ಕೂಡಿಗೆ, ಜ.೧೦ : ಕೂಡಿಗೆ ಸರಕಾರಿ ಪದವಿಪೂರ್ವ ಕಾಲೇಜಿನ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭವು ಕಾಲೇಜಿನ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಕೆ.ಕೆ. ನಾಗರಾಜಶೆಟ್ಟಿ ನೆರವೇರಿಸಿ ನಂತರ ಮಾತನಾಡಿ, ವಿದ್ಯಾರ್ಥಿಗಳು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಕ್ರಿಯಾಶೀಲತೆಯನ್ನು ಮೈಗೂಡಿಸಿ ಕೊಳ್ಳಬೇಕು, ಅಲ್ಲದೆ ಸಮರ್ಥವಾಗಿ ಪಠ್ಯ ಹಾಗೂ ಪಠ್ಯೇತರ ತರಬೇತಿಯಲ್ಲಿ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳುವ ಮೂಲಕ ಇಂದಿನ ಪೈಪೋಟಿ ಯುಗದಲ್ಲಿ ಪರೀಕ್ಷೆಗಳನ್ನು ಎದುರಿಸುವ ಮೂಲಕ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಭಾಗಮಂಡಲ ಕಾವೇರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎ. ಸಿ. ದಿವಾಕರ್ ಮಾತನಾಡಿ, ವಿದ್ಯಾರ್ಥಿಗಳ ಜೀವನದಲ್ಲಿ ಸ್ಪಷ್ಟವಾದ ಗುರಿಯೊಂದಿಗೆ ಸಾಗಿದರೆ ಅದರ ಯಶಸ್ಸು ಕಾಣಬಹುದು. ಅದರ ಜೊತೆಯಲ್ಲಿ ಕಠಿಣ ಪರಿಶ್ರಮ ವಿದ್ಯಾರ್ಥಿ ಜೀವನಕ್ಕೆ ಅತಿ ಮುಖ್ಯವಾಗಿರುತ್ತದೆ. ಶಿಕ್ಷಣಕ್ಕೆ ಶಿಸ್ತು ಮುಖ್ಯ, ಕೆಲವು ಚಿಂತನೆಗಳನ್ನು ಮಾಡುವುದರ ಮೂಲಕ ಶೈಕ್ಷಣಿಕ ಪ್ರಗತಿ ಸಾಧಿಸಬಹುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲ ಡಾ. ಕೆ.ಬಿ. ಬಸಪ್ಪ ವಹಿಸಿ ಮಾತನಾಡಿದರು. ಈ ಸಂದರ್ಭ ಅಭಿವೃದ್ಧಿ ಸಮಿತಿಯ ಸದಸ್ಯರಾದ ಎಂ.ಜೆ. ಮಹೇಶ್, ಜನಾರ್ದನ, ಉಪನ್ಯಾಸಕ ರಾದ ಕಾವೇರಮ್ಮ, ನಾಗಪ್ಪ, ರಮೇಶ್, ಸತೀಶ್, ರವೀಶ್ ಸೇರಿದಂತೆ ಉಪನ್ಯಾಸಕ ವೃಂದ ಹಾಜರಿದ್ದರು. ಕಾಲೇಜಿನ ವರದಿ ವಾಚನವನ್ನು ಉಪನ್ಯಾಸಕ ಸತೀಶ್ ವಾಚಿಸಿದರು.

ಅತಿಥಿಗಳಿಂದ ಸಾಂಸ್ಕೃತಿಕ ಮತ್ತು ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಣೆ ಮಾಡಲಾಯಿತು. ನಂತರ ವಿದ್ಯಾರ್ಥಿಗಳಿಂದ ಅತ್ಯಾಕರ್ಷಕ ಉಡುಗೆ ತೊಡುಗೆಗಳ ಮೂಲಕ ಜನಪದ ನೃತ್ಯ, ಪ್ರದರ್ಶನಗಳು ನಡೆದವು.