ನಾಪೋಕ್ಲು, ಜ. ೯: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೇಲಾವರ ಗ್ರಾಮದಲ್ಲಿ ಕಾಡಾನೆಗಳ ಉಪಟಳದಿಂದ ಗ್ರಾಮಸ್ಥರು ತತ್ತರಿಸುವಂತಾಗಿದೆ.
ಪ್ರತಿದಿನ ಕಾಫಿ ತೋಟಗಳಿಗೆ ಧಾಳಿ ಇಡುವ ಕಾಡಾನೆಗಳು ಕಾಫಿ ಗಿಡಗಳನ್ನು ಮುರಿದು ಚೆಲ್ಲಾಡುತ್ತಿವೆ. ತೆಂಗು, ಅಡಿಕೆ , ಬಾಳೆ ಮತ್ತಿತರ ಕೃಷಿ ಯನ್ನು ನಾಶಪಡಿಸುತ್ತಿವೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಗ್ರಾಮ ವ್ಯಾಪ್ತಿಯ ಕಾಫಿ ಬೆಳೆಗಾರರಾದ ಮನೆಯಪಂಡ ಧೀರಜ್ ತಿಮ್ಮಯ್ಯ, ಕುಟ್ಟನ ಶಶಿ ಹಾಗೂ ಕುಟ್ಟನ ಪೂವಯ್ಯ ಅವರ ತೋಟಗಳಲ್ಲಿ ಮಂಗಳವಾರ ಬೆಳಗಿನ ಜಾವ ಅಡ್ಡಾಡಿರುವ ಕಾಡಾನೆಗಳು ಅಪಾರ ಪ್ರಮಾಣದ ನಷ್ಟ ಉಂಟು ಮಾಡಿವೆ. ಕಾಡಾನೆಗಳ ಸಂಚಾರದಿAದ ಜನಸಾಮಾನ್ಯರು ಸಂಚರಿಸಲು ಭಯಪಡುವಂತಾಗಿದೆ .ಶಾಲಾ ಕಾಲೇಜು ವಿದ್ಯಾರ್ಥಿಗಳು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕಾಡಾನೆಗಳ ಹಾವಳಿಯನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಇಲ್ಲಿನ ಗ್ರಾಮಸ್ಥರು ಒತ್ತಾಯಿಸಿದ್ದಾರೆ.