ವೀರಾಜಪೇಟೆ, ಜ. ೧೩: ಜಿಲ್ಲಾ ಪೊಲೀಸ್ ಇಲಾಖೆ ಮತ್ತು ವೀರಾಜಪೇಟೆ ಉಪವಿಭಾಗ ಪೊಲೀಸ್ ಠಾಣೆ ಸಂಯುಕ್ತ ಆಶ್ರಯದಲ್ಲಿ ವೀರಾಜಪೇಟೆ ನಗರದಲ್ಲಿ ಮಾದಕ ವಸ್ತುಗಳ ನಿಗ್ರಹ ಜಾಥಾ ಮತ್ತು ಸಾಮಾಜಿಕ ಪಿಡುಗುಗಳ ಬಗ್ಗೆ ಬೃಹತ್ ಜಾಥಾ ಕಾರ್ಯಕ್ರಮಕ್ಕೆ ತಾಲೂಕು ಮೈದಾನದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ಜಾಥಾವು ತಾಲೂಕು ಮೈದಾನ ದಿಂದ ಹೊರಟು ಗಡಿಯಾರ ಕಂಬ, ಖಾಸಗಿ ಬಸ್ಸು ನಿಲ್ದಾಣ, ಮಟನ್ ಮಾರ್ಕೆಟ್, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ದೊಡ್ಡಟ್ಟಿ ಚೌಕಿ, ತೆಲುಗರ ಬೀದಿ, ದಖ್ಖನಿ ಮೊಹಲ್ಲಾ, ಜೈನರ ಬೀದಿ, ಶಾಂತ ಚಿತ್ರಮಂದಿರ ಮಾರ್ಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಾಲೂಕು ಮೈದಾನದಲ್ಲಿ ಮುಕ್ತಾಯವಾಯಿತು.

ನಶೆಮುಕ್ತ ಕೊಡಗು ಜಿಲ್ಲೆ ಅಭಿಯಾನದ ಅಂಗವಾಗಿ ಜನಜಾಗೃತಿ ಜಾಥಾದಲ್ಲಿ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ನಾಗರಿಕರು, ಸಂಘ ಸಂಸ್ಥೆಗಳು ಸದಸ್ಯರು ಭಾಗವಹಿಸಿ ಮಾದಕ ವಸ್ತುಗಳ ವ್ಯಸನದ ವಿರುದ್ಧ ಜಾಗೃತಿ, ಮಾದಕ ದ್ರವ್ಯ ವಿರೋಧಿ ಘೋಷಣೆ ಕೂಗಿ ಅರಿವು ಮೂಡಿಸಿದರು.

ಶಾಸಕ ಪೊನ್ನಣ್ಣ ಅವರು ಜಾಥಾದಲ್ಲಿ ತೆರಳಿ ಬಳಿಕ ತಾಲೂಕು ಮೈದಾನದಲ್ಲಿ ನಡೆದ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ದ್ದೇಶಿಸಿ ಮಾತನಾಡಿ, ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಂಡರೆ ಮಾದಕ ವಸ್ತುಗಳ ಬಳಕೆಯಿಂದ ದೂರ ಉಳಿಯ ಬಹುದು. ಮಾದಕ ವಸ್ತುಗಳನ್ನು ಸೇವನೆ ಮಾಡುವವರು ಹೇಡಿಗಳು. ಬದಲಾದ ಜೀವನ ಶೈಲಿಯಿಂದ ಯುವಕರಲ್ಲಿ ಮಾದಕ ದ್ರವ್ಯ ವ್ಯಸನಿಗಳ ಸಂಖ್ಯೆ ಗಣನೀಯ ಹೆಚ್ಚಳವಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.

(ಮೊದಲ ಪುಟದಿಂದ) ಇತ್ತೀಚಿನ ದಿನಗಳಲ್ಲಿ ಯುವಕರು ಮಾದಕ ವಸ್ತುಗಳಿಗೆ ದಾಸರಾಗುತ್ತಿದ್ದಾರೆ. ಡ್ರಗ್ಸ್ನಿಂದ ಅನೇಕ ಯುವಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಯುವ ಪೀಳಿಗೆಯನ್ನು ಆವರಿಸಿರುವ ಮಾದಕ ವಸ್ತುಗಳು ಅವರನ್ನು ದೈಹಿಕವಾಗಿ ಮಾತ್ರವಲ್ಲ, ಮಾನಸಿಕ ಆರೋಗ್ಯವನ್ನು ಹದಗೆಡಿಸುತ್ತಿದೆ. ಇದರಿಂದ ನಾನಾ ಮಂದಿ ಅಪಾಯಕ್ಕೆ ಸಿಲುಕುತ್ತಿದ್ದಾರೆ. ಮಾದಕ ದ್ರವ್ಯ ಬಳಕೆಯ ವಿರುದ್ಧ ಪಣತೊಡಬೇಕು. ಮಾದಕ ದ್ರವ್ಯ ಮಾರಾಟ ಸೇರಿದಂತೆ ಇತರ ಅಪರಾಧಿ ಚಟುವಟಿಕೆಗಳಲ್ಲಿ ಭಾಗಿಯಾಗುವವರಿಗೆ ನ್ಯಾಯಾಲಯದಿಂದ ಹೆಚ್ಚಿನ ಶಿಕ್ಷೆ ಆಗಲೇಬೇಕು. ನ್ಯಾಯಾಲಯ ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿ ತೀರ್ಪು ವಿಧಿಸುವಂತಾಗಬೇಕು. ಸಮಾಜದ ಪರಿವರ್ತನೆ ವಿದ್ಯಾರ್ಥಿಗಳಿಂದ ಆಗಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕೆ. ರಾಮರಾಜನ್ ಮಾತನಾಡಿ, ಮಾದಕ ವಸ್ತುಗಳ ಸೇವನೆ ಯುವ ಸಮಾಜಕ್ಕೆ ಅಂಟಿದ ದೊಡ್ಡ ಪಿಡುಗು. ಮಾದಕ ವಸ್ತು ಸೇವನೆ, ಸಂಗ್ರಹ, ಮಾರಾಟಕ್ಕೆ ಕಠಿಣ ಶಿಕ್ಷೆ ಇದೆ. ಮಾದಕ ವಸ್ತುಗಳ ಮಾರಾಟದ ಕುರಿತಂತೆ ನಾಗರಿಕರು ಮಾಹಿತಿ ನೀಡುವ ಮೂಲಕ ಮಾದಕ ವಸ್ತುಗಳ ಮಾರಾಟ ಜಾಲವನ್ನು ಬೇಧಿಸಲು ಇಲಾಖೆಗೆ ಸಹಕಾರ ನೀಡಬೇಕು ಎಂದು ಕರೆ ನೀಡಿದರು.

ಮಾದಕ ವಸ್ತುಗಳ ಸೇವನೆಯಿಂದ ಜ್ಞಾಪಕ ಶಕ್ತಿ, ಮಾನಸಿಕ ಗೊಂದಲ, ದೃಢ ನಿರ್ಧಾರವಿಲ್ಲದೆ ಬದುಕನ್ನು ಅರ್ಥೆÊಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಕಾಲೇಜು ಆವರಣ ಮತ್ತು ಸುತ್ತಲೂ ಇಂತಹ ಕೃತ್ಯದಲ್ಲಿ ತೊಡಗುವ ವ್ಯಕ್ತಿಗಳ ಬಗ್ಗೆ ಯುವಕರು ಎಚ್ಚರದಿಂದ ಇರಬೇಕು ಎಂದು ಸಲಹೆ ನೀಡಿದರು. ೨೦೨೧ರಲ್ಲಿ ೧೫ ಪ್ರಕರಣಗಳು ೩೭ ಮಂದಿ ಆರೋಪಿ, ೨೦೨೨ರಲ್ಲಿ ೨೧ ಪ್ರಕರಣ, ೨೦೨೩ರಲ್ಲಿ ೧೦೧ ಪ್ರಕರಣ ೨೪೩ ಮಂದಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ರಾಮರಾಜನ್ ತಿಳಿಸಿದರು.

ಇದೇ ಸಂದರ್ಭ ಶಾಸಕರು ವಿದ್ಯಾರ್ಥಿಗಳಿಗೆ ವ್ಯಸನ ಮುಕ್ತ ಸಮಾಜ, ಸ್ವಚ್ಛ ಸಮಾಜ, ಮಾದಕ ವಸ್ತುಗಳ ಬಳಕೆ ನಿರ್ಮೂಲನೆ ಬಗ್ಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ ರಾಜ್, ವೀರಾಜಪೇಟೆ ಡಿವೈಎಸ್‌ಪಿ ಮೋಹನ್ ಕುಮಾರ್, ವೃತ್ತ ನಿರೀಕ್ಷಕರಾದ ಶಿವರುದ್ರ, ನಗರ ಠಾಣಾಧಿಕಾರಿ ರವೀಂದ್ರ, ಗ್ರಾಮಾಂತರ ಠಾಣಾಧಿಕಾರಿ ಮಂಜುನಾಥ್ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಗಳು, ವೀರಾಜಪೇಟೆ ಪುರಸಭೆ ಮುಖ್ಯಾಧಿಕಾರಿ ಚಂದ್ರಕುಮಾರ್, ಪುರಸಭೆ ಸಿಬ್ಬಂದಿಗಳು, ಪುರಸಭೆ ಸದಸ್ಯರುಗಳು, ಶಾಸಕರ ಪತ್ನಿ ಕಾಂಚನ ಪೊನ್ನಣ್ಣ, ಲಯನ್ಸ್ ಸಂಸ್ಥೆ ಪದಾಧಿಕಾರಿಗಳು, ರೋಟರಿ, ಪ್ರಗತಿ, ಎಸ್‌ಎಂಎಸ್ ಶಾಲೆ ಹಾಗೂ ಸಂತ ಅನ್ನಮ್ಮ ಕಾಲೇಜು, ಕಾವೇರಿ ಕಾಲೇಜು, ಜೂನಿಯರ್ ಕಾಲೇಜು, ಲಿಟಲ್ ಸ್ಕಾರ‍್ಸ್ ಅಕಾಡೆಮಿ ವಿದ್ಯಾರ್ಥಿಗಳು, ದಂತ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ಮ್ಯಾಗ್ನೋಲಿಯಾ ರೆಸಾರ್ಟ್, ನಿಸರ್ಗ ಅಸೋಸಿಯೇಷನ್ ತಂಡ, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.