ಸಿದ್ದಾಪುರ, ಜ. ೯: ವಾಲ್ನೂರಿ ನಲ್ಲಿ ಹಣ ನೀಡಲು ನಿರಾಕರಿಸಿದ ವ್ಯಕ್ತಿಯನ್ನು ಮಂಕು ಬರಿಸಿ ಹಣ ನೀಡುವಂತೆ ಮಾಡಿದ್ದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಇಂತಹದ್ದೆ ಪ್ರಕರಣ ಬಯಲಾಗಿದೆ.
ತಾ. ೮ ರಂದು ಶಕ್ತಿ ದಿನಪತ್ರಿಕೆ ಯಲ್ಲಿ ಸ್ವಾಮೀಜಿ ರೀತಿಯಲ್ಲಿ ಬಂದಾತ ಬೆಳೆಗಾರರೊಬ್ಬರ ಕೈಗೆ ಹೂ ನೀಡಿ ಮಂತ್ರ ಪಠಣ ಮಾಡಿ ಕುಸಿದು ಬೀಳುವಂತೆ ಮಾಡಿ ಅವರಿಂದಲೇ ರೂ. ೫ ಸಾವಿರ ಪಡೆದಿದ್ದ ಪ್ರಕರಣದ ಬಗ್ಗೆ ವರದಿ ಪ್ರಕಟಗೊಂಡಿತ್ತು. ಇದಾದ ಬಳಿಕ ಸಿದ್ದಾಪುರ ಬಳಿಯ ಗುಹ್ಯ ಗ್ರಾಮದಲ್ಲಿ ಖಾದಿಬಟ್ಟೆ ಧರಿಸಿ ಸ್ವಾಮೀಜಿಯಂತೆ ಬಂದು ಮಹಿಳೆಯೋರ್ವರಿಂದ ರೂ. ೫೦ ಸಾವಿರ ಹಣವನ್ನು ಗೂಗಲ್ ಪೇ ಮೂಲಕ ವರ್ಗಾಯಿಸಿಕೊಂಡು ಪರಾರಿಯಾಗಿರುವ ಘಟನೆ ಗುಹ್ಯ ಗ್ರಾಮದಲ್ಲಿ ನಡೆದಿದೆ. ಇತ್ತೀಚೆಗೆ ವಾಲ್ನೂರು ಗ್ರಾಮಕ್ಕೆ ಬಂದಿದ್ದ ಸ್ವಾಮೀಜಿ ರೀತಿಯ ವ್ಯಕ್ತಿ ಹಾಗೂ ಆತ ಬಂದಿದ್ದ ಕಾರಿನ ಚಿತ್ರವನ್ನು ಪತ್ರಿಕೆಯಲ್ಲಿ ಗಮನಿಸಿದ ಮಹಿಳೆ ತಾನು ಮೋಸಕ್ಕೆ ಒಳಗಾಗಿರುವುದು ತಿಳಿದು ಇದೀಗ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ.
ಘಟನೆಯ ವಿವರ:
ತಾ. ೧ ರ ಬೆಳಿಗ್ಗೆ ಸ್ವಿಫ್ಟ್ ಕಾರೊಂದರಲ್ಲಿ ಈರ್ವರು ಗುಹ್ಯ ಗ್ರಾಮದಲ್ಲಿ ಒಂಟಿಯಾಗಿ ನೆಲೆಸಿರುವ ಮಹಿಳೆಯ ಮನೆಗೆ ಆಗಮಿಸಿದ್ದಾರೆ. ಸ್ವಾಮೀಜಿ ರೀತಿ ಖಾದಿ ಬಟ್ಟೆ ಧರಿಸಿದ್ದ ವ್ಯಕ್ತಿ ಮನೆಯ ಮುಂಭಾಗ ನಿಂತು ನಿಮ್ಮ ಮನೆಯಲ್ಲಿ ಹಲವಾರು ದೋಷಗಳಿವೆ. ಅದನ್ನು ತಮ್ಮ ಮಠದಲ್ಲಿ ಪೂಜೆ ಮಾಡಿ ಪ್ರಸಾದವನ್ನು ಕಳುಹಿಸಿಕೊಡುವುದಾಗಿ ತಿಳಿಸಿದ್ದಾರೆ.
ಆತನ ಮಾತನ್ನು ನಂಬಿದ ಮಹಿಳೆ ನೂರು ರೂಪಾಯಿ ನೀಡಲು ಮುಂದಾದರು. ಆದರೆ ಇದನ್ನು ನಿರಾಕರಿಸಿದ ವ್ಯಕ್ತಿ ಹೆಚ್ಚಿನ ಹಣ ನೀಡುವಂತೆ ಒತ್ತಾಯ ಮಾಡಿದ್ದು, ನಂತರ ಒಂದು ಹೂವನ್ನು ಕೈಗೆ ನೀಡಿ ಮಂಕು ಬರಿಸುವಂತೆ ಮಾಡಿ ಆಕೆಯಿಂದಲೇ ರೂ. ೫೦ ಸಾವಿರವನ್ನು ಗೂಗಲ್ ಪೇ ಮೂಲಕ ಕಾರು ಚಾಲಕನ ಗೂಗಲ್ ಪೇ ಸಂಖ್ಯೆಗೆ ವರ್ಗಾಹಿಸಿಕೊಂಡಿದ್ದಾರೆ. ಹೂ ಪಡೆದುಕೊಂಡ ಮಹಿಳೆಯು ತಾನು ಏಕೆ ಹಣ ನೀಡಿದೆ ಎಂದು ತಿಳಿಯಲಿಲ್ಲ. ಹಣ ನೀಡುವ ಮುನ್ನ ತನ್ನ ಹೆಸರು ತಮ್ಮಣ್ಣ ಎಂದು ಸ್ವಾಮೀಜಿ ವೇಷಧಾರಿ ಪರಿಚಯ ಮಾಡಿಕೊಂಡು ತಾನು ಅರಸೀಕೆರೆ ಮಠದಲ್ಲಿ ಸ್ವಾಮೀಜಿಯಾಗಿರುವುದಾಗಿ ನಂಬಿಸಿ ಮಂಕು ಬರಿಸಿ ಹಣ ಪಡೆದುಕೊಂಡು ಪರಾರಿಯಾಗಿದ್ದಾನೆ.
ಇದೇ ರೀತಿ ಜಿಲ್ಲೆಯಲ್ಲಿ ಹಲವಾರು ಘಟನೆಗಳು ನಡೆದಿರುವ ಶಂಕೆ ವ್ಯಕ್ತವಾಗಿದೆ. ಇಂತಹ ಕೃತ್ಯ ತಡೆಗೆ ಪೊಲೀಸರು ಮುಂದಾಗಬೇಕು. ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸಬೇ ಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ವರದಿ: ವಾಸು ಎ.ಎನ್