ಮಡಿಕೇರಿ, ಜ. ೧೩: ಕಳೆದ ೨೫-೩೦ ವರ್ಷಗಳಿಂದ ಭಾರತೀಯ ಜನತಾ ಪಕ್ಷದ ಭದ್ರಕೋಟೆಯಾಗಿದ್ದ ಕೊಡಗು ಜಿಲ್ಲೆಯಲ್ಲಿ ಈ ಬಾರಿ ಬದಲಾವಣೆ ಗಾಳಿ ಬೀಸಿದ ಪರಿಣಾಮ ಕಾಂಗ್ರೆಸ್ ಪಕ್ಷ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿತು. ಆದರೆ, ಸೋಲನ್ನು ಸವಾಲಾಗಿ ಸ್ವೀಕರಿಸಿರುವ ಕಮಲ ಪಾಳಯ ಸಂಘಟನೆಗೆ ಹೆಚ್ಚಿನ ಒತ್ತು ನೀಡುತ್ತ ಮುಂದಿನ ಲೋಕಸಭಾ ಚುನಾವಣೆಯತ್ತ ಗಮನಹರಿಸುತ್ತ ಹೆಜ್ಜೆ ಇಡುತ್ತಿದೆ. ರಾಜ್ಯದಲ್ಲಿಯೂ ಅಧ್ಯಕ್ಷ ಸ್ಥಾನ ಬದಲಾಗಿದ್ದು, ಕೊಡಗಿನಲ್ಲಿಯೂ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಸೃಷ್ಟಿಯಾಗಿದೆ.

ಇತ್ತೀಚೆಗೆ ಸಹಕಾರಿ ಸಂಘಗಳಲ್ಲಿ ಬಿಜೆಪಿ ಬೆಂಬಲಿತರ ಗೆಲುವಿನಿಂದ ಪಕ್ಷ ಚೇತರಿಸಿಕೊಂಡು ಪುಟಿದೇಳಲು ಸನ್ನದ್ಧಗೊಂಡಿದೆ. ಪಕ್ಷದೊಳಗೆ ಚಟುವಟಿಕೆಗಳು ಹೆಚ್ಚಾಗಿವೆ. ಇದರೊಂದಿಗೆ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಈಗಾಗಲೇ ೨೨ ಆಕಾಂಕ್ಷಿಗಳು ಹೈಕಮಾಂಡ್ ಪ್ರತಿನಿಧಿಯಾಗಿ ಬಂದಿದ್ದ ತುಮಕೂರಿನ ನಂದೀಶ್ ಅವರಿಗೆ ತಮ್ಮ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಗಳು ಇದೀಗ ಪರಿಶೀಲನೆಗೆ ಒಳಪಟ್ಟು ನಾಲ್ಕು ಹೆಸರು ಅಂತಿಮಗೊAಡಿದೆ ಎಂದು ಪಕ್ಷದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಜಿ.ಪಂ. ಮಾಜಿ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ ಹಾಗೂ ಜನತಾ ಬಜಾರ್ ಅಧ್ಯಕ್ಷ ನಂದಿನೆರವAಡ ರವಿ ಬಸಪ್ಪ ಅವರುಗಳು ಬೈಲಾದ ಪ್ರಕಾರ ೬೦ ವರ್ಷ ಮೇಲ್ಪಟ್ಟಿರುವ ಕಾರಣ ಅವರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎನ್ನಲಾಗಿದೆ. ಪೂರ್ಣಾವಧಿ ಮುಗಿದ ಜಿಲ್ಲಾಧ್ಯಕ್ಷ ಮತ್ತೊಮ್ಮೆ ಅರ್ಜಿ ಸಲ್ಲಿಸುವಂತಿಲ್ಲ ಎಂಬ ಕಾರಣಕ್ಕೆ ಹಾಲಿ ಅಧ್ಯಕ್ಷ ರಾಬಿನ್ ದೇವಯ್ಯ ಕಣದಿಂದ ಹಿಂದೆ ಸರಿದಿದ್ದಾರೆ.

ಉಳಿದಂತೆ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷರುಗಳಾದ ಮಾಚಿಮಾಡ ರವೀಂದ್ರ, ಬಿ.ಬಿ. ಭಾರತೀಶ್, ರಾಜ್ಯ ಜೀವ ವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಪಂಡ ರವಿ ಕಾಳಪ್ಪ, ಜಿಲ್ಲಾ ವಕ್ತಾರ, ನಗರಸಭಾ ಸದಸ್ಯ ಮಹೇಶ್ ಜೈನಿ, ವೀರಾಜಪೇಟೆ ಮಂಡಲ ಅಧ್ಯಕ್ಷ ನೆಲ್ಲೀರ ಚಲನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುಲ್ಲೂರುಕೊಪ್ಪ ಮಾದಪ್ಪ, ವಿ.ಕೆ ಲೋಕೇಶ್, ಕಾರ್ಯದರ್ಶಿ ಗುಮ್ಮಟೀರ ಕಿಲನ್, ಉಪಾಧ್ಯಕ್ಷೆ ರೂಪಾ, ಕೃಷಿ ಮೋರ್ಚಾದ ಜಿಲ್ಲಾಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಹಿಂದುಳಿದ ಮೋರ್ಚಾ ಅಧ್ಯಕ್ಷ ಎಸ್.ಎಸ್. ರಘು, ಮಡಿಕೇರಿ ನಗರಸಭೆ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಮಾಜಿ ಅಧ್ಯಕ್ಷ ಪಿ.ಡಿ. ಪೊನ್ನಪ್ಪ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶಜೀಲ್ ಕೃಷ್ಣನ್, ಜಿ.ಪಂ. ಮಾಜಿ ಸದಸ್ಯ ಬಿ.ಜೆ. ದೀಪಕ್, ಅಚ್ಚಪಂಡ ಮಹೇಶ್, ವಕೀಲ ಶ್ರೀನಿಧಿ ಲಿಂಗಪ್ಪ, ಶರತ್ ಜಿಲ್ಲಾಧ್ಯಕ್ಷ ಸ್ಥಾನ ಆಕಾಂಕ್ಷಿಗಳಾಗಿ ಅರ್ಜಿ ಸಲ್ಲಿಸಿದ್ದಾರೆ.

ನಾಲ್ವರ ಹೆಸರು ಅಂತಿಮ?

ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಅಳೆದು ತೂಗಿ ಹೈಕಮಾಂಡ್ ನಾಲ್ವರ ಹೆಸರು ಅಂತಿಮಗೊಳಿಸಿದೆ ಎಂದು ಅಧಿಕೃತ ಮೂಲಗಳು ‘ಶಕ್ತಿ’ಗೆ ತಿಳಿಸಿವೆ.

೨೦ ಮಂದಿ ಪೈಕಿ ಮಡಿಕೇರಿ ಮಂಡಲ ಅಧ್ಯಕ್ಷರಾಗಿ, ಜಿಲ್ಲಾ ವಕ್ತಾರರಾಗಿ ಶ್ರಮಿಸಿದ ನಗರಸಭಾ ಸದಸ್ಯ ಮಹೇಶ್ ಜೈನಿ, ಆರ್.ಎಸ್.ಎಸ್. ಮೂಲದಿಂದ ಬಂದು ವೀರಾಜಪೇಟೆ ಮಂಡಲ ಅಧ್ಯಕ್ಷರಾಗಿರುವ ನೆಲ್ಲೀರ ಚಲನ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಮಾಚಿಮಾಡ ರವೀಂದ್ರ, ಜೀವ ವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಾಪಂಡ ರವಿ ಕಾಳಪ್ಪ ಅವರುಗಳ ಹೆಸರು ಅಂತಿಮ ಪಟ್ಟಿಯಲ್ಲಿದೆ ಎಂದು ಹೇಳಲಾಗಿದೆ.

ಜಾತಿ ಸಮೀಕರಣ

ಅಧ್ಯಕ್ಷ ಗಾದಿಗೆ ಸೂಕ್ತ ಯಾರು? ಎಂಬ ಪ್ರಶ್ನೆಗೆ ಹಲವು ಕೋನಗಳಲ್ಲಿ ಉತ್ತರವನ್ನು ಹೈಕಮಾಂಡ್ ಹುಡುಕುತ್ತಿದೆ. ಅಲ್ಲದೆ, ಜಾತಿ ಸಮೀಕರಣದೊಂದಿಗೆ ಸ್ಥಳೀಯ ನಾಯಕರುಗಳು, ಮಾಜಿ ಶಾಸಕರುಗಳ ಅಭಿಪ್ರಾಯವನ್ನು ವೀಕ್ಷಕರಾಗಿ ಬಂದಿದ್ದ ನಂದೀಶ್ ಅವರು ಕೇಳಿ ವರದಿ ಸಿದ್ಧಪಡಿಸಿ ಹೈಕಮಾಂಡ್‌ಗೆ ನೀಡಿದ್ದಾರೆ.

ಈ ಹಿಂದಿನ ಜಿಲ್ಲಾಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ ಕೊಡವರಾಗಿದ್ದ ಕಾರಣ ಈ ಬಾರಿ ಬೇರೆ ಸಮುದಾಯಕ್ಕೆ ಜಿಲ್ಲಾಧ್ಯಕ್ಷ ಸ್ಥಾನ ನೀಡುವ ಇರಾದೆ ಪಕ್ಷದ ವಲಯದಲ್ಲಿ ವ್ಯಕ್ತವಾಗಿದೆ. ಇದರೊಂದಿಗೆ ಸೂಕ್ತವಾಗಿ ಕೆಲಸ ಮಾಡ ಬಲ್ಲ ನಾಯಕನ ಬಗ್ಗೆಯೂ ಚಿಂತನೆ ಹರಿಸಲಾಗಿದೆ.

ಅಂತಿಮಗೊAಡ ನಾಲ್ಕು ಹೆಸರುಗಳ ಪೈಕಿ ಮಹೇಶ್ ಜೈನಿ ಅರೆಭಾಷೆ ಗೌಡ ಸಮುದಾಯಕ್ಕೆ ಸೇರಿದ್ದು, ಉಳಿದವರೆಲ್ಲ ಕೊಡವ ಜನಾಂಗಕ್ಕೆ ಸೇರಿದವರಾಗಿದ್ದಾರೆ. ಜೊತೆಗೆ ಮಡಿಕೇರಿ ಭಾಗಕ್ಕೆ ಜಿಲ್ಲಾಧ್ಯಕ್ಷ ಸ್ಥಾನ ನೀಡಿ ಹಲವು ವರ್ಷ ಕಳೆದಿದ್ದು, ಮಡಿಕೇರಿ ಭಾಗಕ್ಕೆ ಅಧ್ಯಕ್ಷ ಸ್ಥಾನ ನೀಡಬೇಕೆಂಬ ಒತ್ತಾಯವೂ ಹೆಚ್ಚಾಗಿ ಕೇಳಿಬರುತ್ತಿದೆ. ಕೆ.ಜಿ. ಬೋಪಯ್ಯ, ಸುನಿಲ್ ಸುಬ್ರಮಣಿ ನಂತರ ಮಡಿಕೇರಿ ಮಂಡಲದ ಪ್ರತಿನಿಧಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿ ಬಂದಿಲ್ಲ. ರಾಬಿನ್‌ಗೂ ಮುನ್ನ ಸೋಮವಾರಪೇಟೆ ಮಂಡಲದ ಭಾರತೀಶ್ ಜಿಲ್ಲಾಧ್ಯಕ್ಷರಾಗಿದ್ದರು. ಇವೆಲ್ಲ ಕಾರಣದಿಂದ ಮಹೇಶ್ ಜೈನಿಗೆ ಸದ್ಯಕ್ಕೆ ವಾತಾವರಣ ಪೂರಕÀವಾಗಿದೆ. ಈ ಕಾರಣದಿಂದ ರವಿಕಾಳಪ್ಪ, ಚಲನ್, ರವೀಂದ್ರ ಅವರನ್ನು ಅಲ್ಲಗಳೆಯುವಂತಿಲ್ಲ. ಪಕ್ಷ ಸಂಘಟನೆಯಲ್ಲಿ ಹಲವು ವರ್ಷಗಳಿಂದ ತೊಡಗಿಸಿಕೊಂಡು ಇವರುಗಳು ಉನ್ನತ ನಾಯಕರಿಗೆ ಆತ್ಮೀಯರಾಗಿದ್ದಾರೆ. ಮೂವರು ರಾಜಕೀಯ ಪ್ರಾಬಲ್ಯ ಅಲ್ಲದೆ ಬೆಂಬಲಿಗರನ್ನು ಹೊಂದಿದ್ದಾರೆ. ರವೀಂದ್ರ ಅವರು ಕಳೆದ ೨ ಅವಧಿಗಳಿಂದ ವೀರಾಜಪೇಟೆ ಕ್ಷೇತ್ರದ ವಿಧಾನಸಭಾ ಚುನಾವಣೆ ಟಿಕೆಟ್ ಆಕಾಂಕ್ಷಿಯಾಗಿಯೂ ಇದ್ದರು. ಅಲ್ಲದೆ, ಟಿಪ್ಪು ಜಯಂತಿ ವಿರೋಧಿ ಹೋರಾಟದಲ್ಲಿ ಮುಂಚೂಣಿ ನಾಯಕತ್ವ ವಹಿಸಿಕೊಂಡು ಕಾಂಗ್ರೆಸ್ ಪಕ್ಷದ ನಿರ್ಧಾರವನ್ನು ತೀವ್ರವಾಗಿ ವಿರೋಧಿಸಿದ್ದರು. ಅಲ್ಪಾವಧಿಯಲ್ಲಿ ಜಿಲ್ಲಾಧ್ಯಕ್ಷ ಸ್ಥಾನ ನಿರ್ವಹಿಸಿದ ಅನುಭವವನ್ನು ಹೊಂದಿದ್ದಾರೆ.

ಈ ನಾಲ್ಕು ಮಂದಿ ಅಲ್ಲದೆ ಅಚ್ಚರಿ ಆಯ್ಕೆಯ ಕುರಿತು ಗಾಳಿಮಾತುಗಳು ಕೇಳಿಬರುತ್ತಿವೆ. ಆಕಾಂಕ್ಷಿಗಳ ಪೈಕಿ ಹಲವರು ತಮ್ಮ ಪರವಾದವರಿಗೆ ಒತ್ತಡ ತರುವ ನಿಟ್ಟಿನಲ್ಲಿ ಅರ್ಜಿ ಸಲ್ಲಿಸಿರುವುದು ರಾಜಕೀಯ ಲೆಕ್ಕಾಚಾರವಾಗಿದೆ. ತೆರೆಮರೆಯಲ್ಲಿ ನಡೆಯುತ್ತಿರುವ ಜಿಲ್ಲಾಧ್ಯಕ್ಷ ಆಯ್ಕೆ ಪ್ರಶ್ನೆಗೆ ಕೆಲ ಸಮಯದಲ್ಲಿ ಉತ್ತರ ದೊರಕಿ ತೆರೆ ಬೀಳಲಿದೆ. - ಹೆಚ್.ಜೆ. ರಾಕೇಶ್