ಮಡಿಕೇರಿ, ಜ. ೯: ಮಾಂದಲಪಟ್ಟಿಗೆ ಪ್ರವಾಸಿಗರನ್ನು ಕರೆದೊಯ್ಯುವ ಜೀಪುಗಳಿಗೆ ಒಡ್ಡಿರುವ ನಿರ್ಬಂಧವನ್ನು ತೆರವುಗೊಳಿಸಬೇಕು, ಎರಡು ದಿನಗಳಲ್ಲಿ ತೆರವುಗೊಳಿಸದಿದ್ದರೆ ಜೀಪು ಚಾಲಕರ ಸಂಸಾರ ಸಹಿತ ಸಾರಿಗೆ ಇಲಾಖೆ ಕಚೇರಿ ಎದುರು ಧರಣಿ ನಡೆಸುವದಾಗಿ ಮಾಂದಲ್ಪಟ್ಟಿ ಜೀಪ್ ಮಾಲೀಕರು ಹಾಗೂ ಚಾಲಕರ ಸಂಘದವರು ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಸದಸ್ಯ ಚೆರಿಯಮನೆ ಆನಂದ್, ಕಳೆದ ೩೦ ವರ್ಷಗಳಿಂದಲೂ ಮಾಂದಲಪಟ್ಟಿಗೆ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದೇವೆ, ಇದುವರೆಗೆ ಯಾರೂ ತೊಂದರೆ ನೀಡಿಲ್ಲ, ಈಗಿನ ಸಾರಿಗೆ ಇಲಾಖೆ ಆಧಿಕಾರಿ ತೊಂದರೆ ಮಾಡುತ್ತಿದ್ದಾರೆ, ಕ್ಯಾಂಪರ್ ವಾಹನ ಹಳದಿ ಫಲಕವಾಗಿದ್ದು, ಅದರಲ್ಲಿ ನಾಲ್ಕು ಮಂದಿಯನ್ನು ಕರೆದೊಯ್ಯುವ ಅವಕಾಶವಿದೆ, ಆದರೂ ವಿನಾ ಕಾರಣ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರಸ್ತುತ ಕೃಷಿಯಿಂದಲೂ ಯಾವದೇ ಪ್ರಯೋಜನವಿಲ್ಲ, ಹಾಗಾಗಿ ಪ್ರವಾಸೋದ್ಯಮವನ್ನೇ ನಂಬಿ ಬದುಕುತ್ತಿರುವ ಜೀಪು ಚಾಲಕರ ಮೇಲೆ ನಿರ್ಬಂಧ ಹೇರಿರುವದು ಸರಿಯಲ್ಲ. ಎರಡು ದಿನಗಳಲ್ಲಿ ನಿರ್ಬಂಧ ತೆರವುಗೊಳಿಸದಿದ್ದಲ್ಲಿ ಎಲ್ಲ ಜೀಪು ಚಾಲಕರು ಹಾಗೂ ಕುಟುಂಬದವರು ಸಾರಿಗೆ ಇಲಾಖೆ ಕಚೇರಿ ಎದುರು ಟೆಂಟ್ ಹಾಕಿ ಧರಣಿ ಮಾಡುವದಾಗಿ ಹೇಳಿದರು.
ಕಾನೂನು ಸಲಹೆಗಾರ ವಕೀಲ ಯಾಲದಾಳು ಮನೋಜ್ ಬೋಪಯ್ಯ ಮಾತನಾಡಿ; ಕಳೆದ ಅನೇಕ ವರ್ಷಗಳಿಂದ ಪ್ರವಾಸಿಗರನ್ನು ಜೀಪ್ನಲ್ಲಿ ಕರೆದೊಯ್ಯುವ ಮೂಲಕ ಸ್ಥಳೀಯ ಯುವಕರು ಉದ್ಯೋಗವನ್ನು ಕಂಡುಕೊAಡು ಬದುಕು ಕಟ್ಟಿಕೊಂಡಿದ್ದಾರೆ. ಬಾಡಿಗೆ ಮಾಡುವ ಸಂದರ್ಭ ಯಾರೂ ಕಾನೂನು ಉಲ್ಲಂಘಿಸಿಲ್ಲ. ಆದರೆ ಅಧಿಕಾರಿಗಳು ಬದಲಾದಂತೆ ಯಾರದ್ದೋ ಒತ್ತಡಕ್ಕೆ ಮಣಿದು ಒಂದೊAದು ನಿಯಮ ಜಾರಿ ಮಾಡಲಾಗುತ್ತಿದ್ದು, ಇದರಿಂದ ಚಾಲಕರ ಜೀವನ ಸಂಕಷ್ಟಕ್ಕೆ ಸಿಲುಕುತ್ತಿದೆ. ಸಾಲ ಮಾಡಿ ಜೀಪ್ ಖರೀದಿಸಲಾಗಿದೆ, ಇದೀಗ ದಿಢೀರ್ ಆಗಿ ನಿರ್ಬಂಧ ಹೇರಿರುವುದರಿಂದ ಸಾಲ ತೀರಿಸಲಾಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಇತ್ತೀಚಿನ ಹತ್ತು ವರ್ಷಗಳಲ್ಲಿ ಕೊಡಗಿನಲ್ಲಿ ಹೋಂಸ್ಟೇಗಳು ಹೆಚ್ಚಾದಂತೆ ಮಾಂದಲ್ಪಟ್ಟಿಗೆ ತೆರಳುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಯಿತು. ಅದರಂತೆ ಮಾಂದಲ್ಪಟ್ಟಿಗೆ ಪ್ರವಾಸಿಗರನ್ನು ಕರೆದೊಯ್ಯುವÀ ಜೀಪುಗಳ ಸಂಖ್ಯೆಯು ಬೆಳೆಯಲಾರಂಭಿಸಿತು. ಯಾವಾಗ ಈ ಉದ್ಯೋಗವು ಲಾಭದಾಯಕವಾಗಿ ಕಂಡು ಬರಲು ಆರಂಭಿಸಿತೋ ಅಂದಿನಿAದ ಕೆಲವರು ವೈಯಕ್ತಿಕ ಹಿತಾಸಕ್ತಿಗಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ.
ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ಅಧಿಕಾರಿಗಳು ವರ್ಗಾವಣೆಯಾದಂತೆಲ್ಲ ತಮ್ಮದೇ ಆದ ಒಂದು ಕಾನೂನು ರೂಪುಗೊಳ್ಳುತ್ತದೆ. ಅದರಂತೆ ರಾಜಕೀಯ ವ್ಯಕ್ತಿಗಳು ಮತ್ತು ರಾಜಕೀಯ ಪಕ್ಷಗಳು ಬದಲಾದಂತೆ ತಮ್ಮದೇ ಆದ ಕಾನೂನು ರೂಪಿಸುತ್ತಾರೆ. ಪೊಲೀಸ್ ಇಲಾಖೆ, ಗ್ರಾಮ ಪಂಚಾಯತ್ ಇವರುಗಳ ಕಾನೂನೇ ಬೇರೆ. ಈ ಅತಂತ್ರ ವ್ಯವಸ್ಥೆಯ ನಡುವೆ ಬಲಿಪಶುಗಳಾಗುತ್ತಿರುವವರು ಜೀಪ್ ಮಾಲೀಕರು ಹಾಗೂ ಚಾಲಕರು ಎಂದು ಆರೋಪಿಸಿದರು.
ಜೀಪ್ ಚಾಲನೆಯನ್ನೇ ನಂಬಿರುವ ಸ್ಥಳೀಯ ಯುವಕರು ಸ್ವಂತ ಊರು ಎನ್ನುವ ಕಾರಣಕ್ಕೆ ಇದೇ ಉದ್ಯೋಗದೊಂದಿಗೆ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಇವರಲ್ಲಿ ಮಾಜಿ ಸೈನಿಕರು ಕೂಡ ಇದ್ದಾರೆ, ನಮ್ಮ ಜೀವನದ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ. ದಿನಕ್ಕೊಂದು ನಿಯಮ ಜಾರಿ ಮಾಡಿ ತೊಂದರೆ ನೀಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕುಟುಂಬ ಸಹಿತ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಗೆ ತೆರಳಿ ಯುವಕರ ಉದ್ಯೋಗದ ದೃಷ್ಟಿಯಿಂದ ನಿಯಮಗಳನ್ನು ಸಡಿಲಿಸಿ ಪ್ರವಾಸಿಗರನ್ನು ಕರೆದೊಯ್ಯಲು ಅವಕಾಶ ನೀಡಬೇಕು ಎಂದು ಒತ್ತಾಯಿಸಲಾಗುವುದು. ಇದಕ್ಕೆ ಸೂಕ್ತ ಸ್ಪಂದನ ದೊರೆಯದಿದ್ದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಬ್ಬುಡ ರಾಜ ತಮ್ಮಯ್ಯ, ಟಿ.ಬಿ.ಚೇತನ್, ಎ.ಬಿ.ಲೋಕೇಶ್, ವಕೀಲ ಶಹಬಾಜ಼್ ಆಲಿ ಎಂ.ಎ ಉಪಸ್ಥಿತರಿದ್ದರು.