ಕರಿಕೆ, ಜ. ೭: ಗಡಿ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್, ಕರಿಕೆ ಗ್ರಾಮ ಪಂಚಾಯಿತಿ, ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಗ್ರಾಮದ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕರಿಕೆ ಗ್ರಾಮದಲ್ಲಿ ಜನವರಿ ೨೭ರಂದು ಆಯೋಜಿಸಿರುವ ಗಡಿ ಸಾಂಸ್ಕೃತಿಕ ಉತ್ಸವದ ಪ್ರಯುಕ್ತ ಸ್ಥಳೀಯ ಪಂಚಾಯಿತಿ ವ್ಯಾಪ್ತಿಯ ಶಾಲಾ ಮಕ್ಕಳಿಗೆ ಆಟೋಟ ಸ್ಪರ್ಧೆಯನ್ನು ಸರಕಾರಿ ಪ್ರೌಢಶಾಲಾ ಆಟದ ಮೈದಾನದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್. ಬಾಲಚಂದ್ರ ನಾಯರ್ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಗಡಿ ಗ್ರಾಮದಲ್ಲಿ ಹಮ್ಮಿಕೊಂಡಿರುವ ಸಾಂಸ್ಕೃತಿಕ ಉತ್ಸವದಲ್ಲಿ ಗ್ರಾಮದಲ್ಲಿರುವ ಗ್ರಾಮೀಣ ಪ್ರತಿಭೆಯನ್ನು ಅನಾವರಣಗೊಳಿಸಲು ಮೊದಲ ಆದ್ಯತೆ ನೀಡಿ ಗ್ರಾಮದಲ್ಲಿರುವ ಅಂಗನವಾಡಿ ಸೇರಿದಂತೆ ಎಲ್ಲಾ ಶಾಲಾ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆ ಏರ್ಪಡಿಸಿದ್ದು, ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧೆಯಲ್ಲಿ ಪಾಲ್ಗೊಂಡಿರುವುದು ಸಂತೋಷದ ವಿಚಾರವೆಂದರು. ಅಂಗನವಾಡಿ ಮಕ್ಕಳಿಗೆ ಕಾಳು ಹೆಕ್ಕುವುದು, ಕಪ್ಪೆ ಜಿಗಿತ, ಕುಪ್ಪಿಗೆ ನೀರು ತುಂಬಿಸುವುದು, ಅಭಿನಯ ಗೀತೆ, ಪ್ರಾಥಮಿಕ ಶಾಲಾ ಮಕ್ಕಳಿಗೆ ಬಕೆಟ್ಗೆ ಚೆಂಡು ಹಾಕುವುದು, ಕಪ್ಪೆ ಜಿಗಿತ, ಪರಿಸರದ ಚಿತ್ರ ಬಿಡಿಸುವುದು, ಪ್ರಾಣಿ, ಪಕ್ಷಿ, ಹಣ್ಣುಗಳನ್ನು ಗುರುತಿಸುವುದು, ಓಟ, ಪ್ರಬಂಧ, ಆಶುಭಾಷಣ, ದೇಶಭಕ್ತಿಗೀತೆ, ಜಾನಪದ ಗೀತೆ, ಪ್ರೌಢ ಶಾಲಾ ಮಕ್ಕಳಿಗೆ ಸಂಗೀತ ಕುರ್ಚಿ, ಓಟ, ಭಾರದ ಗುಂಡು ಎಸೆತ, ನಿಂಬೆ ಚಮಚ ಓಟ, ಗೋಣಿ ಚೀಲ ಓಟ, ಜ್ಞಾಪಕ ಸ್ಪರ್ಧೆ, ಭಾಷಣ, ಚರ್ಚೆ ಸೇರಿದಂತೆ ವಿವಿಧ ಸ್ಪರ್ಧೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಜನಾರ್ಧನ, ಜಯಂತ ಸೇರಿದಂತೆ ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಶಿಕ್ಷಕರು, ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.