ನಾಪೋಕ್ಲು, ಜ. ೯: ಕಾಡಾನೆ ಲದ್ದಿಯಲ್ಲಿ ಜೀರ್ಣವಾಗದ ಕಾಫಿ ಬೀಜಗಳು ಯಥೇಚ್ಛವಾಗಿ ಕಂಡುಬರುತ್ತಿದ್ದು ಇದೀಗ ಕಾಡಾನೆಗಳೂ ಕಾಫಿಹಣ್ಣು ತಿನ್ನುತ್ತಿರುವುದು ಬೆಳೆಗಾರರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಸಮೀಪದ ಮರಂದೋಡ ಗ್ರಾಮದಲ್ಲಿ ಕಾಡಾನೆಗಳ ಉಪಟಳ ಮುಂದುವರಿದಿದ್ದು ರೈತರು ಆತಂಕಕ್ಕೆ ಈಡಾಗಿದ್ದಾರೆ. ಈ ಹಿಂದೆ ಕಾಡಾನೆಗಳು ಕಾಫಿ, ಅಡಿಕೆ, ತೆಂಗು ಫಲಬರಿತ ಗಿಡಗಳನ್ನು ಹಾಗೂ ಭತ್ತದ ಪೈರುಗಳನ್ನು ತುಳಿದು ನಾಶಪಡಿಸಿದ್ದರೆ, ಇದೀಗ ಕಾಫಿಯ ಹಣ್ಣುಗಳನ್ನು ತಿನ್ನುತ್ತಿವೆ. ಇದಕ್ಕೆ ಕಾಫಿ ತೋಟದಲ್ಲಿ ಕಂಡು ಬರುತ್ತಿರುವ ಕಾಡಾನೆಗಳ ಲದ್ದಿಯಲ್ಲಿ ಅಧಿಕವಾಗಿ ಕಂಡುಬರುತ್ತಿರುವ ಕಾಫಿ ಬೀಜಗಳು ಸಾಕ್ಷಿಯಾಗಿದೆ.

ಮರಂದೋಡ ಗ್ರಾಮ ವ್ಯಾಪ್ತಿಯಲ್ಲಿ ನಾಲ್ಕಾರು ಆನೆಗಳು ಅಡ್ಡಾಡುತ್ತಿದ್ದು ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಅರಣ್ಯ ಅಧಿಕಾರಿಗಳಿಗೆ ಕಾಡಾನೆಗಳನ್ನು ಕಾಡಿಗಟ್ಟುವಂತೆ ಮನವಿ ಸಲ್ಲಿಸಿದರೂ ನಿರ್ಲಕ್ಷ ವಹಿಸುತ್ತಿದ್ದಾರೆ. ರೈತರಿಗೆ ಸಂಕಷ್ಟ ಎದುರಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಭತ್ತದ ಕಟಾವು ಮುಗಿದಿದ್ದು ಇದೀಗ ಕಾಡಾನೆಗಳು ತೋಟ ನುಸುಳಿವೆ. ಕಾಫಿಯ ರೆಂಬೆಗಳನ್ನು ಮುರಿದು ಹಣ್ಣಾಗಿರುವ ಕಾಫಿಯನ್ನು ತಿಂದು ನಷ್ಟಪಡಿಸುತ್ತಿವೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಲ್ಲದೆ ಸರಕಾರ ಸೂಕ್ತ ನಷ್ಟ ಪರಿಹಾರವನ್ನು ನೀಡಬೇಕೆಂದು ಗ್ರಾಮ ಪಂಚಾಯಿತಿ ಸದಸ್ಯ ಚೋಯಮಾಡಂಡ ಹರೀಶ್ ಮೊಣ್ಣಪ್ಪ ಒತ್ತಾಯಿಸಿದ್ದಾರೆ.