಜಯವೀರಮಾತೆ ದೇವಾಲಯದ ವತಿಯಿಂದ ಬಳಗುಂದ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಕ್ರಿಶ್ಚಿಯನ್ ಸಮುದಾಯ ಬಾಂಧವರ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.
ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಮಂಥರ್ ಗೌಡ, ಕ್ರೀಡಾಕೂಟಗಳಿಂದ ಬಾಂಧವ್ಯಗಳು ಬೆಸೆಯುತ್ತವೆ. ಕ್ರೀಡಾಪ್ರತಿಭೆಗಳ ಪ್ರತಿಭಾ ಪ್ರದರ್ಶನಕ್ಕೆ ಇಂತಹ ಕ್ರೀಡಾಕೂಟಗಳು ಸಹಕಾರಿಯಾಗಿವೆ ಎಂದು ಅಭಿಪ್ರಾಯಿಸಿದರು.
ಕ್ರೀಡೆಗಳಲ್ಲಿ ಭಾಗವಹಿಸುವುದು ಮುಖ್ಯ. ಕ್ರೀಡಾಪಟುಗಳು ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕು. ಅಲ್ಪಸಂಖ್ಯಾತರ ರಕ್ಷಣೆ, ಅವರಿಗೆ ಭದ್ರತೆ ಕಲ್ಪಿಸುವುದು ಸರ್ಕಾರದ ಕರ್ತವ್ಯವಾಗಿದ್ದು, ಅವಶ್ಯವಿರುವ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮೈಸೂರು ಗೋಪಾಲಗೌಡ ಆಸ್ಪತ್ರೆಯ ಮಾಲೀಕ ಡಾ.ಶುಶ್ರೂಷ್ಗೌಡ ಮಾತನಾಡಿ, ಇಂತಹ ಕ್ರೀಡಾಕೂಟಗಳಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಸುತ್ತದೆ. ಕ್ರೀಡಾಪಟುಗಳುಗೆ ಆರೋಗ್ಯ ಸಮತೋಲನ, ಆಹಾರ ಮುಖ್ಯವಾಗಿದೆ. ಆರೋಗ್ಯವಂತ ವ್ಯಕ್ತಿ ಉತ್ತಮ ಕ್ರೀಡಾಪಟುವಾಗಲು ಸಾಧ್ಯ ಎಂದ ಅವರು, ಅಸೋಸಿಯೇಷನ್ ವತಿಯಿಂದ ಆರೋಗ್ಯ ತಪಾಸಣಾ ಶಿಬಿರಗಳನ್ನು ಏರ್ಪಡಿಸಿದರೆ ಆಸ್ಪತ್ರೆ ವತಿಯಿಂದ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು. ವೈದ್ಯಕೀಯ ಕ್ಷೇತ್ರದ ಸೇವೆಯೊಂದಿಗೆ ರಾಜಕೀಯದಲ್ಲೂ ಜನಸೇವೆ ಮಾಡುವ ಆಕಾಂಕ್ಷೆಯಿದ್ದು, ನಮ್ಮ ಪಕ್ಷ ನನಗೆ ಟಿಕೆಟ್ ನೀಡಿದರೆ ಲೋಕಸಭೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಅಥ್ಲೆಟಿಕ್ ತರಬೇತುದಾರರು ಹಾಗೂ ಮಾಜಿ ಪೊಲೀಸ್ ಅಧಿಕಾರಿ ಅಂತೋಣಿ ಡಿಸೋಜ, ಅಂತರಾಷ್ಟಿçÃಯ ಒಳಾಂಗಣ ಕ್ರಿಕೆಟ್ ಆಟಗಾರ ಆಶಿಸ್ ಕ್ರಿಸ್ಟಿ, ನ್ಯಾನೋ ಸೈನ್ಸ್ ಸಂಶೋಧಕಿ ಗ್ಲೆನಿಟಾ ಬ್ರಿಜಿತ್ ಡಿಸೋಜ ಅವರುಗಳನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಓಎಲ್ವಿ ದೇವಾಲಯದ ಧರ್ಮಗುರುಗಳಾದ ಎಂ. ರಾಯಪ್ಪ, ದಕ್ಷಿಣ ಕನ್ನಡ ಮತ್ತು ಕರಾವಳಿ ಜಿಲ್ಲಾ ಸಂಘಗಳ ಒಕ್ಕೂಟದ ಅಧ್ಯಕ್ಷ ಗ್ರೇಷಿಯನ್ ರೋಡ್ರಿಗಸ್, ಅಮ್ಮತ್ತಿ ಚರ್ಚ್ ಧರ್ಮಗುರು ರೈಮಂಡ್, ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಎಸ್.ಎಂ. ಡಿಸಿಲ್ವಾ, ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಸದಸ್ಯೆ ಶೀಲಾ ಡಿಸೋಜ, ಬೇಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ.ಎಂ. ಪಾರ್ವತಿ, ಪ್ರಮುಖರಾದ ಕೆ.ಎ. ಯಾಕುಬ್, ಅಬ್ದುಲ್ ರಜಾಕ್, ಎಂ.ಟಿ. ಬೇಬಿ, ಐ.ಡಿ. ರಾಯ್, ಜೋಸೆಫ್ ಡಿಸಿಲ್ವಾ ಮತ್ತಿತರರು ಇದ್ದರು.