ಮಡಿಕೇರಿ, ಜ. ೮: ಹವಮಾನ ವೈಪರೀತ್ಯದಿಂದಾಗಿ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯ ವಾತಾವರಣ ಕಂಡು ಬಂದಿದೆ. ಜಿಲ್ಲೆಯಲ್ಲಿ ಪ್ರಸ್ತುತ ಕಾಫಿ ಫಸಲು ಕುಯಿಲಿಗೆ ಬಂದಿದ್ದು, ಫಸಲನ್ನು ಮನೆ ತುಂಬಿಸಿಕೊಳ್ಳುವ ನಿಟ್ಟಿನಲ್ಲಿ ಬೆಳೆಗಾರರು ಪರದಾಡುತ್ತಿದ್ದಾರೆ. ಅರೆಬಿಕಾ ಕಾಫಿ ಕುಯಿಲು ಬಹುತೇಕ ಮುಕ್ತಾಯ ಹಂತ ತಲುಪಿದ್ದರೆ ಇತ್ತ ರೋಬಸ್ಟಾ ಕಾಫಿ ಹಣ್ಣಾಗಿದ್ದು, ಇದರ ಕೆಲಸದ ಪರ್ವಕಾಲದ ಸಂದರ್ಭದಲ್ಲಿ ಉಂಟಾಗಿರುವ ವಾತಾವರಣದಲ್ಲಿನ ಅಸಹಜತೆಯಿಂದಾಗಿ ಹಲವಾರು ರೀತಿಯ ಸಮಸ್ಯೆಗಳನ್ನು ಬೆಳೆಗಾರರು ಎದುರಿಸುವಂತಾಗಿದೆ. ಕಾರ್ಮಿಕರ ಕೊರತೆಯ ನಡುವೆ ವಾರ್ಷಿಕ ಫಸಲನ್ನು ಕುಯಿಲು ಮಾಡಲು ಹರಸಾಹಸ ಪಡುತ್ತಿರುವ ಸಂದರ್ಭದಲ್ಲಿ ಸುರಿದ ಮಳೆಯಿಂದಾಗಿ ಹಣ್ಣಾಗಿ ನಿಂತಿದ್ದ ಫಸಲು ನೆಲ ಕಚ್ಚಿದೆ. ಇದನ್ನು ಆಯುವುದು ಒಂದು ಸಮಸ್ಯೆಯಾಗಿದೆ. ಇದಲ್ಲದೆ ಜಿಲ್ಲೆಯ ಹಲವೆಡೆಗಳಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಕಾಫಿ ಮೊಗ್ಗು ಅರುಳುತ್ತಿದ್ದು ಕೆಲದಿನಗಳ ಕಾಲ ಕೆಲಸ ಕಾರ್ಯವನ್ನು ಸ್ಥಗಿತಗೊಳಿಸಬೇಕಾದ ಅನಿವಾರ್ಯತೆಯೂ ಎದುರಾಗಿದೆ. ಲಭ್ಯ ಇರುವ ಕಾರ್ಮಿಕರಿಗೆ ಬದಲಿ ಕೆಲಸ ನೀಡಬೇಕಾದ ಸಂಕಷ್ಟವನ್ನು ಎದುರಿಸುವಂತಾಗಿದೆ. ಅವಧಿಗೆ ಮುನ್ನವೇ ಸುರಿದ ಮಳೆಯಿಂದಾಗಿ ಇದು ಮುಂದಿನ ವರ್ಷದ ಫಸಲಿನ ಮೇಲೂ ವ್ಯತರಿಕ್ತ ಪರಿಣಾಮ ಬೀರಲಿದ್ದು, ನಿರಂತರ ಬವಣೆಯಿಂದಾಗಿ ಕಾಫಿ ಬೆಳೆಗಾರರು ಚಿಂತಿತರಾಗಿದ್ದಾರೆ. ಈಗಾಗಲೇ ಕುಯಿದಿರುವ ಕಾಫಿಯನ್ನು ಒಣಗಿಸಲು ಮೋಡಕವಿದ ವಾತಾವರಣ ಅಡ್ಡಿಯಾಗುತ್ತಿದೆ.

ಶನಿವಾರ ರಾತ್ರಿ ದಕ್ಷಿಣ ಕೊಡಗಿನ ಹಲವೆಡೆಗಳಲ್ಲಿ ಒಂದು ಇಂಚಿಗೂ ಅಧಿಕ ಮಳೆಯಾಗಿರುವುದಾಗಿ ವರದಿಯಾಗಿದೆ.