ಮಡಿಕೇರಿ, ಜ. ೯: ಮಡಿಕೇರಿ ನಗರಸಭೆ ಆಯುಕ್ತರಾದ ವಿಜಯ ಅವರನ್ನು ಇಲ್ಲಿಂದ ವರ್ಗಾವಣೆ ಮಾಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಇಂದು ನಡೆದ ನಗರಸಭೆ ವಿಶೇಷ ತುರ್ತು ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಅಧ್ಯಕ್ಷೆ ಅನಿತಾ ಪೂವಯ್ಯ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅನಿತಾ ಪೂವಯ್ಯ ಆಯುಕ್ತರಾದ ವಿಜಯ ಅವರು ಚುನಾಯಿತ ಸದಸ್ಯರು ಹಾಗೂ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಸ್ಪಂದಿಸದೆ ವಿಳಂಬ ಮಾಡುತ್ತಿರುವುದರಿಂದ ಇವರನ್ನು ವರ್ಗಾವಣೆ ಮಾಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡುವ ನಿಟ್ಟಿನಲ್ಲಿ ಈ ಸಭೆ ಕರೆಯಲಾಗಿದೆ. ನಗರಸಭಾ ಸದಸ್ಯರುಗಳು ಸೂಚಿಸುವ ಯಾವುದೇ ಕೆಲಸ ಕಾರ್ಯಗಳಿಗೆ ಆಯುಕ್ತರು ಸೂಕ್ತವಾಗಿ ಸ್ಪಂದಿಸದ ಕಾರಣ ಆಯುಕ್ತರ ಮೇಲೆ ಸದಸ್ಯರು ಹಾಗೂ ಸಾರ್ವಜನಿಕರಿಗೆ ತೀವ್ರ ಅಸಮಾಧಾನವಿದೆ ಎಂದು ಹೇಳಿದರು.

ಸದಸ್ಯ ಅಮೀನ್ ಮೊಯ್ಸಿನ್ ಮಾತನಾಡಿ, ಇತ್ತೀಚೆಗೆ ಉಸ್ತುವಾರಿ ಸಚಿವರು ಕೂಡ ಆಯುಕ್ತರು, ನಗರಸಭೆ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಚರ್ಚೆ ಮಾಡದೆ ಒಮ್ಮತದ ತೀರ್ಮಾನವಾಗಲಿ ಎಂದು ನುಡಿದರು. ಸದಸ್ಯ ಅರುಣ್ ಶೆಟ್ಟಿ ಮಾತನಾಡಿ, ಆಯುಕ್ತರ ನಡೆ ಸರಿ ಕಾಣುತ್ತಿಲ್ಲ. ಆದ್ದರಿಂದ ಅವರನ್ನು ವರ್ಗಾವಣೆ ಮಾಡಲು ತೀರ್ಮಾನಿಸೋಣ ಎಂದರು. ಸದಸ್ಯ ಕೆ.ಎಸ್. ರಮೇಶ್ ಮಾತನಾಡಿ, ಆಯುಕ್ತರ ವರ್ಗಾವಣೆಗೆ ಯಾರದ್ದಾದರು ವಿರೋಧವಿದ್ದರೆ ತಿಳಿಸಲಿ. ಇಲ್ಲವಾದರೆ ಕೈ ಎತ್ತುವ ಮೂಲಕ ನಿರ್ಧಾರವಾಗಲಿ ಎಂದು ನುಡಿದರು.

ಈ ವೇಳೆ ಮಾತನಾಡಿದ ಅನಿತಾ ಪೂವಯ್ಯ ಆಯುಕ್ತರ ವರ್ಗಾವಣೆಗೆ ಶಿಫಾರಸ್ಸು ಮಾಡಲು ನಿರ್ಧಾರ ಕೈಗೊಳ್ಳುವ ಸಂಬAಧ ಸದಸ್ಯರುಗಳು ಅಭಿಪ್ರಾಯವಿದ್ದರೆ ತಿಳಿಸಬಹುದು. ಇಲ್ಲವಾದರೆ ಕೈ ಎತ್ತುವ ಮೂಲಕ ತೀರ್ಮಾನಿಸೋಣ ಎಂದರು.

ಬಳಿಕ ಅಧ್ಯಕ್ಷೆ ಅನಿತಾ ಪೂವಯ್ಯ, ಉಪಾಧ್ಯಕ್ಷೆ ಸವಿತಾ ರಾಕೇಶ್ ಸೇರಿದಂತೆ ಸಭೆಯಲ್ಲಿದ್ದ ಎಲ್ಲಾ ಸದಸ್ಯರು ಕೈ ಎತ್ತುವ ಮೂಲಕ ಆಯುಕ್ತ ವಿಜಯ ಅವರ ವರ್ಗಾವಣೆಗೆ ಶಿಫಾರಸ್ಸು ಮಾಡಲು ಒಪ್ಪಿಗೆ ಸೂಚಿಸಿದರು.