ಮಡಿಕೇರಿ, ಜ. ೧೪: ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಮೆಡಿಕಲ್ ಕಾಲೇಜ್) ಕಳೆದ ೮ ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಗ್ರೂಪ್ ಡಿ ನೌಕರರ ಮೂಲಭೂತ ಸೌಲಭ್ಯದ ಮನವಿಗೆ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಸಕಾರಾತ್ಮಕವಾಗಿ ಸ್ಪಂದಿಸಿ ಸಮಸ್ಯೆ ಇತ್ಯರ್ಥಗೊಳಿಸುವ ಭರವಸೆ ನೀಡಿದ್ದಾರೆ.
ನೇರ ನೇಮಕಾತಿಗೆ ಕೋರಿಕೆ, ಹೊರಗುತ್ತಿಗೆಯ ಏಜೆನ್ಸಿ ಪ್ರತಿ ತಿಂಗಳ ಗಣಕೀಕೃತ ವೇತನ ರಶೀದಿ ನೀಡದೆ ಇರುವುದು, ಇSP ಮತ್ತು ಇSI ಸೌಲಭ್ಯದ ಮೊತ್ತ ಸರಿಯಾಗಿ ಜಮೆ ಆಗದಿರುವುದು, ಸಿಬ್ಬಂದಿ ವರ್ಗದವರಿಗೆ ಊಟದ ವ್ಯವಸ್ಥೆ ಇಲ್ಲದೆ ಇರುವುದು, ವಾಹನ ವ್ಯವಸ್ಥೆ ಇಲ್ಲದಿರುವುದು, ಪ್ರತ್ಯೇಕ ಸಿಬ್ಬಂದಿ ಕೊಠಡಿ ವ್ಯವಸ್ಥೆಯಿಲ್ಲದೆ ಮಹಿಳಾ ನೌಕರರು ಸಂಕಷ್ಟದಲ್ಲಿರುವುದು ಸೇರಿದಂತೆ ಅನೇಕ ನ್ಯೂನತೆಗಳನ್ನು ಸರಿಪಡಿಸಲು ಕೋರಿ ಗ್ರೂಪ್ ಡಿ ನೌಕರರು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ ಮುಖೇನ ಮನವಿಯನ್ನು ಶಾಸಕರಾದ ಡಾ. ಮಂಥರ್ ಗೌಡ ರವರಿಗೆ ನೀಡಲಾಯಿತು.
ಮನವಿ ಪರಿಶೀಲಿಸಿದ ಶಾಸಕರು ಸರ್ಕಾರದ ಮಟ್ಟದಲ್ಲಿ ಆಗಬೇಕಿರುವ ಕೆಲಸಗಳಿಗೆ ತಾವು ಮತ್ತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಸೇರಿ ಸರ್ಕಾರದ ಗಮನಕ್ಕೆ ತರುವುದಾಗಿಯೂ, ಮೂಲಭೂತ ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸಲು ಕಾಲೇಜು ಆಡಳಿತ ಮಂಡಳಿಗೆ ಸೂಚನೆ ನೀಡುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ. ಹಂಸ, ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಯುವ ಕಾಂಗ್ರೆಸ್ ಮುಖಂಡರಾದ ಕವನ್ ಕೊತ್ತೋಳಿ ಉಪಸ್ಥಿತರಿದ್ದರು.