ಚೆಟ್ಟಳ್ಳಿ, ಜ. ೯: ಚೆಟ್ಟಳ್ಳಿ ಕೊಡವ ಸಮಾಜದ ವತಿಯಿಂದ ಎರಡನೇ ವರ್ಷದ ನೂರೊಕ್ಕನಾಡ್ ಒತ್ತೋರ್ಮೆ ಕೂಟ ಚೆಟ್ಟಳ್ಳಿ ಮಂಗಳ ಸಭಾಂಗಣದಲ್ಲಿ ಸಾಂಪ್ರದಾಯಿಕ ಆಚರಣೆಯೊಂದಿಗೆ ನೆರವೇರಿತು. ಮಹಿಳೆಯರು ದೀಪ ಬೆಳಗಿದರು. ಸಾಂಪ್ರದಾಯಿಕ ಉಡುಪು ತೊಟ್ಟ ಪುರುಷರು ದುಡಿಕೊಟ್ಟು ಹಾಡಿನೊಂದಿಗೆ ದೇವರ ನೆಲೆಗೆ ಆಗಮಿಸಿತು. ಅಕ್ಕಿ ಹಾಕಿ ನಮಿಸಿ ಒಳಿತನ್ನು ಮಾಡಲೆಂದು ಬೇಡಿಕೊಂಡರು.

ನಿವೃತ್ತ ವಾಯುಸೇನಾಧಿಕಾರಿ ಪುತ್ತರಿರ ಗಣೇಶ್ ಭೀಮಯ್ಯ ಮಾತನಾಡಿ ನೂರೊಕ್ಕ ನಾಡಿಗೆ ಒಳಪಡುವ ಚೆಟ್ಟಳ್ಳಿ ಕೊಡವ ಸಮಾಜ ಜನಾಂಗದ ಅಭಿವೃದ್ಧಿಗೆ ಶ್ರಮಿಸುವ ಮೂಲಕ ಏಳಿಗೆ ಸಾಧಿಸಲಿ ಎಂದರು. ಹಿರಿಯ ಸದಸ್ಯೆ ಐಚೆಟ್ಟೀರ ಚೋಂದಮ್ಮ ಚೆಟ್ಟಳ್ಳಿ ಕೊಡವ ಸಮಾಜಕ್ಕೆ ಎರಡು ಕುತ್ತುದೀಪವನ್ನು ಉದಾರವಾಗಿ ನೀಡಿದರು. ಮಹಿಳೆಯರ ಉಮ್ಮತಾಟ್, ಪುರುಷರ ಬೊಳಕಾಟ್, ತಾಲಿಪಾಟ್ ಹಾಗೂ ಕೊಡವ ಹಾಡುಗಾರಿಕೆ ಕಾರ್ಯಕ್ರಮ ನೆರವೇರಿತು. ನಂತರದಲ್ಲಿ ದಂಪತಿಗಳಿಗೆ, ಮಹಿಳೆಯರಿಗೆ, ಪುರುಷರಿಗೆ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.

ಸಭಾಕಾರ್ಯಕ್ರಮದಲ್ಲಿ ಚೆಟ್ಟಳ್ಳಿ ಕೊಡವ ಸಮಾಜದ ಅಧ್ಯಕ್ಷ ಮುಳ್ಳಂಡ ರತ್ತುಚಂಗಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಗ್ಗಟ್ಟಿನ ಬಲ ಇದ್ದಾಗ ಮಾತ್ರ ಕೊಡವ ಜನಾಂಗ ಉಳಿಯಲು ಸಾಧ್ಯ, ಊರಿನವರ ಸಹಕಾರದಿಂದ ಚೆಟ್ಟಳ್ಳಿ ಕೊಡವ ಸಮಾಜ ಪ್ರಾರಂಭಗೊAಡಿದ್ದು, ಮುಂದೆ ಇದೇ ಸಹಕಾರ ಇದ್ದರೆ ಚೆಟ್ಟಳ್ಳಿ ಕೊಡವ ಸಮಾಜ ಇನ್ನಷ್ಟು ಅಭಿವೃದ್ಧಿ ಪಥದಲ್ಲಿ ಸಾಗಲು ಸಾಧ್ಯವಾಗುವುದೆಂದರು.

ಹಿರಿಯರಾದ ಐಚೆಟ್ಟಿರ ಚೋಂದಮ್ಮ, ಸಮಾಜದ ಉಪಾಧ್ಯಕ್ಷರಾದ ಐಚೆಟ್ಟಿರ ಸುನಿತ ಮಾಚಯ್ಯ, ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ, ನಿರ್ದೇಶಕರಾದ ಬಿದ್ದಂಡ ಮಾದಯ್ಯ ವೇದಿಕೆಯಲ್ಲಿದ್ದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪುತ್ತರಿರ ಸೀತಮ್ಮ ಮೊಣ್ಣಪ್ಪ ಪ್ರಾರ್ಥಿಸಿ ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ ವಂದಿಸಿದರು. ಜಂಟಿ ಕಾರ್ಯದರ್ಶಿ ಮುಳ್ಳಂಡ ಶೋಭ ಚಂಗಪ್ಪ, ನಿರ್ದೇಶಕರುಗಳಾದ ಪುತ್ತರಿರ ಕಾಶಿ ಸುಬ್ಬಯ್ಯ, ಬಟ್ಟೀರ ರಕ್ಷು ಕಾಳಪ್ಪ, ಐಚೆಟ್ಟಿರ ಮಾಚಯ್ಯ, ಕೆಚೆಟ್ಟಿರ ರತಿ ಕಾರ್ಯಪ್ಪ, ಕಡೇಮಡ ವಿನ್ಸಿ, ಅಡಿಕೇರ ಶಾಂತಿ ಜಯ ಹಾಜರಿದ್ದರು.