ಸೋಮವಾರಪೇಟೆ, ಜ. ೧೧: ಹಿರಿಯ ಸಾಹಿತಿ, ಉಪನ್ಯಾಸಕರಾಗಿದ್ದ ಪಟ್ಟಣದ ಬಸವೇಶ್ವರ ರಸ್ತೆ ನಿವಾಸಿ ಎಸ್.ಸಿ. ರಾಜಶೇಖರ್(೮೭) ಅವರು ತಾ. ೧೦ರಂದು ರಾತ್ರಿ ಮೈಸೂರಿನಲ್ಲಿ ನಿಧನರಾದರು.

ಕಳೆದ ಕೆಲ ವರ್ಷಗಳಿಂದ ಅನಾರೋಗ್ಯಕ್ಕೀಡಾಗಿದ್ದ ಅವರು ಚಿಕಿತ್ಸೆಗಾಗಿ ಮೈಸೂರಿನಲ್ಲಿರುವ ತಮ್ಮ ಪುತ್ರನ ಮನೆಯಲ್ಲಿ ನೆಲೆಸಿದ್ದರು. ಜಿಲ್ಲೆಯ ಹಿರಿಯ ಸಾಹಿತಿಗಳಲ್ಲಿ ಓರ್ವರಾದ ರಾಜಶೇಖರ್ ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

ಸಾಹಿತ್ಯ ಕ್ಷೇತ್ರದಲ್ಲಿ ಹಲವಷ್ಟು ಕೃತಿಗಳನ್ನು ಹೊರತಂದಿದ್ದ ರಾಜಶೇಖರ್ ಅವರು, ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಜವಾಬ್ದಾರಿ ನಿರ್ವಹಿಸಿದ್ದರು.

ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಸೇರಿದಂತೆ ಹೊರ ಜಿಲ್ಲೆಯಲ್ಲಿಯೂ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದ ಅವರು ನಿವೃತ್ತಿಯ ನಂತರ ಸೋಮವಾರಪೇಟೆಯಲ್ಲಿ ನೆಲೆಸಿದ್ದರು. ಅನಾರೋಗ್ಯ ನಿಮಿತ್ತ ಕೆಲ ವರ್ಷಗಳ ಹಿಂದಷ್ಟೇ ಮೈಸೂರಿಗೆ ತೆರಳಿದ್ದರು. ಮೃತರ ಅಂತ್ಯಕ್ರಿಯೆ ತಾ.೧೧ರಂದು ನೆರವೇರಿತು.

ಸಂತಾಪ: ರಾಜಶೇಖರ್ ಅವರ ನಿಧನಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೇಶವ ಕಾಮತ್, ಮಾಜಿ ಅಧ್ಯಕ್ಷ ಎಂ.ಎಸ್.ಪೂವಯ್ಯ, ಟಿ.ಪಿ. ರಮೇಶ್. ಲೋಕೇಶ್ ಸಾಗರ್, ಸೋಮವಾರಪೇಟೆ ನಿವೃತ್ತ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಹಾಲೇಬೇಲೂರು ನಿರ್ವಾಣಿ ಶೆಟ್ಟಿ ಸೇರಿದಂತೆ ಇತರರು ಸಂತಾಪ ವ್ಯಕ್ತಪಡಿಸಿದ್ದಾರೆ.