ಚೆಯ್ಯಂಡಾಣೆ, ಜ. ೬: ನಾಪೋಕ್ಲುವಿನ ಮೊಹಿಯದ್ದೀನ್ ಜುಮಾ ಮಸೀದಿಯ ಸ್ಮಶಾನ ಜಾಗ ಅಭಿವೃದ್ಧಿಪಡಿಸಿಕೊಡುವಂತೆ ಮಸೀದಿಯ ಆಡಳಿತ ಮಂಡಳಿಯವರು ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರಿಗೆ ಮನವಿಯನ್ನು ಸಲ್ಲಿಸಿದರು.

ನಾಪೋಕ್ಲು ಬಳಿಯ ಚೆರಿಯಪರಂಬು ಗ್ರಾಮಕ್ಕೆ ಶಾಸಕರು ಭೇಟಿ ನೀಡಿದ ಸಂದರ್ಭ ಚೆರಿಯಪರಂಬುವಿನಲ್ಲಿರುವ ನಾಪೋಕ್ಲು ಮಸೀದಿಯ ಸ್ಮಶಾನದ ಸ್ಥಳದಲ್ಲಿ ತಡೆಗೋಡೆ, ಕಾಂಕ್ರೀಟ್ ರಸ್ತೆ ಹಾಗೂ ನೀರಿನ ಸೌಲಭ್ಯವನ್ನು ನಿರ್ಮಿಸಿ ಕೊಡುವಂತೆ ಶಾಸಕರಿಗೆ ಮನವಿಯನ್ನು ಸಲ್ಲಿಸಲಾಯಿತು.

ಇದೇ ಸಂದರ್ಭ ನಾಪೋಕ್ಲು ಮೊಹಿಯದ್ದೀನ್ ಜುಮಾ ಮಸೀದಿಯ ಆಡಳಿತ ಮಂಡಳಿ ವತಿಯಿಂದ ಶಾಸಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭ ಜಮಾಅತ್ ಅಧ್ಯಕ್ಷ ಎಂ.ಹೆಚ್. ಅಬ್ದುಲ್ ರಹ್ಮಾನ್, ಕಾರ್ಯದರ್ಶಿ ಪಿ.ಎಂ. ಯೂನಸ್, ಗ್ರಾಮ ಪಂಚಾಯಿತಿ ಸದಸ್ಯರು, ಮಸೀದಿಯ ಆಡಳಿತ ಮಂಡಳಿ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.