ನಾಪೋಕ್ಲು, ಜ. ೧೦: ಆರ್.ಟಿ.ಐ. ಕಾರ್ಯಕರ್ತನೆಂಬ ಸೋಗು ಹಾಕಿಕೊಂಡು ಹಾರೀಸ್ ಕೆ.ಎ. ಎಂಬಾತ ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆಡಳಿತ ವೈದ್ಯಾಧಿಕಾರಿಗಳಿಗೆ, ಕರ್ತವ್ಯ ನಿರತ ಇತರ ವೈದ್ಯರುಗಳಿಗೆ, ಪಂಚಾಯಿತಿ ಅಧಿಕಾರಿಗಳಿಗೆ ಮತ್ತು ಕಾಲೇಜಿನ ಪ್ರಾಂಶುಪಾಲರು ಮತ್ತು ಉಪನ್ಯಾಸಕರುಗಳಿಗೆ ಮಾನಸಿಕ ಕಿರುಕುಳ ನೀಡುತ್ತಾ ಕರ್ತವ್ಯಕ್ಕೆ ಅಡ್ಡಿಪಡಿಸಿ ಬ್ಲ್ಯಾಕ್ ಮೇಲ್ ದಂಧೆ ನಡೆಸುತ್ತಿದ್ದಾನೆ ಎಂದು ಆರೋಪಿಸಿ ಈತನ ಗಡಿಪಾಡಿಗೆ ಆಗ್ರಹಿಸಿ ಬುಧವಾರ ನಾಪೋಕ್ಲುವಿನಲ್ಲಿ ಪ್ರತಿಭಟನೆ ನಡೆಯಿತು.

ನಾಪೋಕ್ಲು ಠಾಣೆಯ ಮುಂಭಾಗದಲ್ಲಿ ಜಮಾವಣೆಗೊಂಡ ಪ್ರತಿಭಟನಾ ಕಾರರು, ಆರ್.ಟಿ.ಐ. ಕಾರ್ಯಕರ್ತನೆಂದು ಹೇಳಿಕೊಂಡು ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು ಮತ್ತು ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿರುವ ಹಾರೀಸ್ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ, ಕೂಡಲೇ ಈತನನ್ನು ಬಂಧಿಸಿ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್ ಮಾತನಾಡಿ, ವೈದ್ಯರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದು, ನಾಪೋಕ್ಲಿಗೆ ವೈದ್ಯರು ಇಲ್ಲವಾದಲ್ಲಿ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ ಎಂದರು.

ಡಿ.ಸಿ.ಸಿ. ಬ್ಯಾಂಕ್ ಉಪಾಧ್ಯಕ್ಷ ಕೆಟೋಳಿರ ಹರೀಶ್ ಪೂವಯ್ಯ ಮಾತನಾಡಿ, ಆರ್.ಟಿ.ಐ. ಕಾರ್ಯಕರ್ತನೆಂದ ಮೇಲೆ ಸಾರ್ವಜನಿಕ ಸೇವೆಯಲ್ಲಿ ಸ್ವಲ್ಪ ಒಳ್ಳೆಯ ಕೆಲಸವನ್ನು ಮಾಡಬೇಕು. ಆದರೆ ಹಾರೀಸ್ ವಿರುದ್ಧ ತುಂಬಾ ದೂರುಗಳು ಬರುತ್ತಿವೆ. ಆಸ್ಪತ್ರೆಗೆ ಹೋಗಿ ವೈದ್ಯರುಗಳಿಗೆ ಕಿರುಕುಳ ಕೊಟ್ಟು ಬ್ಲಾö್ಯಕ್ ಮೇಲ್ ಮಾಡುತ್ತಿದ್ದಾನೆ. ಹೀಗಾಗಿ ವೈದ್ಯರು ಆಸ್ಪತ್ರೆಗೆ ಬರಲು ಹೆದರುತ್ತಿದ್ದಾರೆ. ಆದ್ದರಿಂದ ಹಾರೀಸ್ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.

ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಪೂವಯ್ಯ ಮಾತನಾಡಿ ಆರ್.ಟಿ.ಐ. ಕಾರ್ಯಕರ್ತನೆಂದು ಹಾರೀಸ್ ಪದೇ ಪದೇ ವೈದ್ಯರುಗಳಿಗೆ ಕಿರುಕುಳ ನೀಡುತ್ತಿದ್ದಾನೆ. ಡಾ. ಜೀವನ್ ಮತ್ತು ದಂತ ವೈದ್ಯರ ಮೇಲೆ ಅನಾವಶ್ಯಕ ದೂರು ಸಲ್ಲಿಸುವುದು, ಮೂಗರ್ಜಿ ಬರೆಯುವುದು, ದೂರವಾಣಿ ಮುಖಾಂತರ ಸುಳ್ಳು ಪುಕಾರು ನೀಡುತ್ತಿದ್ದಾನೆ. ಇತ್ತೀಚೆಗೆ ಡಾ. ಜೀವನ್ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ಬಗ್ಗೆ ದೂರು ದಾಖಲಾದಾಗ ಇನ್ನು ಮುಂದೆ ಈ ರೀತಿ ಮಾಡುವುದಿಲ್ಲ ಎಂದು ಕ್ಷಮೆ ಕೇಳಿ ಕ್ಷಮಾಪಣಾ ಪತ್ರವನ್ನು ಬರೆದುಕೊಟ್ಟಿದ್ದಾನೆ. ಆದರೂ ಸಹ ಅವನಲ್ಲಿ ಯಾವುದೇ ಸುಧಾರಣೆ ಕಾಣಿಸುತ್ತಿಲ್ಲ. ಪದೇಪದೇ ಆಸ್ಪತ್ರೆಗೆ ಬಂದು ಸಿಬ್ಬಂದಿಗಳಿಗೆ ಬೈಯ್ಯುವುದು, ಆಸ್ಪತ್ರೆಯ ಭಾವಚಿತ್ರಗಳನ್ನು ತೆಗೆಯುವುದು ಮಾಡುತ್ತಿದ್ದಾನೆ ಎಂದರು.

ಗ್ರಾಮ ಪಂಚಾಯಿತಿ ಸದಸ್ಯ ಬಿ.ಎಂ. ಪ್ರತೀಪ ಮಾತನಾಡಿ, ಚೆರಿಯಪರಂಬುವಿನಲ್ಲಿ ಬೇರೆಯವರ ಜಾಗವನ್ನು ನನ್ನ ಜಾಗವೆಂದು ಒತ್ತುವರಿ ಮಾಡಿಕೊಂಡಿದ್ದಾನೆ. ಈತನ ದಬ್ಬಾಳಿಕೆ ಮಿತಿ ಮೀರಿದೆ. ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ರೌಡಿ ಲಿಸ್ಟ್ನಲ್ಲಿದ್ದು, ಇಷ್ಟೆಲ್ಲಾ ಪ್ರಕರಣಗಳಿದ್ದರೂ ಕೂಡ ಯಾಕೆ ಕನಿಕರ ತೋರಿಸುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ. ಹೀಗಾಗಿ ನಾಪೋಕ್ಲು ಸಾರ್ವಜನಿಕರಿಗೆ ನ್ಯಾಯ ಸಿಗುವ ಕೆಲಸವಾಗಬೇಕು. ಈತನ ವಿರುದ್ಧ ಸೂಕ್ತ ಕಠಿಣ ಕ್ರಮಕೈಗೊಳ್ಳಬೇಕು. ನಾಪೋಕ್ಲು ಠಾಣಾಧಿಕಾರಿಯವರು ಗಡಿಪಾರಿಗೆ ಶಿಫಾರಸ್ಸು ಮಾಡಬೇಕು. ಪೊಲೀಸ್ ವರಿಷ್ಠಾಧಿಕಾರಿಗಳು ಈ ಬಗ್ಗೆ ಪರಿಶೀಲಿಸಿ ಬಂಧಿಸಬೇಕು ಮತ್ತು ಗಡಿಪಾರು ಮಾಡಬೇಕು. ಇಲ್ಲವಾದಲ್ಲಿ ನಾಪೋಕ್ಲುವಿನ ನಾಲ್ಕು ನಾಡು ಜನ ಸೇರಿ ಉಗ್ರ ಪ್ರತಿಭಟನೆ ನಡೆಸುತ್ತೇವೆ. ಈತನನ್ನು ಗಡಿಪಾರು ಮಾಡದಿದ್ದಲ್ಲಿ ಪೊಲೀಸ್ ವರಿಷ್ಠಾಧಿಕಾರಿಯವರ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ಠಾಣಾಧಿಕಾರಿ ಮಂಜುನಾಥ್ ಅವರಿಗೆ ಮನವಿ ಸಲ್ಲಿಸುವ ಸಂದರ್ಭ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಂ .ಹೆಚ್. ಅಬ್ದುಲ್ ರಹಿಮಾನ್ ಆರ್.ಟಿ.ಐ. ಕಾರ್ಯಕರ್ತನೆಂದು ಹೇಳಿಕೊಳ್ಳುತ್ತಿರುವ ಹಾರೀಸ್, ಜೂನಿಯರ್ ಕಾಲೇಜು, ಸೀನಿಯರ್ ಕಾಲೇಜು ಪ್ರಾಂಶುಪಾಲರಿಗೆ ಕಿರುಕುಳ ನೀಡುತ್ತಾ ೧೦ ವರ್ಷ ಹಿಂದಿನ ಮಾಹಿತಿ ಕೇಳುತ್ತಿದ್ದಾನೆ. ಈತನ ದಬ್ಬಾಳಿಕೆ ವಿಪರೀತ ಆಗಿದೆ. ಕರ್ತವ್ಯದಲ್ಲಿರುವ ವೈದ್ಯರಿಗೆ ತೊಂದರೆ ಕೊಟ್ಟು ಓಡಿಸಿದರೆ ಪಾಪದ ರೋಗಿಗಳು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು. ಠಾಣಾಧಿಕಾರಿ ಮಂಜುನಾಥ್ ಸಾರ್ವಜನಿಕರಿಂದ ಮನವಿ ಪತ್ರವನ್ನು ಸ್ವೀಕರಿಸಿ ಮಾತನಾಡಿ, ದೂರನ್ನು ಮೇಲಾಧಿಕಾರಿಗಳಿಗೆ ತಲುಪಿಸಲಾಗುವುದು ಹಾಗೂ ಅವರ ಆದೇಶದಂತೆ ಮುಂದಿನ ಸೂಕ್ತ ಕಾನೂನಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭ ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಎ. ಮನ್ಸೂರ್ ಆಲಿ, ಗ್ರಾಮ ಪಂಚಾಯಿತಿ ಸದಸ್ಯ ಮಾಚೇಟ್ಟಿರ ಕುಶು ಕುಶಾಲಪ್ಪ, ಮಹಮ್ಮದ್ ಕುರೇಶಿ, ಎಂ. ಐ, ಮಹಮ್ಮದ್ ಟಿ.ಎ, ವಿಎಸ್‌ಎಸ್‌ಎನ್ ನಿರ್ದೇಶಕ ಅರೆಯಡ ರತ್ನ ಪೆಮ್ಮಯ್ಯ, ಶಿವಾಜಿ ಕ್ಲಬ್ ಅಧ್ಯಕ್ಷ ಕೆಲೇಟಿರ ದೀಪು ದೇವಯ್ಯ, ಪಟ್ಟಣ ಮಸೀದಿ ಜಮಾಯತ್ ಮಾಜಿ ಕಾರ್ಯದರ್ಶಿ ಅಹಮದ್ ಟಿ.ಎ, ಕೊಂಡಿರ ಗಣಪತಿ, ಚೋಕಿರ ಸುಧೀಶ್, ಆಸಿಫ್ ಎಂ.ಎ, ರಶೀದ್ ಪಿ.ಎಂ, ಮಿಶ್ರದ್ ಪರವಂಡ, ಅಬ್ದುಲ್ ಅಜೀಜ್ ಪಿ.ಎಂ, ಬದ್ರುದ್ದೀನ್ ಪಿ.ಎಂ, ಇಬ್ರಾಹಿಂ ಎಂ.ಯಸ್, ಅಶ್ರಫ್ ಅಲಿ ಎಂ.ಬಿ, ಮೆಹಮುದ್, ರಫೀಕ್ ಪಿ.ಎಸ್ ಸೇರದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸದಸ್ಯರು ಹಾಗೂ ಇನ್ನಿತರ ಗ್ರಾಮಸ್ಥರು ಉಪಸ್ಥಿತರಿದ್ದರು.