ಕುಶಾಲನಗರ, ಜ. ೧೦: ಅಯೋಧ್ಯೆಯಲ್ಲಿ ತಾ. ೨೨ ರಂದು ಶ್ರೀರಾಮ ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ ಕುಶಾಲನಗರದ ಪಟ್ಟಣ ಮತ್ತು ಸುತ್ತಮುತ್ತ ವ್ಯಾಪ್ತಿಯ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಮತ್ತು ಜೀವನದಿ ಕಾವೇರಿಗೆ ವಿಶೇಷ ಮಹಾ ಆರತಿ ಬೆಳಗುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಕುಶಾಲನಗರ ದೇವಾಲಯಗಳ ಒಕ್ಕೂಟ ಆಶ್ರಯದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕುಶಾಲನಗರ ಶ್ರೀ ಗಣಪತಿ ದೇವಾಲಯ ಕಚೇರಿಯಲ್ಲಿ ಒಕ್ಕೂಟದ ಅಧ್ಯಕ್ಷ ಎಂ.ಕೆ. ದಿನೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದೇವಾಲಯಗಳ ಸಮಿತಿ ಪ್ರತಿನಿಧಿಗಳೊಂದಿಗೆ ಈ ಬಗ್ಗೆ ಚರ್ಚೆ ನಡೆಯಿತು.

ತಾ. ೨೨ ರಂದು ಬೆಳಿಗ್ಗೆ ಕುಶಾಲನಗರ ಅಯ್ಯಪ್ಪ ಸ್ವಾಮಿ ದೇವಾಲಯ ಬಳಿ ೯ ಗಂಟೆಗೆ ಜೀವನದಿ ಕಾವೇರಿಗೆ ವಿಶೇಷ ಆರತಿ ಕಾರ್ಯಕ್ರಮ, ನಂತರ ಪಟ್ಟಣದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಬೆಳಿಗ್ಗೆ ೧೧ ಗಂಟೆಗೆ ಕುಶಾಲನಗರ ಆಂಜನೇಯ ದೇವಾಲಯ ಬಳಿ ಎಲ್ಲಾ ದೇವಾಲಯಗಳ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಮಹಿಳಾ ಭಜನಾ ಮಂಡಳಿ ಹಾಗೂ ಭಕ್ತಾದಿಗಳು ಸೇರಿ ವಿಶೇಷ ಪೂಜಾ ಕಾರ್ಯಕ್ರಮ ದಲ್ಲಿ ತೊಡಗಿಸಿಕೊಳ್ಳುವುದು. ಆಂಜನೇಯ ದೇವಾಲಯದಲ್ಲಿ ಮಹಾ ಮಂಗಳಾರತಿ ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ಕಾರ್ಯಕ್ರಮ ಸಂಯೋಜಕರಾದ ಅಮೃತ ರಾಜ್ ತಿಳಿಸಿದ್ದಾರೆ.

ಅಯೋಧ್ಯೆಯ ಶ್ರೀರಾಮ ಪುನರ್‌ಪ್ರತಿಷ್ಠಾಪನ ಕಾರ್ಯಕ್ರಮ ಹಿನ್ನೆಲೆಯಲ್ಲಿ ಕುಶಾಲನಗರ ತಾಲೂಕಿನ ಪ್ರತಿ ಮನೆ ಮನೆಗೆ ಲಾಡು ವಿತರಣೆ ಮಾಡುವ ಬಗ್ಗೆ ಕುಶಾಲನಗರ ಶ್ರೀ ಗಣಪತಿ ದೇವಾಲಯ ಆಡಳಿತ ಮಂಡಳಿ ನಿರ್ಣಯ ಕೈಗೊಂಡಿದೆ ಎಂದು ದೇವಾಲಯ ಸಮಿತಿ ಕಾರ್ಯಾಧ್ಯಕ್ಷರಾದ ಎಂ.ಕೆ. ದಿನೇಶ್ ತಿಳಿಸಿದ್ದಾರೆ.

ಕುಶಾಲನಗರ ದೇವಾಲಯಗಳ ಒಕ್ಕೂಟ ಸಮಿತಿ ಸಭೆ ಸಂದರ್ಭ ಉಪಾಧ್ಯಕ್ಷ ಕೆ. ರಾಮದಾಸ್, ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಎನ್. ಚಂದ್ರಮೋಹನ್, ಖಜಾಂಚಿ ಎಸ್.ಕೆ. ಶ್ರೀನಿವಾಸರಾವ್, ಪುರಸಭೆ ಸದಸ್ಯರಾದ ಅಮೃತರಾಜ್, ದೇವಾಲಯಗಳ ಒಕ್ಕೂಟದ ಪ್ರತಿನಿಧಿಗಳು, ಪಟ್ಟಣದ ವಿವಿಧ ದೇವಾಲಯಗಳ ಆಡಳಿತ ಸಮಿತಿ ಅಧ್ಯಕ್ಷರುಗಳು, ಪದಾಧಿಕಾರಿಗಳು ಇದ್ದರು.