ಶನಿವಾರಸಂತೆ, ಜ.೯ : ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಳ್ಳಿ ಗ್ರಾಮದ ಶ್ರೀಚೆನ್ನಕೇಶವ ದೇವಾಲಯದ ೩ ಎಕರೆ ದೇವರ ಗದ್ದೆಯಲ್ಲಿ ಕೊಯ್ಲಿಗೆ ಬಂದಿದ್ದ ಭತ್ತವನ್ನು ಶ್ರೀಚೆನ್ನಕೇಶವ ಯುವಕ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಶ್ರಮದಾನ ಮಾಡಿ, ಕೊಯ್ಲು ಮಾಡಿದರು. ೩೫೦ ಬೆಳೆ ಹೊರೆಯನ್ನು ಬಡಿದು ಭತ್ತವನ್ನು ಚೀಲಗಳಿಗೆ ತುಂಬಿಸಿಟ್ಟು, ಮಾರಾಟ ಮಾಡಿ ಉತ್ತಮ ಆದಾಯ ಗಳಿಸಿ ಆನಂದಿಸಿದರು.

ಶ್ರೀಚೆನ್ನಕೇಶವ ಯುವಕ ಸಂಘದ ಖಜಾಂಚಿ ಹಾರಳ್ಳಿ ರಘು ಮಾತನಾಡಿ, ಈ ವರ್ಷ ಭತ್ತದ ಇಳುವರಿ ಚೆನ್ನಾಗಿ ಬಂದಿತ್ತು. ಕೊಯ್ಲು ಮಾಡಿದ ಭತ್ತವನ್ನು ಮಾರಾಟ ಮಾಡಿದ್ದು ರೂ.೨ ಲಕ್ಷ ರೂಪಾಯಿ ಆದಾಯ ಬಂದಿದೆ. ಈ ದೇವರ ಗದ್ದೆಯ ಆದಾಯವನ್ನು ಶ್ರೀಚೆನ್ನಕೇಶವ ದೇವಾಲಯದ ಪೂಜಾ ಕಾರ್ಯ, ಉತ್ಸವ ಹಾಗೂ ಗ್ರಾಮದ ಅಭಿವೃದ್ಧಿಗೆ ಸದ್ವಿನಿಯೋಗ ಮಾಡುತ್ತೇವೆ ಎಂದರು.

ದೇವರ ಅನುಗ್ರಹದಿಂದ ಬೆಳೆ ಕೊಯ್ಲಿನ ಕಳೆದ ೫ ವರ್ಷಗಳಿಂದ ದೇವರ ಗದ್ದೆಯ ಕೆಲಸವನ್ನು ಗ್ರಾಮಸ್ಥರು ಹಾಗೂ ಯುವಕ ಸಂಘದ ಸದಸ್ಯರು ಸೇರಿ ಒಗ್ಗಟ್ಟಿನಿಂದ ಮಾಡುತ್ತಿದ್ದಾರೆ. ಗದ್ದೆ ಉಳುವುದು, ಬಿತ್ತುವುದು, ನಾಟಿ ಮಾಡುವುದು, ಕಳೆ ತೆಗೆಯುವುದು ಹಾಗೂ ಕೊಯ್ಲು ಮಾಡುವುದು ಎಲ್ಲಾ ಕೆಲಸಗಳನ್ನು ನಿಸ್ವಾರ್ಥ ಮನೋಭಾವದಿಂದ ಮಾಡುತ್ತಾ ಬಂದಿದ್ದಾರೆ.

ಗ್ರಾಮಸ್ಥರ ಜತೆಯಲ್ಲಿ ಸಂಘದ ಅಧ್ಯಕ್ಷರಾದ ಹೂವಣ್ಣ, ಖಜಾಂಚಿ ರಘು, ಸದಸ್ಯರಾದ ಗಿರೀಶ್, ಮಧು, ಲಕ್ಷಿö್ಮÃನಾರಾಯಣ್, ಹೇಮಚಂದ್ರ, ಲಕ್ಷö್ಮಣ್, ಚಂದ್ರಪ್ಪ, ರುದ್ರಪ್ಪ, ಜಯಂತ್, ಬಾಲಕೃಷ್ಣ, ಉದಯಕುಮಾರ್, ಎಚ್.ಸಿ.ದೇವರಾಜ್, ಧರ್ಮಪ್ಪ, ಎಚ್.ವಿ.ರವಿ, ನಾಗರಾಜ್, ಬಿ.ಎನ್.ದೇವರಾಜ್, ನಿರ್ವಾಣಪ್ಪ, ಕೆಂಚಮ್ಮ, ಪುಷ್ಪವತಿ, ಕುಮಾರ್ ಇತರರು ದೇವಾಲಯ ಹಾಗೂ ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.