ಶ್ರೀಮಂಗಲ, ಜ. ೧೦: ಅಕಾಲಿಕ ಮಳೆಯಿಂದ ಹಣ್ಣಾದ ಕಾಫಿ ಫಸಲಿಗೆ ದೊಡ್ಡ ನಷ್ಟವಾಗಿದ್ದು, ಕಾಫಿ ನಷ್ಟದ ಬಗ್ಗೆ ಕಾಫಿ ಮಂಡಳಿ ಸಮೀಕ್ಷೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಬೇಕೆಂದು ಕೊಡಗು ಬೆಳೆಗಾರ ಒಕ್ಕೂಟ ಒತ್ತಾಯಿಸಿದೆ.

ಶ್ರೀಮಂಗಲ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಒಕ್ಕೂಟದ ತುರ್ತು ಸಭೆಯಲ್ಲಿ ಈ ಬಗ್ಗೆ ಆಗ್ರಹಿಸಲಾಯಿತು.

ಕಾಫಿ ಕೊಯ್ಲು ಸಂದರ್ಭದಲ್ಲಿ ಹಲವು ದಿನಗಳಿಂದ ನಿರಂತರವಾಗಿ ಅಕಾಲಿಕ ಮಳೆ ಮತ್ತು ಮೋಡಕವಿದ ವಾತಾವರಣದಿಂದ ಕುಯ್ಲು ಮಾಡಿದ ಕಾಫಿ ಕಣದಿಂದ ಕೊಚ್ಚಿ ಹೋಗಿದ್ದು, ಮಳೆ ನೀರಿನಲ್ಲಿ ನೆನೆದು ಕಾಫಿ ಒಣಗದೆ ಕೊಳೆಯುತ್ತಿದೆ. ಇದರೊಂದಿಗೆ ಕುಯ್ಯದೆ ಉಳಿದಿರುವ ಕಾಫಿ ಗಿಡದಿಂದ ನೆಲಕ್ಕೆ ಉದುರಿ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ. ಕಾಫಿ ಗಿಡಗಳಲ್ಲಿ ಮಳೆಗೆ ಹೂವು ಬಂದು ಕಾಫಿ ಫಸಲಿನ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಕಟಾವಿಗೆ ಬಂದಿರುವ ಭತ್ತದ ಬೆಳೆಯು ಸಹ ಅಕಾಲಿಕ ಮಳೆಗೆ ತುತ್ತಾಗಿ ನಷ್ಟವಾಗಿದೆ.

ಪ್ರಸಕ್ತ ವರ್ಷದ ಮುಂಗಾರಿನಲ್ಲಿಯೂ ಕೊಳೆ ರೋಗಕ್ಕೆ ತುತ್ತಾಗಿ ಕಾಫಿ ಪಸಲು ನಷ್ಟವಾಗಿದ್ದರೂ ಪರಿಹಾರ ದೊರೆತಿಲ್ಲ. ಮುಂಗಾರಿನಲ್ಲಿ ಉಂಟಾದ ಕಾಫಿ ನಷ್ಟ ಸೇರಿಸಿ, ಇದೀಗ ಅಕಾಲಿಕ ಮಳೆಗೆ ಕಾಫಿ ಫಸಲು ನಷ್ಟವಾಗಿರುವ ಬಗ್ಗೆ ಕೂಡಲೇ ಕಾಫಿ ಮಂಡಳಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಸರ್ಕಾರ ಕೂಡಲೇ ಎನ್.ಡಿ.ಆರ್.ಎಫ್. ಪರಿಹಾರ ಮೊತ್ತವನ್ನು ಪರಿಷ್ಕರಣೆ ಮಾಡಿ ಪರಿಹಾರ ನೀಡಬೇಕು. ರಾಷ್ಟಿçÃಕೃತ ಮತ್ತು ಸಹಕಾರ ಸಂಘದಲ್ಲಿರುವ ಬೆಳೆಗಾರರ ಬೆಳೆ ಸಾಲವನ್ನು ಮನ್ನಾ ಮಾಡಬೇಕೆಂದು ಒತ್ತಾಯಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಕಾಫಿ ಬೆಳೆಗೆ ಯಾವುದೇ ವಿಮೆ ಪರಿಹಾರ ಸೌಲಭ್ಯವನ್ನು ಸರಕಾರ ಜಾರಿಗೆ ತಂದಿಲ್ಲ, ಆದ್ದರಿಂದ ಪರಿಹಾರ ನೀಡುವುದು ಅನಿವಾರ್ಯವಾಗಿದೆ. ಎನ್.ಡಿ.ಆರ್.ಎಫ್. ಪರಿಹಾರ ಮಾನದಂಡದಡಿ ಪರಿಹಾರ ಒದಗಿಸಲು ಶೇ. ೩೩ ರಷ್ಟು ಬೆಳೆ ನಷ್ಟವಾಗಿರುವ ವರದಿಯನ್ನು ಸಲ್ಲಿಸಬೇಕಾಗಿದೆ. ಈಗಾಗಲೇ ಅರ್ಧದಷ್ಟು ಕಾಫಿ ನಷ್ಟವಾಗಿದೆ. ಹವಾಮಾನ ವೈಪರೀತ್ಯ ಮುಂದುವರೆದರೆ ಇನ್ನಷ್ಟು ಹೆಚ್ಚಿನ ನಷ್ಟ ಉಂಟಾಗಲಿದೆ. ಬೆಳೆಗಾರರ ಸಂಕಷ್ಟಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರ ಸ್ಪಂದಿಸಬೇಕೆAದು ಸಭೆಯಲ್ಲಿ ಒತ್ತಾಯಿಸಲಾಯಿತು.

ಸಭೆಯಲ್ಲಿ ಕೊಡಗು ಬೆಳೆಗಾರ ಒಕ್ಕೂಟದ ಸ್ಥಾಪಕ ಸದಸ್ಯರಾದ ಮಾಣೀರ ಮುತ್ತಪ್ಪ, ಖಜಾಂಚಿ ಮಾಣೀರ ವಿಜಯ ನಂಜಪ್ಪ, ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಶ್ರೀಮಂಗಲ ಹೋಬಳಿ ಬೆಳೆಗಾರ ಒಕ್ಕೂಟದ ಅಧ್ಯಕ್ಷ ಕಾಳಿಮಾಡ ತಮ್ಮು ಮುತ್ತಣ್ಣ, ರಾಜ್ಯ ರೈತ ಸಂಘ ಹಸಿರು ಸೇನೆಯ ಕೊಡಗು ಜಿಲ್ಲಾಧ್ಯಕ್ಷ ಚಿಮ್ಮಂಗಡ ಗಣೇಶ್ ಗಣಪತಿ, ಶ್ರೀಮಂಗಲ ಹೋಬಳಿ ರೈತ ಸಂಘ ಅಧ್ಯಕ್ಷ ಅಯ್ಯಮಾಡ ಹ್ಯಾರಿ ಸೋಮೇಶ್, ಬೆಳೆಗಾರರಾದ ಚೊಟ್ಟೆಯಂಡಮಾಡ ಬೋಸ್ ವಿಶ್ವನಾಥ್, ಚೆಟ್ಟಂಗಡ ಹ್ಯಾರಿ ನಾಣಯ್ಯ, ಉಪ್ಪಾರರ ವೆಂಕಟೇಶ್ ಪ್ರಸಾದ್, ಪೆಮ್ಮಂಡ ಗಿಣಿ ದೇವಯ್ಯ, ಚೊಟ್ಟೆಯಂಡಮಾಡ ರಮೇಶ್ ಬೆಳ್ಯಪ್ಪ ಮತ್ತಿತರರು ಹಾಜರಿದ್ದರು.