ಸೋಮವಾರಪೇಟೆ, ಜ. ೧೩: ಇಲ್ಲಿನ ಪತ್ರಿಕಾಭವನದಲ್ಲಿ ಆಯೋಜನೆಗೊಂಡಿದ್ದ ಸರಳ ಸುಂದರ ಸಮಾರಂಭದಲ್ಲಿ, ಯುವ ಕವಿ, ಸಾಹಿತಿಯಾಗಿಯೂ ಹೆಸರು ಮಾಡುತ್ತಿರುವ ಯಡವನಾಡು ಗ್ರಾಮದ ಹೇಮಂತ್ ಪಾರೇರಾ ಅವರ ‘ಮೌನ ಮುರಿದ ಕನವರಿಕೆಗಳು’ ಕವನ ಸಂಕಲನ ಬಿಡುಗಡೆಗೊಂಡಿತು.

ಮೊದಲ ಕೃತಿ ಬಿಡುಗಡೆಯ ಸಂದರ್ಭ ಜಿಲ್ಲೆಯ ಹಲವಷ್ಟು ಸಾಹಿತಿಗಳು, ಚಿಂತಕರು, ಲೇಖಕರು, ಕವಿಗಳು, ಸಾಹಿತ್ಯಾಸಕ್ತರು ಲೋಕಾರ್ಪಣೆಗೆ ಸಾಕ್ಷಿಯಾದರು. ೬೫ ಕವನಗಳನ್ನು ಹೊಂದಿರುವ ‘ಮೌನ ಮುರಿದ ಕನವರಿಕೆಗಳು’ ಕವನ ಸಂಕಲನವನ್ನು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಅವರು ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭ ಮಾತನಾಡಿದ ಅವರು, ಕವಿ-ಸಾಹಿತಿಗಳು ಭಾವಜೀವಿಗಳಾಗಿ ಬದುಕಬೇಕು. ಸಾಹಿತ್ಯ, ಕಲೆಗಳಿಗೆ ಬಾಂಧವ್ಯ ಬೆಸೆಯುವ ಶಕ್ತಿಯಿದೆ. ತಮ್ಮಲ್ಲಿರುವ ಜ್ಞಾನದ ಬೆಳಕನ್ನು ಇತರರಿಗೂ ಹಂಚುವುದು ನಮ್ಮ ಕರ್ತವ್ಯವೆಂದು ಪರಿಭಾವಿಸಬೇಕು. ಜ್ಞಾನ ದಾನವೂ ಪವಿತ್ರವಾದ ದಾನವಾಗಿದೆ ಎಂಬುದನ್ನು ಮನಗಾಣಬೇಕು ಎಂದರು.

ಬರವಣಿಗೆಗಳು ಹೊಸತನವನ್ನು ರೂಪಿಸಬೇಕು. ತಮ್ಮ ಬರಹದ ಬಗ್ಗೆ ಮೊದಲು ನಮಗೆ ಭರವಸೆ ಇರಬೇಕು. ಆಗ ಮಾತ್ರ ಸಾಹಿತ್ಯದ ಬಗೆಗಿನ ವಾದಗಳಿಗೆ ನಮ್ಮನ್ನು ಒಳಪಡಿಸಿಕೊಳ್ಳಲು ಸಾಧ್ಯ. ಹೇಮಂತ್ ಅವರ ಕವನ ಸಂಕಲನ ಹೊಸತನಕ್ಕೆ ನಾಂದಿ ಹಾಡಿದೆ. ಸಾಹಿತ್ಯ ಸೇವೆ ಇನ್ನಷ್ಟು ವೃದ್ಧಿಸಲಿ ಎಂದು ಶುಭಹಾರೈಸಿದರು.

ಕವನ ಸಂಕಲನದ ಬಗ್ಗೆ ವಿಮರ್ಶಾತ್ಮಕ ನುಡಿಗಳನ್ನಾಡಿದ ಹಿರಿಯ ಸಾಹಿತಿ, ಶಿಕ್ಷಕಿ ಸುನಿತಾ ಲೋಕೇಶ್ ಅವರು, ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕವಿಗಳ ಸಂಖ್ಯೆ ಹೆಚ್ಚುತ್ತಿರುವುದು, ಕವಿಗಳಿಗೆ ವೇದಿಕೆಗಳು ಸಿಗುತ್ತಿರುವುದು ಶ್ಲಾಘನೀಯ. ಕವಿಗಳಿಗೆ ಸೂಚ್ಯ ಬರವಣಿಗೆಯ ಬುದ್ಧಿವಂತಿಕೆ ಇರಬೇಕು. ಪ್ರತಿಯೊಂದನ್ನೂ ಸೂಕ್ಷö್ಮವಾಗಿ ಗಮನಿಸುವ ಮನಸ್ಸಿರ ಬೇಕು. ಸ್ಥಳೀಯ ಸಾಹಿತ್ಯ ಗಳೊಂದಿಗೆ ಲೋಕ ಸಾಹಿತ್ಯವನ್ನೂ ಓದಬೇಕು. ಆ ಮೂಲಕ ಪ್ರಬುದ್ಧ ಮತ್ತು ಪಕ್ವವಾಗಬೇಕು ಎಂದು ಅಭಿಪ್ರಾಯಿಸಿದರು.

ಹೊಸದರತ್ತ ಕವನಗಳು ಹೊರಳಿದರೆ ಮಾತ್ರ ಪರಿಣಾಮಕಾರಿ ಯಾಗಬಲ್ಲದು. ಆ ನಿಟ್ಟಿನಲ್ಲಿ ಹೇಮಂತ್ ಅವರ ಕವನಗಳು ಯಶಸ್ಸು ಕಂಡಿವೆ. ಸಂಕಲನದಲ್ಲಿ ಗಂಭೀರತೆ, ಪ್ರಣಯ, ಕಾಳಜಿ, ಸಮಾಜದ ಮೇಲಿನ ಪ್ರೀತಿ, ಸಿಟ್ಟುಗಳಿವೆ. ಹಲವಷ್ಟು ವೈಶಿಷ್ಟö್ಯತೆ ಗಳನ್ನು ಸಂಕಲನದಲ್ಲಿ ಕಾಣ ಬಹುದಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಭಾರಧ್ವಾಜ್ ಕೆ. ಆನಂದತೀರ್ಥ ಮಾತನಾಡಿ, ತಮ್ಮಲ್ಲಿ ಮುಗ್ಧತೆಯಿದ್ದರೆ ಮಾತ್ರ ಮತ್ತೊಬ್ಬರ ಮನವನ್ನು ಮುಟ್ಟ ಬಹುದು. ಈ ನಿಟ್ಟಿನಲ್ಲಿ ಕವಿಗಳು ಮುಕ್ತವಾಗಿರಬೇಕು. ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ಬರಹಗಾರರ ನಡುವೆ ಬರವಣಿಗೆಗಾಗಿ ಪೈಪೋಟಿ ಗಳು ಏರ್ಪಟ್ಟಿವೆ. ಇದು ಆರೋಗ್ಯ ಪೂರ್ಣವೂ ಹೌದು. ಬರವಣಿಗೆಗಳಿಗೆ ವಿಮರ್ಶೆಗಳಿರಬೇಕು ಎಂದರು.

ಜಿಲ್ಲೆಯಲ್ಲಿ ಹಲವಷ್ಟು ಬರಹಗಾರರು, ಲೇಖಕರು, ಸಾಹಿತ್ಯ ದಿಗ್ಗಜರು ಇದ್ದರೂ ಸಹ ರಾಜ್ಯಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ಈವರೆಗೆ ಲಭಿಸಿಲ್ಲ. ಈ ನಿಟ್ಟಿನಲ್ಲಿ ಜಿಲ್ಲೆಯ ಸಾಹಿತಿಗಳು ಚಿಂತಿಸಬೇಕಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಬರಹಗಾರ ಡಾ. ಕುಶ್ವಂತ್ ಕೋಳಿಬೈಲು ಮಾತನಾಡಿ, ಸಾವಿರ ಮಾತುಗಳಿಗಿಂತ ಒಂದೆರಡು ಸಾಲುಗಳ ಸಾಹಿತ್ಯ ಹೆಚ್ಚು ಪರಿಣಾಮಕಾರಿಯಾಗಿದೆ. ಈ ನಿಟ್ಟಿನಲ್ಲಿ ಪರಿಣಾಮಕಾರಿ ಸಾಹಿತ್ಯದ ಕೃಷಿ ಹೆಚ್ಚಬೇಕಿದೆ ಎಂದರು. ವೇದಿಕೆಯಲ್ಲಿ ಯಡವನಾಡು ಶಿವಬಸವೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಗಣೇಶ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಅಕ್ಷರ ಸ್ನೇಹಿ ಬಳಗದ ಮಿಲನಾ ಭರತ್, ಹೇಮಂತ್ ಪಾರೇರಾ, ಪವಿತ್ರ ಧರ್ಮಪ್ಪ, ಸುಮತಿ ಅವರುಗಳು ನಿರ್ವಹಿಸಿದರು. ಹಿರಿಯ ಸಾಹಿತಿಗಳಾದ ನಯನತಾರಾ, ಕಾಜೂರು ಸತೀಶ್, ಕೃಪಾ ದೇವರಾಜ್, ಜಲಾ ಕಾಳಪ್ಪ, ಶರ್ಮಿಳಾ ರಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.