ಮಡಿಕೇರಿ, ಜ. ೧೨: ಕೊಡವ ಜನಾಂಗದ ಏಳಿಗೆ ಹಾಗೂ ಲೋಕ ಕಲ್ಯಾಣಕ್ಕಾಗಿ ಭಾಗಮಂಡಲದಲ್ಲಿರುವ ಶ್ರೀ ಕಾವೇರಮ್ಮೆ ಕೊಡವ ಮತ್ತು ಅಮ್ಮಕೊಡವ ಹಿತರಕ್ಷಣಾ ಚಾರಿಟೇಬಲ್ ಟ್ರಸ್ಟ್ನ ಜಾಗದಲ್ಲಿ ತಾ.೧೫ರಂದು ವಿಶೇಷ ಪೂಜೆ ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಎಂ.ಬಿ ದೇವಯ್ಯ ತಿಳಿಸಿದರು.

ಮಡಿಕೇರಿಯಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಕೊಡವ ಮತ್ತು ಅಮ್ಮಕೊಡವ ಜನಾಂಗದ ವರಿಗಿದ್ದ ಶಾಪ ವಿಮೋಚನೆಗಾಗಿ ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯದ ಎದುರಿನ ಬಯಲು ಪ್ರದೇಶದಲ್ಲಿ ೨೦೧೪ರ ಜನವರಿ ೧೫ರಿಂದ ೨೨ರವರೆಗೆ ಯಜುಃಸಂಹಿತಯಾಗ ಕೃಷ್ಣಯಜುರ್ವೇದ, ಚಂಡಿಕಾ ಹೋಮ ಮತ್ತು ಇತರೆ ಪೂಜಾ ಕಾರ್ಯ ನಡೆಸಲಾಗಿತ್ತು. ನಂತರದಲ್ಲಿ ಪ್ರತಿ ವರ್ಷ ಜನವರಿಯಲ್ಲಿ ಪೂಜಾ ಕಾರ್ಯ ನಡೆಸಿಕೊಂಡು ಬರಲಾಗಿದೆ. ಅದರಂತೆ ಈ ಬಾರಿಯೂ ತಾ. ೧೫ರಂದು ಬೆಳಿಗ್ಗೆ ೭ ಗಂಟೆಯಿAದ ಗಣಪತಿ ಹೋಮ, ಸತ್ಯನಾರಾಯಣ ಸ್ವಾಮಿ ಪೂಜೆ, ಚಂಡಿಕಾ ಹೋಮ ಹಾಗೂ ಶಥರುದ್ರಾಭಿಷೇಕ ಪಠಣ ಜರುಗಲಿದೆ ಎಂದರು.

ಪೂಜಾ ಕಾರ್ಯದಲ್ಲಿ ಸಂಗ್ರಹ ವಾಗುವ ಹೆಚ್ಚುವರಿ ಹಣವನ್ನು ಕ್ರೋಢೀಕರಿಸಿ ಭಗಂಡೇಶ್ವರ ದೇವಾಲಯದ ಎದುರಿನ ಗದ್ದೆಯ ಒತ್ತಿನಲ್ಲಿ ೫೦ ಸೆಂಟ್ ಜಾಗ ಖರೀದಿಸಿದ್ದು, ಇಲ್ಲಿ ಜನಾಂಗದ ಅನುಕೂಲಕ್ಕಾಗಿ ಒಂದು ಸಭಾಂಗಣ, ಅಡುಗೆ ಕೋಣೆ, ಭೋಜನಾಲಯ, ಸಮುಚ್ಚಯ ಬಹುಮಹಡಿ ಕಟ್ಟಡ ನಿರ್ಮಿಸಲು ತೀರ್ಮಾನಿಸಿದ್ದು, ಸರ್ಕಾರದಿಂದ ಆರ್ಥಿಕ ನೆರವಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿದರು. ಸುದ್ದಿಗೋಷ್ಠಿಯಲ್ಲಿ ಟ್ರಸ್ಟಿಗಳಾದ ಹಂಚೆಟ್ಟಿರ ಮನು ಮುದ್ದಪ್ಪ, ತೋಲಂಡ ಸೋಮಯ್ಯ, ಟಿ.ಡಿ ಶ್ಯಾಮಲ, ಮುಕ್ಕಾಟಿರ ನಾಣಯ್ಯ ಹಾಜರಿದ್ದರು.