ಮಗನನ್ನು ಕೊಂದು ಬ್ಯಾಗ್‌ನಲ್ಲಿಟ್ಟು ಸಾಗಾಣೆ

ಬೆಂಗಳೂರು, ಜ. ೯: ತನ್ನ ನಾಲ್ಕು ವರ್ಷದ ಮಗನನ್ನು ಕೊಲೆ ಮಾಡಿ ಮೃತದೇಹವನ್ನು ಬ್ಯಾಗಿನಲ್ಲಿಟ್ಟು ಕಾರಿನಲ್ಲಿ ಸಾಗಣೆ ಮಾಡುತ್ತಿದ್ದ ಖಾಸಗಿ ಸ್ಟಾರ್ಟ್ ಅಪ್ ಕಂಪೆನಿಯ ಮಹಿಳಾ ಸಿಇಓ ಒಬ್ಬರನ್ನು ಐಮಂಗಲ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ‘ಮೈಂಡ್‌ಫುಲ್ ಎಐ ಲ್ಯಾಬ್’ ಎಂಬ ಕೃತಕ ಬುದ್ಧಿಮತ್ತೆ ಕಂಪೆನಿಯ ಸಹ ಸಂಸ್ಥಾಪಕಿ ಸುಚನಾ ಸೇಠ್ (೩೯) ಬಂಧಿತ ಮಹಿಳೆ. ಕಾರು ಚಾಲಕನೇ ಆರೋಪಿಯನ್ನು ಪೊಲೀಸರಿಗೆ ಹಿಡಿದುಕೊಟ್ಟಿದ್ದು, ಮೃತದೇಹವನ್ನು ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ಆರೋಪಿ ಮಹಿಳೆಯನ್ನು ಗೋವಾ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಉತ್ತರ ಗೋವಾದ ‘ಸೋಲ್ ಬ್ಯಾನಿಯನ್ ಗ್ರ‍್ಯಾಂಡ್’ ಹೊಟೇಲ್‌ಗೆ ಮಹಿಳೆ ಪುತ್ರನೊಂದಿಗೆ ಶನಿವಾರ ತೆರಳಿದ್ದಳು. ಸೋಮವಾರ ಕೊಠಡಿ ತೆರವುಗೊಳಿಸಿ ಏಕಾಂಗಿಯಾಗಿ ಹೊರಬಂದಿದ್ದಳು. ಬೆಂಗಳೂರಿಗೆ ಮರಳಲು ಟ್ಯಾಕ್ಸಿ ಬಾಡಿಗೆ ಕೇಳಿದ್ದಳು. ಅನುಮಾನಗೊಂಡ ಹೊಟೇಲ್ ಸಿಬ್ಬಂದಿ ಬಾಲಕನ ಬಗ್ಗೆ ವಿಚಾರಿಸಿದ್ದರು. ಸಂಬAಧಿಕರ ಮನೆಯಲ್ಲಿ ಬಾಲಕನನ್ನು ಬಿಟ್ಟು ಬಂದಿರುವುದಾಗಿ ಮಹಿಳೆ ಸಬೂಬು ನೀಡಿ ಹೊರಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕೊಠಡಿ ಶುಚಿಗೊಳಿಸುವಾಗ ರಕ್ತದ ಕಲೆಗಳನ್ನು ಗಮನಿಸಿದ ಹೊಟೇಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿ ಮಹಿಳೆ ತೆರಳುತ್ತಿದ್ದ ಕಾರಿನ ಚಾಲಕನನ್ನು ಫೋನ್ ಮೂಲಕ ಸಂಪರ್ಕಿಸಿದ್ದಾರೆ. ಕೊಂಕಣಿಯಲ್ಲಿ ಮಾತನಾಡಿದ ಪೊಲೀಸರು, ಘಟನೆ ಬಗ್ಗೆ ಚಾಲಕನಿಗೆ ವಿವರಿಸಿದ್ದಾರೆ. ಆರೋಪಿಯನ್ನು ಪೊಲೀಸರಿಗೆ ಹಿಡಿದುಕೊಡಲು ಸೂಚನೆ ನೀಡಿದ್ದಾರೆ. ಚಾಲಕನಿಗೆ ಈ ಮಾಹಿತಿ ತಿಳಿದಾಗ ಕಾರು ಹೆದ್ದಾರಿ ೪೮ರಲ್ಲಿ ಚಿತ್ರದುರ್ಗದಿಂದ ಹಿರಿಯೂರು ಕಡೆಗೆ ಸಾಗುತ್ತಿತ್ತು. ಐಮಂಗಲ ಸಮೀಪದ ಪೊಲೀಸ್ ಠಾಣೆ ಗಮನಿಸಿದ ಚಾಲಕ, ನೇರವಾಗಿ ಠಾಣೆಗೆ ಕಾರು ತಂದಿದ್ದಾರೆ. ಕಾರಿನ ಡಿಕ್ಕಿ ತೆರೆದಾಗ ಸೂಟ್ ಕೇಸ್ ಬ್ಯಾಗಿನಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ. ಮಹಿಳೆಯನ್ನು ಬಂಧಿಸಿ ಗೋವಾ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

೨೬ ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ ಪ್ರದಾನ

ನವದೆಹಲಿ, ಜ. ೯: ಕ್ರಿಕೆಟಿಗ, ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಮತ್ತು ಪ್ಯಾರಾ ಆರ್ಚರಿ ತಾರೆ ಶೀತಲ್ ದೇವಿ ಸೇರಿದಂತೆ ೨೬ ಕ್ರೀಡಾಪಟುಗಳಿಗೆ ಮಂಗಳವಾರ ರಾಷ್ಟçಪತಿ ದ್ರೌಪದಿ ಮುರ್ಮು ಅವರು ರಾಷ್ಟಿçÃಯ ಕ್ರೀಡಾ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ೨೦೨೩ ರ ಏಕದಿನ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಮೊಹಮ್ಮದ್ ಶಮಿ ಅವರು ಈ ಬಾರಿಯ ಅರ್ಜುನ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಇಂದು ರಾಷ್ಟçಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ದ್ರೌಪದಿ ಮುರ್ಮು ಅವರಿಂದ ಅರ್ಜುನ ಪ್ರಶಸ್ತಿ ಸ್ವೀಕರಿಸಿದರು. ಇನ್ನು ಬ್ಯಾಡ್ಮಿಂಟನ್ ತಾರೆಗಳಾದ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ರಾಂಕಿ ರೆಡ್ಡಿ ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಗೌರವಕ್ಕೆ ಪಾತ್ರರಾಗಿದ್ದಾರೆ. ೨೦೨೩ ರಲ್ಲಿ ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೇರಿಸಿದ್ದ ಈ ಜೋಡಿಗೆ ಖೇಲ್ ರತ್ನ ಪ್ರಶಸ್ತಿ ನೀಡುವ ಮೂಲಕ ಗೌರವಿಸಿದರು. ಅರ್ಜುನ ಪ್ರಶಸ್ತಿಯನ್ನು ಓಜಸ್ ಪ್ರವೀಣ್ ಡಿಯೋಟಾಲೆ (ಆರ್ಚರಿ), ಅದಿತಿ ಗೋಪಿಚಂದ್ ಸ್ವಾಮಿ (ಆರ್ಚರಿ), ಶ್ರೀಶಂಕರ್ (ಅಥ್ಲೆಟಿಕ್ಸ್), ಪಾರುಲ್ ಚೌಧರಿ (ಅಥ್ಲೆಟಿಕ್ಸ್), ಮೊಹಮ್ಮದ್ ಹುಸಾಮುದ್ದೀನ್ (ಬಾಕ್ಸರ್), ಆರ್ ವೈಶಾಲಿ (ಚೆಸ್), ಅನುಷ್ ಅಗರ್ವಾಲ್ (ಇಕ್ವಿಸ್ಟಿçಯನ್), ದಿವ್ಯಾಕೃತಿ ಸಿಂಗ್ (ಈಕ್ವೆಸ್ಟಿçಯನ್ ಡ್ರೆಸ್ಸೇಜ್), ದೀಕ್ಷಾ ದಾಗರ್ (ಗಾಲ್ಫ್), ಕೃಷ್ಣ ಬಹದ್ದೂರ್ ಪಾಠಕ್ (ಹಾಕಿ), ಸುಶೀಲಾ ಚಾನು (ಹಾಕಿ), ಪವನ್ ಕುಮಾರ್ (ಕಬಡ್ಡಿ), ರಿತು ನೇಗಿ (ಕಬಡ್ಡಿ), ನಸ್ರೀನ್ (ಖೋ-ಖೋ), ಪಿಂಕಿ (ಲಾನ್ ಬಾಲ್), ಐಶ್ವರ್ಯ ಪ್ರತಾಪ್ ಸಿಂಗ್ ತೋಮರ್ (ಶೂಟಿಂಗ್), ಇಶಾ ಸಿಂಗ್ (ಶೂಟಿಂಗ್), ಹರಿಂದರ್ ಪಾಲ್ ಸಿಂಗ್ (ಸ್ಕಾ÷್ವಷ್), ಐಹಿಕಾ ಮುಖರ್ಜಿ (ಟೇಬಲ್ ಟೆನಿಸ್), ಸುನಿಲ್ ಕುಮಾರ್ (ಕುಸ್ತಿ), ಆಂಟಿಮ್ ಪಂಘಲ್ (ಕುಸ್ತಿ), ರೋಶಿಬಿನಾ ದೇವಿ (ವುಶು), ಶೀತಲ್ ದೇವಿ (ಪ್ಯಾರಾ ಆರ್ಚರಿ), ಅಜಯ್ ಕುಮಾರ್ (ಅಂಧರ ಕ್ರಿಕೆಟ್), ಪ್ರಾಚಿ ಯಾದವ್ (ಪ್ಯಾರಾ ಕೆನೋಯಿಂಗ್) ಅವರುಗಳು ಪಡೆದುಕೊಂಡರು.

ರಾಜ್ಯಪಾಲರಿಗೆ ಕೋವಿಡ್ ಸೋಂಕು

ಬೆAಗಳೂರು, ಜ. ೯: ಕರ್ನಾಟಕದ ರಾಜ್ಯಪಾಲ ಥಾವರ ಚಂದ್ ಗೆಹ್ಲೋಟ್ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಕ್ವಾರಂಟೈನ್‌ನಲ್ಲಿರುವ ಗೆಹ್ಲೋಟ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ರಾಜಭವನದ ಕಾರ್ಯದರ್ಶಿ ಆರ್. ಪ್ರಭು ಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮುಂದಿನ ದಿನಾಂಕದವರೆಗೆ ರಾಜ್ಯಪಾಲರ ನಿಗದಿತ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ ಎಂದು ಪ್ರಭು ಶಂಕರ್ ಮಾಹಿತಿ ನೀಡಿದ್ದಾರೆ. ಕೊರೊನಾ ಸೋಂಕಿಗೆ ಒಳಗಾಗಿರುವ ರಾಜ್ಯಪಾಲ ಥಾವರ ಚಂದ್ ಗೆಹ್ಲೋಟ್ ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಭ್ರಷ್ಟ ಅಧಿಕಾರಿಗಳಿಗೆ ಶಾಕ್ ನೀಡಿದ ಲೋಕಾಯುಕ್ತ

ಬೆಂಗಳೂರು, ಜ. ೯: ರಾಜ್ಯದ ಹಲವೆಡೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಬೆಳ್ಳಂಬೆಳಿಗ್ಗೆ ಶಾಕ್ ನೀಡಿದ್ದು, ಬೆಂಗಳೂರು, ಬಳ್ಳಾರಿ, ರಾಮನಗರ ಸೇರಿದಂತೆ ರಾಜ್ಯದ ೩೦ ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ಮಾಡಿದ್ದಾರೆ. ದಾಳಿ ವೇಳೆ ಅಧಿಕಾರಿಗಳ ಮನೆಯಲ್ಲಿ ಕಂತೆ ಕಂತೆ ನೋಟು, ಚಿನ್ನ, ಬೆಳ್ಳಿ ಆಭರಣಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ ಲಿಮಿಟೆಡ್ (ಬೆಸ್ಕಾಂ) ಮುಖ್ಯ ಜನರಲ್ ಮ್ಯಾನೇಜರ್ ಎಂ.ಎಲ್. ನಾಗರಾಜ್, ಬೆಂಗಳೂರಿನ ಸೂಪರಿಂಟೆAಡೆAಟ್ ಇಂಜಿನಿಯರ್ ಎನ್. ಸತೀಶ್, ಬೆಂಗಳೂರಿನಲ್ಲಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿರುವ ಸೈಯದ್ ಮುನೀರ್ ಅಹಮದ್, ಚೆನ್ನೇನಹಳ್ಳಿ ಗ್ರಾ.ಪಂ. ಸದಸ್ಯ ಹೆಚ್.ಎಸ್. ಸುರೇಶ್ ಮತ್ತು ರಾಮನಗರದ ನಗರ ಮತ್ತು ಗ್ರಾಮಾಂತರ ಯೋಜನೆಯ ಸದಸ್ಯ ಕಾರ್ಯದರ್ಶಿ ಹಾಗೂ ಜಂಟಿ ನಿರ್ದೇಶಕ ಮಂಜೇಶ್ ಬಿ. ನಿವಾಸದ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಬೆಸ್ಕಾಂ ಮುಖ್ಯ ಜನರಲ್ ಮ್ಯಾನೇಜರ್ ಎಂ.ಎಲ್. ನಾಗರಾಜು ವಿರುದ್ಧ ದಾಖಲಾದ ಅಕ್ರಮ ಆಸ್ತಿ ಪ್ರಕರಣದ ಆಧಾರದ ಮೇಲೆ ಕೂಡ್ಲಿಗಿ, ಬಳ್ಳಾರಿಯ ಐದು ಸ್ಥಳಗಳಲ್ಲಿ ಮತ್ತು ಬೆಂಗಳೂರು ನಗರದ ಎರಡು ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ. ಈ ನಡುವೆ ಮಾಲೂರು ಕಾಂಗ್ರೆಸ್ ಶಾಸಕ ಕೆ.ವೈ. ನಂಜೇಗೌಡ ನಿವಾಸದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಶೋಧ ಕಾರ್ಯ ಮುಂದುವರಿದಿದೆ ಎಂದು ತಿಳಿದುಬಂದಿದೆ.

ಸAಗೀತ ಮಾಂತ್ರಿಕ ಉಸ್ತಾದ್ ರಶೀದ್ ಇನ್ನಿಲ್ಲ

ಕೊಲ್ಕತ್ತಾ, ಜ. ೯: ಖ್ಯಾತ ಸಂಗೀತ ಮಾಂತ್ರಿಕ ಉಸ್ತಾದ್ ರಶೀದ್ ಖಾನ್ (೫೫) ನಿಧನರಾಗಿದ್ದಾರೆ. ಪ್ರಾಸ್ಟೇಟ್ ಕ್ಯಾನ್ಸರ್‌ನಿಂದಾಗಿ ನಗರದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉಸ್ತಾದ್ ರಶೀದ್ ಖಾನ್ ಇಂದು ಮಧ್ಯಾಹ್ನ ನಿಧನರಾಗಿದ್ದಾರೆ. ೧೯೬೮ರ ಜುಲೈ ೧ ರಂದು ಜನಿಸಿದ್ದ ಉಸ್ತಾದ್ ರಶೀದ್ ಖಾನ್, ಹಿಂದೂಸ್ತಾನಿ ಸಂಗೀತ ಸಂಪ್ರದಾಯದ ಶಾಸ್ತಿçÃಯ ಸಂಗೀತಗಾರರಾಗಿದ್ದರು. ೨೦೨೨ರಲ್ಲಿ ಕೇಂದ್ರ ಸರ್ಕಾರ ಅವರು ಸಂಗೀತ ಕ್ಷೇತ್ರದಲ್ಲಿ ಸಲ್ಲಿಸಿರುವ ಕೊಡುಗೆಯನ್ನು ಪರಿಗಣಿಸಿ ದೇಶದ ಮೂರನೇ ಅತ್ಯುನ್ನತ ನಾಗರಿಕ ಪುರಸ್ಕಾರವಾದ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು.

ಉತ್ತರ ಪ್ರದೇಶದ ಶಾಲೆಗಳಿಗೆ ರಜೆ-ಬಾರ್ ಬಂದ್

ಲಖನೌ, ಜ. ೯: ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನಾ ಸಮಾರಂಭ ದಿನದಂದು ರಾಜ್ಯದಾದ್ಯಂತ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನಿರ್ದೇಶನ ನೀಡಿದ್ದಾರೆ. ಅದೇ ದಿನ ರಾಜ್ಯದಲ್ಲಿ ಮದ್ಯದಂಗಡಿಗಳನ್ನು ತೆರೆಯಲಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಸಿಎಂ ಆದಿತ್ಯನಾಥ ಮಾಹಿತಿ ನೀಡಿದ್ದಾರೆ.