ಶ್ರೀಮಂಗಲ, ಜ. ೯: ಗ್ರಾಮೀಣ ಪ್ರದೇಶದ ಜನರಲ್ಲಿಗೆ ಸರಕಾರ ತಲುಪಬೇಕು, ಅವರ ಅಹವಾಲು ಪಡೆದು ನಿರ್ದಿಷ್ಟ ಕಾಲಮಿತಿಯಲ್ಲಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಜನಸ್ಪಂದನ ಸಭೆಯನ್ನು ಆಯೋಜಿಸಲಾಗಿದ್ದು, ೧೫ ದಿನಗಳ ಒಳಗೆ ಸಲ್ಲಿಸಿರುವ ಅಹವಾಲು ಪರಿಶೀಲಿಸಿ ಬಗೆಹರಿಸಲಾಗುವುದು. ಕೆಲವು ಅಹವಾಲುಗಳನ್ನು ಸ್ಥಳದಲ್ಲಿಯೇ ಬಗೆಹರಿಸಲಾಗಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರ ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಹೇಳಿದರು.
ಟಿ.ಶೆಟ್ಟಿಗೇರಿ ಕೊಡವ ಸಮಾಜ ಸಭಾಂಗಣದಲ್ಲಿ ನಡೆದ ಪೊನ್ನಂಪೇಟೆ ತಾಲೂಕು ಮಟ್ಟದ ಜನಸ್ಪಂದನ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ನಿರೀಕ್ಷೆಗೂ ಮೀರಿ ಸಭೆಗೆ ಜನರು ಬಂದಿದ್ದು ನೇರವಾಗಿ ೧೮೧ ಅಹವಾಲುಗಳನ್ನು ಸ್ವೀಕರಿಸಲಾಗಿದೆ. ಸ್ಥಳದಲ್ಲಿಯೇ ಅಹವಾಲುಗಳನ್ನು ಬಗೆಹರಿಸುವ ಬಗ್ಗೆ ಚರ್ಚಿಸಲಾಗಿದೆ ಎಂದರು.
(ಮೊದಲ ಪುಟದಿಂದ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ದೇಶನದಂತೆ ಜನಸ್ಪಂದನ ಸಭೆ ನಡೆಸಿ,ಜನರ ಸಮಸ್ಯೆ ಬಗೆಹರಿಸಲು ಕಾರ್ಯೋನ್ಮುಖವಾಗಿದ್ದೇವೆ. ಜಿಲ್ಲೆಯಲ್ಲಿ ಸೇವಾ ಮನೋಭಾವದ ಅಧಿಕಾರಿವರ್ಗ ಇದ್ದು,ಅಧಿಕಾರಿಗಳ ಮೇಲೆ ಭರವಸೆ ಇದೆ. ಜನರು, ಸಮಸ್ಯೆ ಇರುವಾಗ ಮಾತ್ರ ಜನಪ್ರತಿನಿಧಿಗಳು, ಅಧಿಕಾರಿಗಳ ಬಳಿಗೆ ಬರುತ್ತಾರೆ. ಅವರನ್ನು ಗೌರವಯುತವಾಗಿ ಕಂಡು ಸಮಸ್ಯೆ ಬಗೆಹರಿಸುವ ಜವಾಬ್ದಾರಿ ನಮ್ಮ ಕರ್ತವ್ಯವಾಗಿದೆ. ಇಂದು ನೀಡಿರುವ ಆಹವಾಲುಗಳನ್ನು ಬಗೆಹರಿಸಬೇಕು. ಬಗೆಹರಿಸಲಾಗದ ಸಂಬAಧಪಟ್ಟ ಅರ್ಜಿದಾರರಿಗೆ ಯಾವ ಕಾರಣಕ್ಕಾಗಿ ತಡೆಯಾಗಿದೆ ಎಂಬ ಬಗ್ಗೆ ಮತ್ತು ಮುಂದೆ ಏನು ಮಾಡಬೇಕು ಎಂಬ ಬಗ್ಗೆ ಅರ್ಜಿದಾರರಿಗೆ ಮನವರಿಕೆ ಮಾಡಿಕೊಡುವಂತೆ ಪೊನ್ನಣ್ಣ ಅವರು ಅಧಿಕಾರಿಗಳಿಗೆ ಸೂಚಿಸಿದರು
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಅವರು ಮಾತನಾಡಿ ಜಿಲ್ಲೆಯಲ್ಲಿ ಅಕಾಲಿಕ ಮಳೆಯಿಂದ ಗದ್ದೆಯಲ್ಲಿಯೇ ಹುಲ್ಲುಗಳು ಕೊಳೆತು ಹಾಳಾಗುತ್ತಿವೆ. ಬರ ಪೀಡಿತ ಜಿಲ್ಲೆ ಘೋಷಣೆಯಿಂದ ಅಂತರ್ ಜಿಲ್ಲೆ ಹಾಗೂ ಅಂತರ್ರಾಜ್ಯಕ್ಕೆ ಹುಲ್ಲು ಸಾಗಾಟಕ್ಕೆ ನಿರ್ಬಂಧವಿದೆ. ಇದನ್ನು ತೆರವುಗೊಳಿಸಿ ರೈತರಿಗೆ ಅನುಕೂಲ ಕಲ್ಪಿಸುವಂತೆ, ಗ್ರಾಮೀಣ ಭಾಗದಲ್ಲಿ ಹಲವಾರು ಜನರಿಗೆ ಆಧಾರ್ ಕಾರ್ಡ್ ದಾಖಲೆ ಆಗಿರುವುದಿಲ್ಲ. ಈ ಬಗ್ಗೆ ಗಮನಹರಿಸುವಂತೆ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಶಾಸಕರು ರಾಜ್ಯದ್ಯಾಂತ ಬರಪೀಡಿತವಾಗಿದ್ದು, ಬೆಂಗಳೂರಿನಲ್ಲಿ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಿ ಹುಲ್ಲು ಸಾಗಾಟಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಉಚಿತ ಯೋಜನೆಗಳು ರಾಜ್ಯ ಸರ್ಕಾರದಿಂದ ಇದ್ದರೂ ಸಹ ಅಭಿವೃದ್ಧಿಗೆ ಅನುದಾನ ಕೊರತೆಯಾಗದಂತೆ ಮೂಲಭೂತ ಸೌಕರ್ಯ ವಂಚಿತವಾಗದAತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಮುಖ್ಯಮಂತ್ರಿಗಳು ಹಾಗೂ ಆರ್ಥಿಕ ಸಚಿವರೊಂದಿಗೆ ಫೆಬ್ರವರಿ ೧೨ಕ್ಕೆ ಮುಂದಿನ ಬಜೆಟ್ ಮಾಡುತ್ತಿದ್ದು ಈ ಬಗ್ಗೆ ಜಿಲ್ಲೆಯ ಅಭಿವೃದ್ಧಿಗೆ ಬೇಕಾಗುವ ಅನುದಾನ ಯೋಜನೆಗಳ ಬಗ್ಗೆ ಸಮಾಲೋಚನೆ ನಡೆಸಿ ಕೊಡಗಿಗೆ ಒಳ್ಳೆಯದಾಗುವ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳು ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ವೆಂಕಟ್ರಾಜಾ ಅವರು ಪ್ರಾಸ್ತವಿಕವಾಗಿ ಮಾತನಾಡಿ ತಮ್ಮ ವ್ಯಾಪ್ತಿಯಲ್ಲಿ ಸಮಸ್ಯೆ, ಕುಂದು ಕೊರತೆ, ಮನವಿ, ಅರ್ಜಿಗಳನ್ನು ತೆಗೆದುಕೊಂಡು ತಹಶೀಲ್ದಾರ್ ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿ ಹೀಗೆ ಅಲೆದಾಡುವ ಅವಶ್ಯಕತೆ ಇರುವುದಿಲ್ಲ. ನಿಮ್ಮ ಮನೆ ಬಾಗಿಲಿಗೆ ಬಂದು ೧೫ ದಿನಗಳೊಳಗೆ ನೀವು ನೀಡಿದ ಅಹವಾಲನ್ನು ಇತ್ಯರ್ಥಪಡಿಸುವ ಭರವಸೆಯನ್ನು ನೀಡಿದರು. ಕೆಲವು ನಿಯಮಾನುಸರ ಅಹವಾಲುಗಳನ್ನು ಇತ್ಯರ್ಥ ಮಾಡಲು ಸಾಧ್ಯವಾಗದಿದ್ದರೆ ಅಂತಹ ಅರ್ಜಿಗಳಲ್ಲಿ ಹಿಂಬರಹ ಮೂಲಕ ಕಾರಣ ನೀಡಲಾಗುವುದು. ಇಂದು ಇಲ್ಲಿ ಪಡೆದ ಎಲ್ಲಾ ಅರ್ಜಿಗಳನ್ನು ಇಲಾಖಾಧಿಕಾರಿಗಳೊಂದಿಗೆ ಗಂಭೀರವಾಗಿ ಸಮಾಲೋಚಿಸಿ ಇತ್ಯರ್ಥಪಡಿಸುತ್ತಿದ್ದೇವೆ. ಆಗದ ಸಂದರ್ಭದಲ್ಲಿ ಸೂಕ್ತ ಕಾರಣ, ಮಾರ್ಗದರ್ಶನ ನೀಡುತ್ತೇವೆ ಎಂದು ಅವರು ಹೇಳಿದರು.
ಅಹವಾಲು ಪಡೆದು ಮಾತನಾಡಿದ ಶಾಸಕ ಪೊನ್ನಣ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರ ಜನಪರವಾಗಿದೆ, ಅವಕಾಶ ವಂಚಿತರ ಪರವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಗೆ ನೇರವಾಗಿ ಸಮಾನವಾಗಿ ಸೌಲಭ್ಯಗಳನ್ನು ಮುಖ್ಯಮಂತ್ರಿ ಹಂಚಿಕೆ ಮಾಡಿದ್ದಾರೆ ಎಂದು ಶ್ಲಾಘಿಸಿದರು. ಇದೇ ಸಂದರ್ಭ ಫಲಾನುಭವಿಗಳಿಗೆ ೯೪ಸಿ ಹಕ್ಕುಪತ್ರ ಹಾಗೂ ಪಿಂಚಣಿ ಆದೇಶ ಪತ್ರ ವಿತರಿಸಲಾಯಿತು.
ವೇದಿಕೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ, ಮಡಿಕೇರಿ ಡಿಸಿಎಫ್ ವನ್ಯಜೀವಿ ಭಾಸ್ಕರ್, ಪ್ರಾದೇಶಿಕ ಡಿಸಿಎಫ್ ಶರಣ ಬಸಪ್ಪ, ತಹಶೀಲ್ದಾರ್ ರಾಮಚಂದ್ರ, ಟಿ. ಶೆಟ್ಟಿಗೇರಿ ಗ್ರಾ.ಪಂ. ಅಧ್ಯಕ್ಷ ಎಂ.ಎA. ಪಟ್ಟು ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
-ವರದಿ:ಹರೀಶ್ ಮಾದಪ್ಪ