ಮಡಿಕೇರಿ, ಜ. ೧೩: ಮಡಿಕೇರಿ ನಗರದಲ್ಲಿಯೇ ಗೌಡ ಸಮುದಾಯದವರು ಸಾಕಷ್ಟು ಸಂಖ್ಯೆಯಲ್ಲಿದ್ದು, ಸಮುದಾಯದವರಿಗೆ ಸಮಸ್ಯೆ ಉಂಟಾದರೆ ಎಲ್ಲರೂ ಒಗ್ಗಟ್ಟಾಗಿ ಎದುರಿಸಬೇಕೆಂದು ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಕರೆ ನೀಡಿದರು.

ಇಲ್ಲಿನ ಕೊಡಗು ಗೌಡ ವಿದ್ಯಾಸಂಘದಲ್ಲಿ ನಡೆದ ಕಾಮಾಕ್ಷಿ ಗೌಡ ಒಕ್ಕೂಟದ ಸಂತೋಷಕೂಟದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಮಡಿಕೇರಿ ನಗರದಲ್ಲಿ ಹಲವು ಗೌಡ ಕೂಟಗಳಿದ್ದು, ಸಾಕಷ್ಟು ಮಂದಿ ಸದಸ್ಯರಿದ್ದಾರೆ. ಆದರೂ ಯಾವದೇ ಸಭೆ ಸಮಾರಂಭಗಳು ನಡೆದಾಗ ಕೆಲವೇ ಮಂದಿ ಸೇರುತ್ತಾರೆ, ಎಲ್ಲರೂ ಸೇರುವಂತಾಗಬೇಕು. ಏನಾದರೂ ಸಮಸ್ಯೆ ಉಂಟಾದಾಗ ಎಲ್ಲರೂ ಒಗ್ಗಟ್ಟಾಗಬೇಕು. ಕೆಲವರು ಸಾಮಾಜಿಕ ತಾಣಗಳಲ್ಲಿ ಜನಾಂಗದ ನಿಂದನೆ ಮಾಡುತ್ತಿರುತ್ತಾರೆ, ಇಂತಹವುಗಳನ್ನು ಖಂಡಿಸಬೇಕೆAದು ಹೇಳಿದರು. ನಾವು ಇತರರ ಸಂಸ್ಕೃತಿ, ಪದ್ಧತಿಗಳನ್ನು ಅನುಕರಣೆ ಮಾಡದೆ ನಮ್ಮ ಪದ್ಧತಿಗಳನ್ನು ಉಳಿಸಿ, ಬೆಳೆಸಬೇಕು. ಇತರರೊಂದಿಗೆ ಹೊಂದಿಕೊAಡು ಬಾಳಬೇಕು. ಆರೋಗ್ಯ ಹಾಗೂ ಅಂತಿಮ ಸಂಸ್ಕಾರಕ್ಕೆ ಮಾಡುವ ಸಹಾಯ ಅತ್ಯಂತ ಉತ್ತಮವಾದುದು. ಜನಾಂಗದ ಪದ್ಧತಿಗಳಲ್ಲಿ ಊರಿಂದ ಊರಿಗೆ ವ್ಯತ್ಯಾಸಗಳಿದ್ದು, ಏಕ ರೀತಿಯ ಪದ್ಧತಿಗಳ ಅನುಷ್ಠಾನಕ್ಕೆ ಕಾರ್ಯಾಗಾರ ನಡೆಸಲಾಗುವದು ಎಂದು ಹೇಳಿದರು.

ಒಕ್ಕೂಟದ ಅಧ್ಯಕ್ಷ ಪೈಕೇರ ನಂದ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಟ್ಟಕೇರಿಯನ ಲೀಲಾ ದಯಾನಂದ ಪ್ರಾರ್ಥಿಸಿದರೆ, ಒಕ್ಕೂಟದ ಉಪಾಧ್ಯಕ್ಷ ಕೊಟ್ಟಕೇರಿಯನ ದಯಾನಂದ ಸ್ವಾಗತಿಸಿದರು. ಕಾರ್ಯದರ್ಶಿ ಕಟ್ರತನ ಲಲಿತ ಅಯ್ಯಣ್ಣ ವರದಿ ವಾಚಿಸಿ, ಲೆಕ್ಕಪತ್ರ ಮಂಡಿಸಿದರು. ಪೂಳಕಂಡ ಶುಭ ರಾಜೇಶ್ ಹಾಗೂ ಕೆದಂಬಾಡಿ ಮಮತ ಕವಿಪ್ರಸಾದ್ ನಿರೂಪಿಸಿದರೆ, ಕುಂದಲ್ಪಾಡಿ ದಿವಾಕರ್ ವಂದಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಇದೇ ಸಂದರ್ಭದಲ್ಲಿ ಸಾಹಿತಿಗಳಾದ ಬೈತಡ್ಕ ಜಾನಕಿ ಬೆಳ್ಯಪ್ಪ ಹಾಗೂ ಕಟ್ರತನ ಲಲಿತಾ ಅಯ್ಯಣ್ಣ ಅವರುಗಳನ್ನು ಸನ್ಮಾನಿಸಲಾಯಿತು. ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು. ಇದಕ್ಕೂ ಮೊದಲು ಒಕ್ಕೂಟದ ಸದಸ್ಯರು ಹಾಗೂ ಮಕ್ಕಳಿಗೆ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.