ಮಡಿಕೇರಿ, ಜ. ೧೪: ಮಾಸ್ಟರ್ ಮೈಂಡ್ ಚೆಸ್ ಶಾಲೆ ನಡೆಸುವ ತಾಲೂಕು ಮಟ್ಟದ ಚೆಸ್ ಪಂದ್ಯಾಟದ ಟ್ರೋಫಿ ಈ ಬಾರಿ ಜನರಲ್ ತಿಮ್ಮಯ್ಯ ಶಾಲೆಗೆ ಲಭಿಸಿದೆ. ಸ್ಪರ್ಧೆಯಲ್ಲಿ ಕೊಡಗು ವಿದ್ಯಾಲಯ ಹಾಗೂ ಅಂಕುರ್ ಶಾಲೆ ಎರಡು ಮತ್ತು ಮೂರನೇ ಪಡೆದವು.

ಚೆಸ್ ಪಂದ್ಯಾಟದಲ್ಲಿ ನಾಲ್ಕು ವರ್ಷದ ಪುಟ್ಟ ವಿದ್ಯಾರ್ಥಿಗಳಿಂದ, ಹದಿನಾರು ವರ್ಷದ ಸುಮಾರು ೯೫ ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು. ‘ಬೆಸ್ಟ್ ಯಂಗೆಸ್ಟ್ ಪ್ಲೇಯರ್’ ಬಹುಮಾನವನ್ನು ನಾಲ್ಕು ವರ್ಷದ ಟೀಟೂಸ್ ಶಾಲೆಯ ಸವಿನ್ ಮತ್ತು ವಿಷಾಲಿ ತಂಗಮ್ಮ ಗಳಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಭಾಗಮಂಡಲ ಜ್ಞಾನಗಂಗಾ ಶಾಲೆಯ ಶ್ವೇತನ್ ಚೆಂಗಪ್ಪ ಚೀಯಕಪೂವಂಡ ಮಾತನಾಡಿ, ಆಟಗಳಲ್ಲಿ ತೊಡಗುವುದು ಒಂದು ಧ್ಯಾನದಂತೆ ಎಂದರು. ಉತ್ತಮ ಆಟಗಾರರು ಜೀವನದ ಸವಾಲುಗಳನ್ನು ಸಮಾನವಾಗಿ ಎದುರಿಸುವ ಚೈತನ್ಯ ಗಳಿಸಬೇಕು ಎಂದರು.

‘ಶಕ್ತಿ’ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಮಾತನಾಡಿ, ದೇಶದಲ್ಲಿ ಸುಮಾರು ೧.೪೩ ಬಿಲಿಯನ್ ಜನಸಂಖ್ಯೆಯಿದ್ದು, ಅದರಲ್ಲಿ ಸುಮಾರು ೨೫ ಮಿಲಿಯನ್ ಹದಿನಾಲ್ಕು ವರುಷಕ್ಕಿಂತ ಕೆಳಗಿನ ಮಕ್ಕಳು ವಿದ್ಯೆಯಿಂದ ವಂಚಿತರಾಗಿದ್ದಾರೆ ಎಂದರು. ಅನುಕೂಲ ಉಳ್ಳವರು ಕನಿಷ್ಟ ಒಂದು, ಎರಡು ಬಡ ವಿದ್ಯಾರ್ಥಿಗಳ ಓದಿಗೆ ಸಹಾಯ ಮಾಡುವಂತಾಗಬೇಕು ಎಂದರು. ಮತ್ತೋರ್ವ ಅತಿಥಿ, ನೃತ್ಯ ಅಧ್ಯಾಪಕಿ ರೋಜಾ ಸುಮಿ ಶುಭ ಹಾರೈಸಿ ಬಹುಮಾನ ವಿತರಿಸಿದರು.

ಮಾಸ್ಟರ್ ಮೈಂಡ್ ಚೆಸ್ ಶಾಲೆಯ ಸ್ಥಾಪಕಿ ಕಾವ್ಯ ಮಾತನಾಡಿ, ಮಡಿಕೇರಿ ತಾಲೂಕಿನ ಭಾಗಮಂಡಲ, ನಾಪೋಕ್ಲು ಹಾಗೂ ಮಡಿಕೇರಿಯ ಇತರೆಡೆಗಳಿಂದ ಶಾಲಾ ವಿದ್ಯಾರ್ಥಿಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದು, ಮುಂದೆ ಜಿಲ್ಲಾ ಮಟ್ಟದಲ್ಲಿ ನಡೆಸುವ ಚಿಂತನೆ ಇದೆ ಎಂದರು. ನಾಲ್ಕು ಬಾರಿ ರಾಷ್ಟç ಚೆಸ್ ಪಂದ್ಯಾಟದಲ್ಲಿ ಗೆದ್ದಿರುವ ದಿವ್ಯ ನಿರೂಪಣೆ ಮಾಡಿದರು.