ಸೋಮವಾರಪೇಟೆ, ಜ. ೯: ‘ರಕ್ತದಾನ ಶ್ರೇಷ್ಠದಾನ, ರಕ್ತದಾನ ಜೀವದಾನಕ್ಕೆ ಸಮಾನ, ಆರೋಗ್ಯವಂತರೆಲ್ಲರೂ ರಕ್ತದಾನ ಮಾಡಿ’ ಎಂದು ವೇದಿಕೆಗಳಲ್ಲಿ ಕರೆ ಕೊಡುವ ಹಲವಷ್ಟು ಗಣ್ಯರನ್ನು ನೋಡಿದ್ದೇವೆ. ಆದರೆ ‘ನುಡಿದಂತೆ ನಡೆ’ ಎಂಬ ಬಸವಣ್ಣನವರ ಮಾತಿಗೆ ಅನುರೂಪವಾಗಿ ರಕ್ತದಾನ ಶಿಬಿರದಲ್ಲಿ ಮಾತನಾಡಿದ್ದಷ್ಟೇ ಅಲ್ಲದೇ ಸ್ವತಃ ರಕ್ತದಾನ ಮಾಡುವ ಮೂಲಕ ಇತರರಿಗೂ ರಕ್ತದಾನ ಮಾಡಿ ಎಂಬ ಜಾಗೃತಿಯ ಕರೆ ನೀಡುವ ಮೂಲಕ ಶ್ರೀ ಸದಾಶಿವ ಸ್ವಾಮೀಜಿಗಳು ಮಾದರಿಯಾಗಿದ್ದಾರೆ.

ಸ್ವಾಮೀಜಿಗಳೆಂದರೆ ಸದಾ ಪೂಜೆ ಪುನಸ್ಕಾರ, ಆಶೀರ್ವಚನ, ಗಣ್ಯಾತಿ ಗಣ್ಯರ ಸಂಗ.., ಹೀಗೆಲ್ಲಾ ಇರುವ ಖಾವಿಧಾರಿಗಳು ಸ್ವತಃ ರಕ್ತದಾನ ಮಾಡುವ ಮೂಲಕ ನಿಜವಾಗಿಯೂ ಪೂಜನೀಯ ಸ್ಥಾನಕ್ಕೆ ಏರಿದ ಅಪರೂಪದ ಸನ್ನಿವೇಶ ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಂಡುಬAತು.

ಅತಿಥಿಗಳಾಗಿ ಆಹ್ವಾನ ಪಡೆದ ಶ್ರೀ ಸದಾಶಿವ ಸ್ವಾಮೀಜಿಗಳು ರಕ್ತದಾನದ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸುವ, ಮೂಢನಂಬಿಕೆಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸ್ವತಃ ರಕ್ತದಾನ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾದರು. ಈ ನಡುವೆ ಆರೋಗ್ಯವಂತರು ಮಾತ್ರ ರಕ್ತದಾನ ಮಾಡಿ ಎಂಬ ಕಾಳಜಿ ಅವರ ಮಾತಿನಲ್ಲಿತ್ತು. ಇಲ್ಲಿನ ತಥಾಸ್ತು ಸಾತ್ವಿಕ ಸಂಸ್ಥೆಯ ನೇತೃತ್ವದಲ್ಲಿ, ಜಿಲ್ಲಾ ರಕ್ತನಿಧಿ ಘಟಕದ ಸಹಯೋಗದೊಂದಿಗೆ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಸ್ಮರಣಾರ್ಥ ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ನಿಯಮಿತವಾಗಿ ರಕ್ತದಾನ ಶಿಬಿರ ಆಯೋಜಿಸುತ್ತಾ, ಸ್ವತಃ ತಾವುಗಳೂ ರಕ್ತದಾನ ಮಾಡುತ್ತಾ ಬಂದಿರುವ ತಥಾಸ್ತು ಸಾತ್ವಿಕ ಸಂಸ್ಥೆಯ ಸದಸ್ಯರುಗಳು, ರಕ್ತದಾನದ ಮಹತ್ವದ ಬಗ್ಗೆ ಆಗಾಗ್ಗೆ ಸಾರ್ವಜನಿಕರಿಗೆ ಮನವರಿಕೆ ಮಾಡುತ್ತಲೇ ಇರುತ್ತಾರೆ. ಆದರೆ ಇಂದಿನ ಶಿಬಿರದಲ್ಲಿ ಆಹ್ವಾನಿತರ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿದ್ದ ಸ್ವಾಮೀಜಿಗಳೇ ರಕ್ತದಾನ ಮಾಡಿದ್ದು, ಸಂಘಟಕರಿಗೆ ಇನ್ನಷ್ಟು ಹುಮ್ಮಸ್ಸು ತಂದಿತು.

ಶಿಬಿರವನ್ನು ಉದ್ಘಾಟಿಸಿದ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿಗಳು, ರಕ್ತ ದಾನ ಮಾಡುವುದರಿಂದ ಮತ್ತೊಂದು ಒಂದು ಜೀವ ಉಳಿಸಿದಂತಾಗುತ್ತದೆ ಎಂದು ತಮ್ಮ ಭಾಷಣದಲ್ಲಿ ಅಭಿಪ್ರಾಯಿಸಿದ ಅವರು, ನಂತರ ತಾವೂ ಸಹ ರಕ್ತದಾನ ಮಾಡುವ ಮೂಲಕ ನುಡಿದಂತೆ ನಡೆದರು.

ಅಪಘಾತ ಸೇರಿದಂತೆ ಇನ್ನಿತರ ತುರ್ತು ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಹೆಚ್ಚಾಗಿ ಇರುತ್ತದೆ. ರಕ್ತದಾನ ಜೀವದಾನಕ್ಕೆ ಸಮಾನ ಎಂದ ಅವರು, ೧೧೧ ವರ್ಷಗಳ ಕಾಲ ಬಾಳಿ ಜಾತಿ, ಮತ, ಭೇದ ಎನ್ನದೇ ಸರ್ವಜನಾಂಗದ ಮಕ್ಕಳಿಗೂ ಶಿಕ್ಷಣ, ದಾಸೋಹ ಹಾಗೂ ಆಶ್ರಯ ನೀಡಿದ ಕಾಯಕಯೋಗಿ ಶ್ರೀ ಶಿವಕುಮಾರ ಸ್ವಾಮಿಗಳ ದಾಸೋಹ ದಿನದ ನೆನಪಿನಲ್ಲಿ ಇಂತಹ ಶಿಬಿರಗಳನ್ನು ಆಯೋಜಿಸಿರುವುದು ಶ್ಲಾಘನೀಯವೆಂದರು.

ಜಿಲ್ಲಾ ರಕ್ತ ನಿಧಿ ಘಟಕದ ಮುಖ್ಯಸ್ಥ ಡಾ.ಕರುಂಬಯ್ಯ ಮಾತನಾಡಿ ರಕ್ತದಾನ ಶ್ರೇಷ್ಠವಾದದ್ದು ಆದ್ದರಿಂದ ಆರೋಗ್ಯವಂತ ವ್ಯಕ್ತಿಗಳು ವರ್ಷಕ್ಕೆ ಮೂರರಿಂದ ನಾಲ್ಕು ಬಾರಿ ರಕ್ತದಾನ ಮಾಡಬಹುದು. ಹಲವು ಸಂದರ್ಭಗಳಲ್ಲಿ ರಕ್ತ ಅನಿವಾರ್ಯವಾಗಿದೆ. ಆದ್ದರಿಂದ ದಾನಿಗಳು ಮುಂದೆ ಬರಬೇಕು ಎಂದ ಅವರು, ರಕ್ತ ಕೊಟ್ಟವರ ಆರೋಗ್ಯವೂ ಸುಸ್ಥಿತಿಯಲ್ಲಿರಲಿದೆ ಎಂದರು.

ವೇದಿಕೆಯಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಶಿವಪ್ರಸಾದ್, ವೈದ್ಯರಾದ ಡಾ.ಸತೀಶ್, ತಥಾಸ್ತು ಸಂಸ್ಥೆ ಅಧ್ಯಕ್ಷ ಉದಯ್, ಶಿವಕುಮಾರ ಸ್ವಾಮೀಜಿ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಎಸ್.ಮಹೇಶ್, ಪಟ್ಟಣ ಪಂಚಾಯಿತಿ ಸದಸ್ಯ ಮೃತ್ಯುಂಜಯ ಉಪಸ್ಥಿತರಿದ್ದರು.

ತಥಾಸ್ತು ಸಾತ್ವಿಕ ಸಂಸ್ಥೆಯ ಕಾರ್ಯದರ್ಶಿ ಬಿ.ಟಿ. ಜನಾರ್ಧನ್, ಕಾನೂನು ಸಲಹೆಗಾರರಾದ ರೂಪಾ ಕಾಳಪ್ಪ, ಖಜಾಂಚಿ ಗಣೇಶ್ ಮರಗೋಡು, ಸದಸ್ಯರುಗಳಾದ ಶಿವಕುಮಾರ್, ಜಿ. ಗಿರೀಶ್, ಹೆಚ್.ಆರ್. ಶಿವಕುಮಾರ್ ಸೇರಿದಂತೆ ಪದಾಧಿಕಾರಿಗಳು ಶಿಬಿರವನ್ನು ನಿರ್ವಹಿಸಿದರು.