ಅಯೋಧ್ಯೆಯಲ್ಲಿ ಶ್ರೀರಾಮಮಂದಿರದ ನಿರ್ಮಾಣದ ಕನಸು ನನಸಾಗುತ್ತಿರುವ ಸಂಭ್ರಮದಲ್ಲಿ ಇಂದಿನ ಪೀಳಿಗೆ ಇದೆ. ಆದರೆ ಇಂಥ ಮಂದಿರ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಅದೆಷ್ಟು ಲಕ್ಷ ಭಕ್ತರ ಪರಿಶ್ರಮವಿದೆ. ಹೋರಾಟವಿದೆ. ಬಲಿದಾನವಿದೆ. ಸಂಕಲ್ಪವಿದೆ. ರಾಜಕೀಯವಿದೆ ವಿಷಾದವಿದೆ ಎಂಬುದು ಕೂಡ ರಾಮನ ಪಟ್ಟಾಭಿಷೇಕ ಸಂದರ್ಭ ತಿಳಿಯಲೇಬೇಕಾಗಿದೆ. ಏಕೆಂದರೆ ಇಂತಹ ಹೋರಾಟವೇ ಇಂದು ಅಯೋಧ್ಯೆಯಲ್ಲಿ ಶ್ರೀರಾಮನಿಗೆ ಸುಸಜ್ಜಿತ ಮಂದಿರ ನಿರ್ಮಾಣವಾಗಲು ಕಾರಣವಾಗಿದೆ.
೧೯೮೪ ರಲ್ಲಿ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣ ಅಭಿಯಾನಕ್ಕೆ ವಿಶ್ವ ಹಿಂದೂ ಪರಿಷತ್ ಮುಂದಾಯಿತು. ಇದೇ ಸಂದರ್ಭ ೩೬ ವರ್ಷಗಳ ಹಿಂದೆ ಉಮೇಶ್ ಚಂದ್ರಕಾAತ್ ಎಂಬವರು ರಾಮನಿಗೆ ಪೂಜೆ, ಆರತಿ ಸಲ್ಲಿಸಲು ಅವಕಾಶ ಕೋರಿ ಕೋರ್ಟ್ಗೆ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆಗೆ ಕೂಡ ನ್ಯಾಯಾಲಯ ಮುಂದಾಯಿತು. ಅಂತೆಯೇ ಪೂಜೆಗೆ ಅವಕಾಶ ನೀಡುವಂತೆಯೂ ಅಯೋಧ್ಯೆಯಲ್ಲಿನ ದೇವಾಲಯದ ಬಾಗಿಲು ತೆರೆಯುವಂತೆಯೂ ಉತ್ತರ ಪ್ರದೇಶ ಸರ್ಕಾರಕ್ಕೆ ಕೋರ್ಟ್ ಆದೇಶಿಸಿತ್ತು.
ತೀರ್ಪಿನ ವಿರುದ್ಧ ಕೆಲವು ಮುಸ್ಲಿಂ ಸಂಘಟನೆಗಳ ಪ್ರಮುಖರು ತೀವ್ರ ಪ್ರತಿಭಟನೆಗೆ ಮುಂದಾದರು. ಕೋಮು ಸಂಘರ್ಷಗಳಿಗೂ ಈ ಪ್ರಕರಣ ಕಾರಣವಾಯಿತು. ೧೯೮೯ ರಲ್ಲಿ ಹೈಕೋರ್ಟ್ ಮತ್ತೊಂದು ತೀರ್ಪು ನೀಡಿ ಅಯೋಧ್ಯೆಯ ವಿವಾದಿತ ಕಟ್ಟಡದಲ್ಲಿ ಯಥಾ ಸ್ಥಿತಿ ಕಾಪಾಡಿಕೊಳ್ಳುವಂತೆ ಸೂಚಿಸಿತು.
ಉತ್ತರ ಪ್ರದೇಶದಲ್ಲಿ ಆಗ ಮುಲಾಯಂ ಸಿಂಗ್ ಯಾದವ್ ಅವರ ಸಮಾಜವಾದಿ ಪಕ್ಷದ ಸರ್ಕಾರ ಅಧಿಕಾರದಲ್ಲಿತ್ತು.
೧೯೮೯ ರ ನವೆಂಬರ್ ೧೦ ರಂದು ವಿಶ್ವ ಹಿಂದೂ ಪರಿಷತ್ಗೆ ವಿವಾದಿತ ಸ್ಥಳವಾದ ೨.೭೭ ಎಕರೆಯ ಹೊರಭಾಗದಲ್ಲಿ ಮಂದಿರ ಶಿಲನ್ಯಾಸಕ್ಕೆ ರಾಜೀವ್ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಅನುಮತಿ ನೀಡಿತ್ತು.
ಅಂತೆಯೇ ಶಿಲಾನ್ಯಾಸಕ್ಕೆ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಮುಂದಾದಾಗ ಮುಲಾಯಂಸಿAಗ್ ಯಾದವ್ ನೇತೃತ್ವದ ಸರ್ಕಾರ ಇಂತಹ ಕರಸೇವಕರ ಮೇಲೆ ಗೋಲಿಬಾರ್ ನಡೆಸಿತ್ತು. ಉತ್ತರ ಪ್ರದೇಶದಲ್ಲಿ ರಾಮಭಕ್ತರು ಸಿಡಿದೆದ್ದರು. ಇದರ ಪರಿಣಾಮವೇ ೧೯೯೧ ರ ಚುನಾವಣೆಯಲ್ಲಿ ಮುಲಾಯಂ ಸಿಂಗ್ ಯಾದವ್ ಸರ್ಕಾರ ಸೋತು ಮೂಲೆ ಪಾಲಾಯಿತು. ಬಿಜೆಪಿಯ ಕಲ್ಯಾಣ್ ಸಿಂಗ್ ನೇತೃತ್ವದಲ್ಲಿ ಬಿಜೆಪಿಯ ಸ್ಪರ್ಧಿಗಳು ಭರ್ಜರಿ ಜಯ ಸಾಧಿಸಿದರು. ಮುಖ್ಯಮಂತ್ರಿಯಾಗಿ ಕಲ್ಯಾಣ್ ಸಿಂಗ್ ಪ್ರತಿಜ್ಞಾ ವಿಧಿ ಸ್ವೀಕರಿಸಿದ ಮರುದಿನವೇ ಅಯೋಧ್ಯೆಗೆ ತೆರಳಿದರು... ಅಯೋಧ್ಯೆಯಲ್ಲಿ ಶ್ರೀ ರಾಮನಿಗೆ ಪೂಜೆ ಸಲ್ಲಿಸಿದ ಕಲ್ಯಾಣ್ ಸಿಂಗ್ ಘೋಷಿಸಿದರು. ಶ್ರೀರಾಮನ ಮೇಲಾಣೆ.... ಮಂದಿರ್ ಯಹೀಂ ಬನೇಗಾ..!
ಇದೇ ಮುಂದಿನ ವರ್ಷಗಳಲ್ಲಿ ದೇಶವ್ಯಾಪಿ ಹಿಂದೂ ಸಂಘಟನೆಗಳ ಪಾಲಿಗೆ ಘೋಷವಾಕ್ಯದಂತಾಯಿತು.
ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಕ್ಕಾಗಿ ಪ್ರಮುಖವಾಗಿ ಎರಡು ಕರಸೇವೆಗಳು ನಡೆದವು. ಎರಡೂ ಕರಸೇವೆಗಳ ಸಂದರ್ಭ ದೇಶವ್ಯಾಪಿ ಗಲಭೆಗಳು ಸಂಭವಿಸಿ ಭಾರತದ ಇತಿಹಾಸದ ಪುಟಗಳಲ್ಲಿ ಇದು ಅತ್ಯಂತ ದೊಡ್ಡ ಹಿಂಸಾಕಾAಡ ಎಂದೇ ದಾಖಲಾಗಿದೆ.
ಮರ್ಯಾದಾ ಪುರುಷೋತ್ತಮ ಎಂದೇ ಬಿಂಬಿತನಾಗಿರುವ ರಘುರಾಮನಿಗೆ ಸೂಕ್ತ ದೇವಾಲಯ ನಿರ್ಮಿಸಲು ಹಿಂಸಾಚಾರ ನಡೆದು ಅನೇಕರು ಪ್ರಾಣ ತೆತ್ತಿದ್ದು, ದೇಶದಲ್ಲಿ ಕೋಮು ಸಂಘರ್ಷಗಳು ಉಂಟಾದದ್ದು, ಸಾವಿರಾರು ಮಂದಿ ಪ್ರಾಣತೆತ್ತು, ಮತ್ತಷ್ಟು ಸಾವಿರ ಮಂದಿ ಗಾಯಗೊಂಡದ್ದು.. ಎಲ್ಲವೂ ಚರಿತ್ರೆಯಲ್ಲಿ ಕರಾಳ ಅಧ್ಯಾಯಗಳಾಗಿ ಉಳಿದು ಹೋಗಲಿದೆ. ಇದೀಗ ಶ್ರೀ ರಾಮನಿಗೆ ಭವ್ಯ ಮಂದಿರ ಲೋಕಾರ್ಪಣೆಯಾಗುವ ಸಂದರ್ಭ ಆ ಮಂದಿರಕ್ಕಾಗಿ ಏನೆಲ್ಲಾ ಸಂಭವಿಸಿತ್ತು ಎಂದು ಸ್ಥೂಲವಾಗಿ ಮೆಲುಕು ಹಾಕಿದರೆ ಮಾತ್ರ ಶ್ರೀ ರಾಮ ಮಂದಿರಕ್ಕಾಗಿ ಅದೆಷ್ಟು ಮಂದಿ ತ್ಯಾಗ.. ಪ್ರಾಣ ಮತ್ತು ಜೀವನ ತ್ಯಾಗ ಮಾಡಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.
ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣವಾಗಲೇಬೇಕೆಂಬ ಹಿಂದೂಗಳ ಬೇಡಿಕೆಗೆ ಅಂದಿನ ದಿನಗಳಲ್ಲಿ ಯಾವುದೇ ನಿರೀಕ್ಷಿತ ಫಲ ದೊರಕದೇ ಇದ್ದಾಗ, ಹೋರಾಟದ ಕಿಚ್ಚು ದೇಶದ ಅಲ್ಲಲ್ಲಿ ಹೆಚ್ಚಾಗತೊಡಗಿತು. ಬಿಜೆಪಿಯ ಪ್ರಮುಖರಾದ ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲ್ ಕೃಷ್ಣ ಅಡ್ವಾನಿ ಅಯೋಧ್ಯೆ ವಿಚಾರವನ್ನು ರಾಜಕೀಯವಾಗಿ ಮುನ್ನಲೆಗೆ ತರುವಲ್ಲಿ ಯಶಸ್ವಿಯಾಗುತ್ತಾರೆ. ಹೀಗಾಗಿಯೇ ಭಾರತೀಯ ಜನತಾ ಪಾರ್ಟಿ ದೇಶದಲ್ಲಿ ಹಿಂದೂ ಪರ ಪಕ್ಷವಾಗಿ ಗುರುತಿಸಿಕೊಂಡು ಮುಂದಿನ ದಿನಗಳಲ್ಲಿ ಪ್ರಬಲ ಅಸ್ತಿತ್ವ ಪಡೆಯತೊಡಗುತ್ತದೆ. ೧೯೮೩ರಲ್ಲಿ ಸೋಮನಾಥಪುರದಿಂದ ಅಯೋಧ್ಯೆಯವರೆಗೆ ಅಡ್ವಾನಿ ಆಯೋಜಿಸಿದ ಶ್ರೀ ರಾಮ ರಥಯಾತ್ರೆ ಭಾರತಾದ್ಯಂತ ಮಿಂಚಿನ ಸಂಚಲನ ಉಂಟು ಮಾಡುತ್ತದೆ. ರಥಯಾತ್ರೆಗೆ ವಿರೋಧ ವ್ಯಕ್ತಪಡಿಸಿದ ಸಂದರ್ಭ ಕೋಮು ಗಲಭೆಗಳು ಸಂಭವಿಸುತ್ತದೆ. ಈ ನಡುವೇ ಅಡ್ವಾನಿ ರಥಯಾತ್ರೆಯನ್ನು ಯಶಸ್ವಿಯಾಗಿಸಿದ್ದಲ್ಲದೇ ಬಿಜೆಪಿಯನ್ನೂ ದೇಶವ್ಯಾಪಿ ಮನೆಮಾತಾಗುವಂತೆ ಮಾಡುವಲ್ಲಿ ಸಫಲರಾಗುತ್ತಾರೆ.
೧೯೮೫ ರಲ್ಲಿ ಉಡುಪಿಯಲ್ಲಿ ಪೇಜಾವರ ಮಠಾಧೀಶರಾದ ವಿಶ್ವೇಶ್ವರ ತೀರ್ಥ ಸ್ವಾಮೀಜಿಗಳ ನೇತೃತ್ವದಲ್ಲಿ ಸಂತ ಸಮಾವೇಶದಲ್ಲಿ ಅಯೋಧ್ಯೆಯಲ್ಲಿನ ದೇವಾಲಯಕ್ಕೆ ಹಾಕಲಾದ ಬೀಗ ತೆರವುಗೊಳಿಸದೇ ಇದ್ದಲ್ಲಿ ತಾವು ಆತ್ಮಾಹುತಿ ಮಾಡಿಕೊಳ್ಳುವುದಾಗಿ ೫೦ ಸಂತರು ಬೆದರಿಕೆ ಒಡ್ಡಿ ಕೇಂದ್ರಕ್ಕೆ ಎಚ್ಚರಿಕೆ ಗಂಟೆಯ ಸಂದೇಶ ನೀಡುತ್ತಾರೆ. ಇದರಿಂದಾಗಿಯೇ ರಾಜೀವ್ ಗಾಂಧಿ ಸರ್ಕಾರವು ೧೯೮೬ ರ ಫೆಬ್ರವರಿ ೧ ರಂದು ದೇವಾಲಯಕ್ಕೆ ಹಾಕಿದ್ದ ಬೀಗ ತೆರವು ಮಾಡುತ್ತದೆ. ೧೯೮೭ ಏಪ್ರಿಲ್ ೧ ರಂದು ಅಯೋಧ್ಯೆಯಲ್ಲಿ ಸಂಭ್ರಮದಿAದ ದೀಪಾವಳಿ ಆಚರಿಸಲ್ಪಡುವಂತಾಗುತ್ತದೆ. ೧೯೯೦ ರ ಅಕ್ಟೋಬರ್ ೩೦ ರಂದು ಬಾಬರಿ ಮಸೀದಿ ತೆರವಿಗೆ ವಿಶ್ವ ಹಿಂದೂ ಪರಿಷತ್ ಕರಸೇವೆಗೆ ಹಿಂದೂಗಳಿಗೆ ಕರೆ ನೀಡುತ್ತದೆ. ಇದಕ್ಕಾಗಿ ಆಯೋಜಿತ ರಥಯಾತ್ರೆಗೆ ಅಂದಿನ ಬಿಹಾರ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ತಡೆಯೊಡ್ಡಲು ಮುಂದಾಗುತ್ತಾರೆ. ಇದರಿಂದಾಗಿಯೂ ಕೋಮು ಸಂಘರ್ಷ ಸಂಭವಿಸಿ ಅನೇಕರು ಸಾವನ್ನಪ್ಪುತ್ತಾರೆ. ಪೊಲೀಸರ ಸರ್ಪಗಾವಲು ಭೇದಿಸಿ ಅ. ೩೦, ೧೯೯೦ ರಂದು ಬಾಬರಿ ಮಸೀದಿ ಮೇಲೆ ಹತ್ತಿದ ಹಿಂದೂ ಕಾರ್ಯಕರ್ತರು ವಿವಾದಿತ ಕಟ್ಟಡ ಮೇಲೆ ಭಗವಾಧ್ವಜ ಹಾರಿಸುವಲ್ಲಿ ಸಫಲರಾಗುತ್ತಾರೆ. ಪೊಲೀಸರ ಗೋಲಿಬಾರ್ಗೆ ೩೦೦ಕ್ಕೂ ಅಧಿಕ ಕಾರ್ಯಕರ್ತರು ಬಲಿಯಾಗುತ್ತಾರೆ. ಗಲಭೆ ಮಾಡಬೇಡಿ, ಶ್ರೀ ರಾಮ ದರ್ಶನಕ್ಕೆ ಅವಕಾಶ ಕಲ್ಪಿಸುತ್ತೇವೆ ಎಂದು ಉತ್ತರ ಪ್ರದೇಶ ಸರ್ಕಾರ ಘೋಷಿಸಿದ ಬಳಿಕವೇ ಕರಸೇವಕರು ಸ್ಥಳದಿಂದ ನಿರ್ಗಮಿಸುತ್ತಾರೆ.
ಕಲ್ಯಾಣ್ ಸಿಂಗ್ ಸರ್ಕಾರ ಅಯೋಧ್ಯೆಯಲ್ಲಿ ೨.೭೭ ಎಕರೆ ಜಾಗ ಖರೀದಿ ಮಾಡುತ್ತದೆ. ಇಲ್ಲಿಯೇ ಸಂಘ ಪರಿವಾರದವರು ಶ್ರೀ ರಾಮ ಮಂದಿರಕ್ಕೋಸ್ಕರ ಭದ್ರವಾದ ಅಡಿಪಾಯ ನಿರ್ಮಿಸಿದರು. ಇದುವೇ ರಾಮ ಮಂದಿರಕ್ಕೋಸ್ಕರ ರೂಪಿಸಲಾದ ಪ್ರಥಮ ಭೂಮಿಪೂಜೆ ಎಂದು ಆ ಸಂದರ್ಭ ವಿಶ್ವ ಹಿಂದೂ ಪರಿಷತ್ ಘೋಷಿಸಿತ್ತು.
೧೯೯೨ ರ ಡಿಸೆಂಬರ್ ೬ ರಂದು ಅಯೋಧ್ಯೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ದೇಶದ ಹಲವೆಡೆಗಳಿಂದ ಕರಸೇವಕರ ಹೆಸರಿನಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಅಯೋಧ್ಯೆಗೆ ಸಾಗರೋಪಾದಿಯಲ್ಲಿ ಬಂದು ಸೇರಿದರು.
ಕೇಂದ್ರದಲ್ಲಿ ಆ ಸಂದರ್ಭ ಕಾಂಗ್ರೆಸ್ನ ಪಿ.ವಿ. ನರಸಿಂಹರಾವ್ ಸರ್ಕಾರ ಇತ್ತು. ನರಸಿಂಹರಾವ್ ಕೂಡ ಪರೋಕ್ಷವಾಗಿ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಬೆಂಬಲ ಸೂಚಿಸಿದ್ದರು ಎಂದು ಕೆಲವು ದಿನಗಳ ಬಳಿಕ ಗುಲ್ಲೆದ್ದಿತ್ತು. ಅದಕ್ಕೆ ತಕ್ಕಂತೆ ಡಿ. ೬ ರಂದು ಅಯೋಧ್ಯೆಯಲ್ಲಿ ಕಂಡುಕೇಳರಿಯದಷ್ಟು ಸಂಖ್ಯೆಯಲ್ಲಿ ಕರಸೇವಕರು ಬಂದಾಗ ಕೇಂದ್ರ ಸರ್ಕಾರ ಹೆಚ್ಚಿನ ಮುಂಜಾಗ್ರತೆ ವಹಿಸದೇ ನಿರ್ಲಕ್ಷö್ಯ ತಾಳಿತು. ಇದನ್ನೇ ಬಳಸಿಕೊಂಡ ಕರಸೇವಕರು ಡಿಸೆಂಬರ್ ೬ ರಂದು ಮಧ್ಯಾಹ್ನದ ವೇಳೆಗೆ ವಿವಾದಿತ ಬಾಬರಿ ಮಸೀದಿಯ ಮೂರು ಗುಮ್ಮಟಗಳ ಮೇಲೆ ಹತ್ತಿದ್ದಲ್ಲದೇ ಅದನ್ನು ಕೆಡವಲು ಪ್ರಾರಂಭಿಸಿದರು. ಎಲ್ಲಾ ಕಡೆ ಶ್ರೀರಾಮನ ಜೈಘೋಷ ಮೊಳಗತೊಡಗಿತ್ತು. ಲಾಲ್ ಕೃಷ್ಣ ಅಡ್ವಾನಿ, ಮುರಳಿ ಮನೋಹರ್ ಜೋಷಿ, ಉಮಾಭಾರತಿ, ವಿನಯ್ ಕಟಿಯಾರ್, ಅಶೋಕ್ ಸಿಂಘಲ್ ರಂಥ ಅನೇಕ ಪ್ರಮುಖರು ಕೂಡ ಕರಸೇವಕರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದರು.
ನಾಯಕರು ಅಯೋಧ್ಯೆಯ ಈ ಕಾರ್ಯಾಚರಣೆ ಹಿಂದಿದ್ದರು. ಆದರೆ ಹಿಂದೂ ಸಮುದಾಯದ ನೈಜ ಕಾರ್ಯಕರ್ತರು ಕರಕಸೇವಕರಾಗಿ ಮಸೀದಿ ಮೇಲೆ ಹತ್ತಿದ್ದಲ್ಲದೇ ಗುಮ್ಮಟಗಳನ್ನು ಕೆಡವಲು ಪ್ರಾರಂಭಿಸಿದರು. ಸಂಜೆ ೫ ಗಂಟೆ ವೇಳೆಗೆ ಸೂರ್ಯಾಸ್ತಮಾನಕ್ಕೆ ಕೆಲವೇ ಸಮಯ ಇರುವಾಗ ಬಾಬರಿ ಮಸೀದಿ ಸಂಪೂರ್ಣವಾಗಿ ಕೆಡವಲ್ಪಟ್ಟಿತ್ತು.
ಇದೇ ವಿಚಾರವಾಗಿ ದೇಶವ್ಯಾಪಿ ಭಾರೀ ಸಂಘರ್ಷ ಉಂಟಾಯಿತು. ಹಿಂದೂ ಮುಸ್ಲಿಂ ಸಮುದಾಯಗಳ ನಡುವೇ ಗಲಭೆಗಳು ಉಂಟಾದವು. ದೇಶವ್ಯಾಪಿ ೨ ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು. ಅಯೋಧ್ಯೆಯಲ್ಲಿಯೇ ೬೦ಕ್ಕೂ ಅಧಿಕ ಕರಸೇವಕರು ಪೊಲೀಸ್ ಗುಂಡೇಟಿಗೆ ಕೊನೆ ಉಸಿರೆಳೆದಿದ್ದರು. ಘಟನೆಯ ನೈತಿಕ ಹೊಣೆ ಹೊತ್ತ ಕಲ್ಯಾಣ್ ಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಕೇಂದ್ರ ಸರ್ಕಾರ ಉತ್ತರ ಪ್ರದೇಶದಲ್ಲಿ ರಾಷ್ಟçಪತಿ ಆಡಳಿತ ಹೇರಿತು.
ಕೇಂದ್ರದಲ್ಲಿನ ಕಾಂಗ್ರೆಸ್ ಸರ್ಕಾರದ ಮೌನದ ಬಗ್ಗೆ ಸಾಕಷ್ಟು ಆಕ್ರೋಶ ಕಂಡುಬAತು. ಕಾಂಗ್ರೆಸ್ನೊಳಗೇ ಎರಡು ಗುಂಪುಗಳಾದವು. ಅಯೋಧ್ಯೆಯಲ್ಲಿನ ಶ್ರೀ ರಾಮ ಮಂದಿರ ನಿರ್ಮಾಣ ಬಗ್ಗೆ ಯಾವ ಪ್ರತಿಕ್ರಿಯೆ ವ್ಯಕ್ತಪಡಿಸಬೇಕು. ರಾಮನ ಪರ ನಿಲ್ಲಬೇಕೋ ಮಸೀದಿ ಕೆಡವಿದ್ದನ್ನು ಖಂಡಿಸಬೇಕೋ ಎಂಬ ಧ್ವಂದ್ವದಲ್ಲಿ ಅನೇಕ ರಾಜಕಾರಣಿಗಳು ಸಿಲುಕಿದ್ದರು.
ಕೊನೆಗೂ ಎಚ್ಚೆತ್ತ ಕೇಂದ್ರ ಸರ್ಕಾರದ ಪ್ರಧಾನಿ ನರಸಿಂಹರಾವ್, ಡಿಸೆಂಬರ್ ೧೬ ರಂದು ಅಂದರೆ ಘಟನೆ ಸಂಭವಿಸಿದ ೧೦ ದಿನಗಳ ಬಳಿಕ, ಘಟನೆಯ ತನಿಖೆಗಾಗಿ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರಾದ ಎಂ.ಎಸ್. ಲಿಟರ್ ಹಾನ್ ನೇತೃತ್ವದಲ್ಲಿ ತನಿಖಾ ಆಯೋಗವನ್ನು ನೇಮಿಸಿತ್ತಲ್ಲದೇ ೩ ತಿಂಗಳ ಒಳಗಾಗಿ ಅಯೋಧ್ಯೆಯ ಮಸೀದಿ ಕೆಡವಲ್ಪಟ್ಟ ಪ್ರಕರಣದ ತನಿಖಾ ವರದಿ ಸಲ್ಲಿಸುವಂತೆ ಸೂಚಿಸಿತ್ತು.
ವಿಳಂಬಗೊAಡ ತನಿಖಾ ವರದಿ
ವಿಪರ್ಯಾಸ ಎಂಬAತೆ, ಲಿಟರ್ ಹಾನ್ ಸಮಿತಿಯು ೩ ತಿಂಗಳಲ್ಲಿ ಹೋಗಲಿ ೩ ವರ್ಷಗಳಾದರೂ ತನಿಖಾ ವರದಿ ಸಲ್ಲಿಸಲೇ ಇಲ್ಲ. ಆ ಸಮಿತಿಯು ತನಿಖಾ ವರದಿ ನೀಡಿದ್ದು ೧೭ ವರ್ಷಗಳ ಬಳಿಕ!
ಕೇಂದ್ರದಲ್ಲಿ ಕಾಂಗ್ರೆಸ್ ಬದಲಿಗೆ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರ ಮುಂದಿನ ಚುನಾವಣೆಯಲ್ಲಿ ಅಸ್ತಿತ್ವಕ್ಕೆ ಬಂತು. ೨೦೦೨ ರ ಮಾರ್ಚ್ನಲ್ಲಿ ಅಯೋಧ್ಯೆಯಲ್ಲಿ ವಿಶ್ವ ಹಿಂದೂ ಪರಿಷತ್ ಸಂಘಟಿಸಿದ್ದ ಮಂದಿರವನ್ನು ನಿರ್ಮಾಣ ಮಾಡುವ ಸಂಕಲ್ಪ ಸಮಾವೇಶದಲ್ಲಿ ಪಾಲ್ಗೊಂಡು ಮನೆಗೆ ವಾಪಾಸ್ಸಾಗುತ್ತಿದ್ದ ಹಿಂದೂ ಕಾರ್ಯಕರ್ತರಿದ್ದ ರೈಲಿನ ಮೇಲೆ ಗುಜರಾತ್ ರಾಜ್ಯದ ಗೋದ್ರಾದಲ್ಲಿ ಧಾಳಿ ನಡೆದು ರೈಲಿಗೆ ಬೆಂಕಿ ಇರಿಸಲಾಗಿತ್ತು. ೫೮ ಹಿಂದೂ ಕಾರ್ಯಕರ್ತರು ಗೋದ್ರಾ ಹತ್ಯಾಕಾಂಡದಲ್ಲಿ ಸಾವನ್ನಪ್ಪಿದ್ದರು. ಆಗ ಗುಜರಾಜ್ನಲ್ಲಿ ಮುಖ್ಯಮಂತ್ರಿಯಾಗಿ ನರೇಂದ್ರ ಮೋದಿ ಆಡಳಿತವಿತ್ತು. ಗೋದ್ರಾ ಘಟನೆಯಾದ ಬಳಿಕವೂ ಉತ್ತರ ಭಾರತದಲ್ಲಿ ಹಿಂಸಾಕೃತ್ಯಗಳು ಮುಂದುವರೆದವು. ಗುಜರಾತ್ನಲ್ಲಿ ಸಂಭವಿಸಿದ ಭೀಕರ ಹಿಂಸಾಕಾAಡದಲ್ಲಿ ಎರಡು ಸಮುದಾಯದ ನೂರಾರು ಮಹಿಳೆಯರು, ಮಕ್ಕಳು ಸಾವನ್ನಪ್ಪಿದ್ದರು. ನರಮೇಧಕ್ಕೆ ಜಗತ್ತೇ ಆಘಾತ ವ್ಯಕ್ತಪಡಿಸಿತ್ತು.
ಈ ಎಲ್ಲಾ ಘಟನಾವಳಿಗಳಿಂದ ನ್ಯಾಯಾಂಗ ಕೂಡ ಆಕ್ರೋಶ ವ್ಯಕ್ತಪಡಿಸಿತ್ತು. ಅಯೋಧ್ಯೆಯ ವಿವಾದಿತ ಜಾಗಕ್ಕಾಗಿ ದೇಶದಲ್ಲಿ ಹಿಂದೂ, ಮುಸಲ್ಮಾನ್ ಸಮುದಾಯದವರ ನಡುವೇ ಸಂಭವಿಸುತ್ತಿದ್ದ ಗಲಭೆಗಳು ವಿಷಾಧನೀಯ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು. ೨೦೦೩ ರಲ್ಲಿ ಅಯೋಧ್ಯೆಯಲ್ಲಿ ಸಮಗ್ರ ತನಿಖೆ ಕೈಗೊಳ್ಳಬೇಕು. ಉತ್ಖನನ ಮಾಡಿ ಅಲ್ಲಿ ದೇವಾಲಯ ಅಥವಾ ಮಸೀದಿಯ ಕುರುಹುಗಳ ಬಗ್ಗೆ ಮಾಹಿತಿ ನೀಡುವಂತೆ ಕೇಂದ್ರ ಪುರಾತತ್ವ ಇಲಾಖೆಗೆ ಕೋರ್ಟ್ ಸೂಚನೆ ನೀಡಿತ್ತು.
ಇಷ್ಟಕ್ಕೆ ಮುಗಿಯಲಿಲ್ಲ... ೨೦೦೫ ರಲ್ಲಿ ಅಯೋಧ್ಯೆಯ ವಿವಾದಿತ ಜಾಗದ ಮೇಲೆ ಉಗ್ರಗಾಮಿಗಳು ಜೀಪಿನಲ್ಲಿ ಧಾಳಿ ನಡೆಸಿದರು. ತಡೆಗೋಡೆಯ ಮೇಲೆ ಸಿಡಿಮದ್ದನ್ನು ಹೊಂದಿದ್ದ ಜೀಪನ್ನು ಹತ್ತಿಸಿ ಸ್ಫೋಟಕ್ಕೆ ಕಾರಣವಾದ ಘಟನೆಯಲ್ಲಿ ೬ ಉಗ್ರರು ಸಾವನ್ನಪ್ಪಿದ್ದರು.
ಇದರಿಂದಾಗಿ ಅಯೋಧ್ಯೆಯಲ್ಲಿ ಪೊಲೀಸ್ ಮತ್ತು ಸೇನಾಪಡೆಯ ಸರ್ಪಗಾವಲನ್ನು ಹಾಕಲಾಯಿತು.
ನ್ಯಾಯಾಲಯದಲ್ಲಿ ಅಯೋಧ್ಯೆಯ ವಿವಾದಿತ ಜಾಗದ ಸಂಬAಧಿತ ವಿಚಾರಣೆ ಮುಂದುವರೆದು ವರ್ಷಾನುಗಟ್ಟಲೆ ಬಳಿಕ ೨೦೧೦ ರಲ್ಲಿ ಅಲಹಬಾದ್ ನ್ಯಾಯಾಲಯ ವಿವಾದಿತ ೨.೭೭ ಎಕರೆ ಜಾಗವನ್ನು ಮೂರು ಪಾಲು ಮಾಡಿ, ಭಗವಾನ್ ರಾಮಲಲ್ಲಾ ವಿರಾಜ್ ಮಾನ್, ನಿರ್ವೋಹಿ ಅಖಾಡ, ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ಗಳಿಗೆ ನೀಡುವಂತೆ ಆದೇಶಿಸಿತ್ತು. ಶ್ರೀರಾಮ ವಿಗ್ರಹವನ್ನು ಅದೇ ಸ್ಥಳದಲ್ಲಿ ಮುಂದುವರೆಸಿ ಪೂಜೆ ಸಲ್ಲಿಸತಕ್ಕದ್ದು ಎಂದು ಕೋರ್ಟ್ ಆದೇಶಿಸಿತ್ತು. ಆದರೆ ಸುನ್ನಿ ವಕ್ಫ್ ಬೋರ್ಡ್ ಈ ಆದೇಶಕ್ಕೆ ಸಮ್ಮತಿ ಸೂಚಿಸಲಿಲ್ಲ. ಮೇಲ್ಮನವಿಯಂತೆ ಮುಸ್ಲಿಂ ಸಂಘಟನೆಯು ಸರ್ವೋಚ್ಚ ನ್ಯಾಯಾಲಯಕ್ಕೆ ನ್ಯಾಯ ಕೋರಿ ಅರ್ಜಿ ಸಲ್ಲಿಸಿದಾಗ ಸುಪ್ರಿಂಕೋರ್ಟ್ನ ಅಂಗಣಕ್ಕೆ ಅಯೋಧ್ಯೆ ವಿವಾದ ಕಾಲಿರಿಸಿತ್ತು.
ಈ ನಡುವೆ ೨೦೧೭ ರಲ್ಲಿ ಸರ್ವೋಚ್ಚ ನ್ಯಾಯಾಲಯದ ಸಲಹೆಯಂತೆ ಎರಡೂ ಸಮುದಾಯದವರು ಸಂಧಾನಕ್ಕೆ ಮುಂದಾದರು. ಸುಪ್ರಿಂಕೋರ್ಟ್ ನ್ಯಾಯಾಧೀಶ ಕಲೀಮುಲ್ಲಾ, ಧಾರ್ಮಿಕ ಗುರು ರವಿಶಂಕರ್, ಹಿರಿಯ ವಕೀಲ ಶ್ರೀರಾಮ್ ಪಾಂಚು ಸಂಧಾನ ಸಮಿತಿಯ ಸದಸ್ಯರಾಗಿ ಅನೇಕ ಸುತ್ತುಗಳ ಮಾತುಕತೆ ನಡೆಸಿದ್ದರು. ಆದರೆ ಸಂಧಾನ ಸಫಲವಾಗಲೇ ಇಲ್ಲ.
ಅಯೋಧ್ಯೆ ಶ್ರೀರಾಮನ ಜನ್ಮಸ್ಥಾನ,, ಇಲ್ಲಿಯೇ ಶ್ರೀರಾಮನಿಗೆ ಮಂದಿರ ನಿರ್ಮಾಣವಾಗಬೇಕು. ಬಾಬರಿ ಮಸೀದಿ ಕೆಡವಲ್ಪಟ್ಟದ್ದರಿಂದಾಗಿ ಮುಸಲ್ಮಾನ್ ಸಮುದಾಯದವರಿಗೆ ಉಂಟಾದ ನೋವಿಗಾಗಿ ಅಯೋಧ್ಯೆಯಿಂದ ೨೫ ಕಿ.ಮೀ. ದೂರದಲ್ಲಿ ಹೊಸ ಮಸೀದಿಯನ್ನು ನಿರ್ಮಾಣ ಮಾಡಬೇಕೆಂದು ಸರ್ವೋಚ್ಚ ನ್ಯಾಯಾಲಯದ ಸಂವಿಧಾನಿಕ ಪೀಠದ ಐವರು ನ್ಯಾಯಾಧೀಶರು ೨೦೧೯ ರ ನವೆಂಬರ್ ೯ ರಂದು ಐತಿಹಾಸಿಕ ತೀರ್ಪು ನೀಡಿದರು. ಈ ಮೂಲಕ ೫೦೦ ವರ್ಷಗಳ ಹೋರಾಟಕ್ಕೆ ತಾರ್ಕಿಕ ಅಂತ್ಯ ದೊರಕಿತು. ಶ್ರೀರಾಮ ಪಟ್ಟಾಭಿಷೇಕಕ್ಕೆ ಮಹೂರ್ತವೂ ನಿಗದಿಯಾಯಿತು.
೩೫ ವರ್ಷಗಳ ಕಾಲ ಭಾರತದ ವಿವಿಧ ನ್ಯಾಯಾಲಯಗಳಲ್ಲಿ ಸಾಕಷ್ಟು ವಿಳಂಬವಾಗಿ ನಡೆದಿದ್ದ ಅಯೋಧ್ಯೆ ವಿವಾದಿತ ಜಾಗ ಯಾರಿಗೆ ಸೇರಬೇಕೆಂಬ ವಿವಾದ ಇತ್ಯರ್ಥವಾಗಿದ್ದೇ ಪ್ರಧಾನಿ ನರೇಂದ್ರ ಮೋದಿ ತಡ ಮಾಡದೇ ೨೦೨೦ ರ ಆಗಸ್ಟ್ ೫ ರಂದು ಅಯೋಧ್ಯೆಯಲ್ಲಿ ಶ್ರೀ ರಾಮನ ಮಂದಿರಕ್ಕಾಗಿ ಭೂಮಿ ಪೂಜೆ ನೆರವೇರಿಸಿಯೇ ಬಿಟ್ಟರು. ಕೋವಿಡ್ ಸಾಂಕ್ರಾಮಿಕ ಕಾಯಿಲೆ ದೇಶವ್ಯಾಪಿ ವ್ಯಾಪಿಸಿದ್ದ ಕಾಲಘಟ್ಟದಲ್ಲಿಯೇ ಅಯೋಧ್ಯೆಯಲ್ಲಿ ಸಾಧು ಸಂತರ ಮುಂದಾಳತ್ವದಲ್ಲಿ ಮೋದಿ ಭೂಮಿ ಪೂಜೆ ನೆರವೇರಿಸಿದ್ದಲ್ಲದೇ ಇನ್ನು ೩ ವರ್ಷಗಳಲ್ಲಿ ಇಲ್ಲಿ ಶ್ರೀ ರಾಮ ಮಂದಿರ ರೂಪುಗೊಳ್ಳಲಿದೆ ಎಂದು ಜಗತ್ತಿಗೇ ಘೋಷಿಸಿದ್ದರು.
ಯಾರೂ ಊಹಿಸದ ರೀತಿಯಲ್ಲಿ ಸಮರೋಪಾದಿಯಲ್ಲಿ ಶ್ರೀರಾಮನ ದೇವಾಲಯ ೩ ವರ್ಷಗಳಲ್ಲಿ ನಿಗದಿತ ಅವಧಿಯಲ್ಲಿ ಬಹುಪಾಲು ಕಾಮಗಾರಿ ಮುಕ್ತಾಯಗೊಳಿಸಿ ಭಕ್ತಾರ್ಪಣೆಗೆ ಸಿದ್ಧಗೊಂಡಿದೆ. ೨೦೨೦ ರ ಫೆಬ್ರವರಿ ೫ ರಂದು ಸರ್ವೋಚ್ಚ ನ್ಯಾಯಾಲಯದ ಆದೇಶದಲ್ಲಿದ್ದಂತೆ ಶ್ರೀ ರಾಮ ಮಂದಿರ ನಿರ್ಮಾಣಕ್ಕಾಗಿ ೧೫ ಮಂದಿ ಪ್ರಮುಖರಿರುವ ಟ್ರಸ್ಟ್ ರಚಿಸಲಾಯಿತು. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಎಂದು ಇದಕ್ಕೆ ಹೆಸರಿಡಲಾಗಿತ್ತು. ಈ ಟ್ರಸ್ಟ್ ಉಸ್ತುವಾರಿಯಲ್ಲಿಯೇ ಇದೀಗ ಶ್ರೀರಾಮ ಮಂದಿರ ನಿರ್ಮಾಣಗೊಂಡಿದೆ.
್ಡ ಅನಿಲ್ ಎಚ್.ಟಿ. ಮೊ.: ೯೮೪೪೦೬೦೧೭೪