ಕುಶಾಲನಗರ, ಜ. ೧೧: ಕುಶಾಲನಗರ ಪಟ್ಟಣದಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ಮಾನಸಿಕ ಅಸ್ವಸ್ಥರು ಮತ್ತು ಅನಾಥ ವ್ಯಕ್ತಿಗಳನ್ನು ಕುಶಾಲನಗರ ಪುರಸಭೆಯ ಮೂಲಕ ಕಾರ್ಯಾಚರಣೆ ನಡೆಸಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರಮುಖರ ಮೂಲಕ ಬೆಂಗಳೂರಿನ ಅನಾಥಾಶ್ರಮಕ್ಕೆ ಸಾಗಿಸಲಾಯಿತು.

ಇತ್ತೀಚಿನ ದಿನಗಳಲ್ಲಿ ಕುಶಾಲನಗರ ಪಟ್ಟಣದಲ್ಲಿ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡುತ್ತಿದ್ದ ಕೆಲವು ಮಾನಸಿಕ ಅಸ್ವಸ್ಥರ ಬಗ್ಗೆ ಪೊಲೀಸರಿಗೆ ದೂರು ಬಂದ ಹಿನ್ನೆಲೆಯಲ್ಲಿ ಅವರನ್ನು ನಿರಾಶ್ರಿತ ಕೇಂದ್ರಕ್ಕೆ ಸ್ಥಳಾಂತರಿಸಲು ಪುರಸಭೆ ಅಧಿಕಾರಿಗಳಿಗೆ ಸ್ಥಳೀಯ ಪೊಲೀಸರು ಸೂಚನೆ ನೀಡಿದ್ದರು. ಈ ಹಿನ್ನೆಲೆ ಕರ್ನಾಟಕ ರಕ್ಷಣಾ ವೇದಿಕೆಯ ಪ್ರಮುಖರಾದ ಸೋಮವಾರಪೇಟೆಯ ಫ್ರಾನ್ಸಿಸ್ ಡಿಸೋಜಾ ಅವರ ಮೂಲಕ ಬೆಂಗಳೂರಿನ ಆಟೋರಾಜ ಅನಾಥಾಲಯ ಸಂಸ್ಥೆಗೆ ಓರ್ವ ಮಹಿಳೆ ಸೇರಿದಂತೆ ಒಟ್ಟು ೧೦ ಮಂದಿಯನ್ನು ಮಂಗಳವಾರ ಬೆಳಿಗ್ಗೆ ಕುಶಾಲನಗರ ಪುರಸಭೆಯ ಆರೋಗ್ಯ ಅಧಿಕಾರಿ ಉದಯಕುಮಾರ್ ನೇತೃತ್ವದಲ್ಲಿ ಪೌರಕಾರ್ಮಿಕರು ಪತ್ತೆಹಚ್ಚಿ ಅವರುಗಳನ್ನು ಬೆಂಗಳೂರಿಗೆ ಕಳುಹಿಸುವ ಕಾರ್ಯಾಚರಣೆ ನಡೆಯಿತು.

ಈ ಸಂದರ್ಭ ಕುಶಾಲನಗರ ಪುರಸಭೆಯ ದಫೇದಾರ್ ಮೋಹನ್ ಕುಮಾರ್, ಪೌರಕಾರ್ಮಿಕರಾದ ಸುರೇಶ್ ಬಾಬು, ಮದನ್, ಕುಮಾರ್, ಹೆಚ್.ಎನ್. ಕೃಷ್ಣ, ಎಸ್.ಆರ್. ಗಣೇಶ್, ಆರ್. ಪುರುಷೋತ್ತಮ್, ಮಹಿಳಾ ಕಾರ್ಮಿಕರಾದ ರೂಪ ಸತೀಶ್, ಲಕ್ಷಿö್ಮ ಮತ್ತಿತರರು ಮಾನಸಿಕ ಅಸ್ವಸ್ಥರನ್ನು ಪತ್ತೆಹಚ್ಚಿ ಕಳುಹಿಸಿಕೊಡುವಲ್ಲಿ ನೆರವಾದರು.