ಮಡಿಕೇರಿ, ಜ. ೧೩; ಮದೆನಾಡುವಿನ ಬ್ರಹ್ಮ ಮೊಗೇರೆರ್ ಯಕ್ಷಗಾನ ಸಮಿತಿಯ ಆಶ್ರಯದಲ್ಲಿ ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಸಹಯೋಗದೊಂದಿಗೆ ಕಾರ್ನಿಕ ದೈವದ ಇತಿಹಾಸವನ್ನು ಸಾರುವ ಬ್ರಹ್ಮ ಮೊಗೇರೆರ್ ಎಂಬ ತುಳು ಯಕ್ಷಗಾನ ಬಯಲಾಟ ಏರ್ಪಡಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಮೊಗೇರ ಸೇವಾ ಸಮಾಜದ ಗೌರವ ಅಧ್ಯಕ್ಷ ಪಿ.ಎಂ.ರವಿ; ಮೊಗೇರ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ, ಸಮಾಜದ ಸಂಸ್ಕೃತಿ, ಆಚಾರ, ಪದ್ಧತಿ, ಪೌರಾಣಿಕ ಹಿನ್ನೆಲೆಯನ್ನು ಉಳಿಸಿಬೆಳೆಸುವದಲ್ಲದೆ, ಕಾರ್ನಿಕ ದೈವದ ಬಗ್ಗೆ ಜನರಿಗೆ ತಿಳಿಯಪಡಿಸುವ ಉದ್ದೇಶದೊಂದಿಗೆ ಯಕ್ಷಗಾನ ಬಯಲಾಟ ಹಮ್ಮಿಕೊಳ್ಳಲಾಗಿದೆ. ತುಳುನಾಡಿನಲ್ಲಿ ಈ ಕಲೆಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿದೆ. ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಿಂದ ಪ್ರೋತ್ಸಾಹ ಸಿಗುತ್ತಿಲ್ಲ, ಈ ಹಿನ್ನೆಲೆಯಲ್ಲಿ ಯಕ್ಷಗಾನದ ಮೂಲಕ ಕಲೆಯನ್ನು ಪ್ರೋತ್ಸಾಹಿಸುವದಲ್ಲದೆ, ಮೊಗೇರ ಸಮಾಜದ ಪೌರಾಣಿಕ ಹಿನ್ನೆಲೆಯನ್ನು ತಿಳಿಯಪಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.
ಮುಂದಿನ ಫೆಬ್ರವರಿ ೨೨ರಂದು ಮದೆನಾಡಿನ ಕುಟ್ಟೆಟ್ಟಿರ ಪೂವಯ್ಯ ಅವರಿಗೆ ಸೇರಿದ ಗದ್ದೆಯಲ್ಲಿ ರಾತ್ರಿಯಿಂದ ಬೆಳಿಗ್ಗೆವರೆಗೆ ಬಯಲಾಟ ನಡೆಯಲಿದೆ. ರಾತ್ರಿ ೮ ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ತುಳುನಾಡಿನ ಚಿತ್ರನಟರು ಭಾಗವಹಿಸಲಿದ್ದಾರೆ. ಬಂಟ್ವಾಳದ ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿಯವರು ಯಕ್ಷಗಾನ ನಡೆಸಿಕೊಡಲಿದ್ದು, ಬಹಳಷ್ಟು ಕಲಾವಿದರು, ಪಾತ್ರಧಾರಿಗಳು ಆಗಮಿಸಲಿದ್ದಾರೆ. ಯಕ್ಷಗಾನಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಎಲ್ಲರೂ ಸಹಕಾರ ನೀಡಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೂಡ ಈ ನಿಟ್ಟಿನಲ್ಲಿ ಗಮನ ಹರಿಸಬೇಕೆಂದು ರವಿ ಮನವಿ ಮಾಡಿದರು.
ಗೋಷ್ಠಿಯಲ್ಲಿ ಮೊಗೇರ ಸೇವಾ ಸಮಾಜದ ಜಿಲ್ಲಾಧ್ಯಕ್ಷ ಪಿ.ಬಿ. ಜನಾರ್ಧನ, ಮಡಿಕೇರಿ ತಾಲೂಕು ಅಧ್ಯಕ್ಷ ಪಿ.ಸಿ. ರಘು, ಯಕ್ಷಗಾನ ಸಮಿತಿ ಅಧ್ಯಕ್ಷ ಸತೀಶ್, ಕಾರ್ಯದರ್ಶಿ ಪಿ.ಎ. ಚಂದ್ರಾವತಿ, ಸಂಯೋಜಕ ಪಿ.ಯು.ಸುಂದರ ಇದ್ದರು.