ಸೋಮವಾರಪೇಟೆ, ಜ. ೧೨ : ಇಲ್ಲಿನ ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎಸ್. ಬದಾಮಿ (೫೫) ಅವರು ಚಿಕ್ಕಮಗಳೂರಿನಲ್ಲಿ ಆಯೋಜನೆ ಗೊಂಡಿದ್ದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಸಂದರ್ಭ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ. ಕಳೆದ ೨೦೧೯ರಿಂದ ಸೋಮವಾರಪೇಟೆ ಪಶುವೈದ್ಯ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ಶಿವಪ್ಪ ಬದಾಮಿ ಅವರು, ಚಿಕ್ಕಮಗಳೂರಿನಲ್ಲಿ ಆಯೋಜನೆ ಗೊಂಡಿದ್ದ ಮೈಸೂರು ವಿಭಾಗ ಮಟ್ಟದ ಪಶುವೈದ್ಯರ ಕ್ರೀಡಾ ಕೂಟದಲ್ಲಿ ಭಾಗವಹಿಸಲು ಚಿಕ್ಕಮಗಳೂರಿಗೆ ಕೊಡಗು ತಂಡದೊAದಿಗೆ ತೆರಳಿದ್ದರು.
ಪ್ರಥಮ ಕ್ರಿಕೆಟ್ ಪಂದ್ಯದಲ್ಲಿ ಉತ್ಸಾಹದಿಂದ ಭಾಗಿಯಾಗಿದ್ದ ಬದಾಮಿ ಅವರು, ನಂತರ ತಂಡದ ಸದಸ್ಯರೊಂದಿಗೆ ಭಾವಚಿತ್ರ ತೆಗೆಸಿಕೊಂಡು ಸಂಭ್ರಮದಲ್ಲಿದ್ದರು. ಎರಡನೇ ಪಂದ್ಯಕ್ಕೂ ಮುನ್ನ ನಡೆಯುತ್ತಿದ್ದ ಇತರ ಎರಡು ತಂಡಗಳ ನಡುವಿನ ಪಂದ್ಯಾಟವನ್ನು ವೀಕ್ಷಿಸುತ್ತಿದ್ದ ಸಂದರ್ಭ ಅಪರಾಹ್ನ ೩.೧೫ರ ಸುಮಾರಿಗೆ ಹೃದಯಾಘಾತಕ್ಕೀಡಾದರು. ತಕ್ಷಣ ಸ್ಥಳದಲ್ಲಿದ್ದ ವೈದ್ಯರುಗಳು ಉಪಚರಿಸಿ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಮೂಲತಃ ಗದಗ ಜಿಲ್ಲೆಯ ನರಗುಂದ ತಾಲೂಕಿನವರಾದ ಬದಾಮಿ ಅವರು ಸಕಲೇಶಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅಲ್ಲಿಯೇ ಸ್ವಂತ ಮನೆಯನ್ನೂ ಹೊಂದಿದ್ದರು. ೨೦೧೯ ಫೆಬ್ರವರಿಯಲ್ಲಿ ಸೋಮವಾರಪೇಟೆಗೆ ಕರ್ತವ್ಯಕ್ಕೆ ನಿಯೋಜನೆಗೊಂಡು ಪತ್ನಿಯೊಂದಿಗೆ ಪಟ್ಟಣದಲ್ಲಿ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದರು. ನಿನ್ನೆ ಸಂಜೆ ಪತ್ನಿಯನ್ನು ಸಕಲೇಶಪುರಕ್ಕೆ ಕರೆದೊಯ್ದು, ಮನೆಗೆ ಬಿಟ್ಟು ಇಂದು ಬೆಳಿಗ್ಗೆ ಚಿಕ್ಕಮಗಳೂರಿಗೆ ತೆರಳಿದ್ದರು.
ಇವರ ಪುತ್ರಿ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ಪುತ್ರ ಚೆನ್ನೆöÊನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಮೃತದೇಹವನ್ನು ಚಿಕ್ಕಮಗಳೂರಿನ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಮೃತ ಬದಾಮಿ ಅವರು ಪತ್ನಿ ಸೇರಿದಂತೆ ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಸಂತಾಪ: ಗ್ರಾಮೀಣ ಭಾಗದಲ್ಲಿ ಪಶುವೈದ್ಯಕೀಯ ಸೇವೆಗಳನ್ನು ತಲುಪಿಸುವ ಮೂಲಕ ಹೈನ್ಯೋದ್ಯಮಕ್ಕೆ ಸಹಕಾರ ನೀಡುತ್ತಿದ್ದ ಡಾ. ಎಸ್. ಬದಾಮಿ ಅವರ ನಿಧನಕ್ಕೆ ಶಾಂತಳ್ಳಿ ಹಾಲು ಉತ್ಪಾದಕರ ಸಂಘದ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ. ಇದರೊಂದಿಗೆ ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ದೇವಾಲಯ ಧರ್ಮದರ್ಶಿ ಮಂಡಳಿಯ ಅಧ್ಯಕ್ಷ ಕೆ.ಎಂ. ಲೋಕೇಶ್ ಸಂತಾಪ ವ್ಯಕ್ತಪಡಿಸಿದ್ದಾರೆ.