ಮಡಿಕೇರಿ, ಜ. ೬: ಕೋಟ್ಯಂತರ ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದು, ಕ್ರಿಯಾಶೀಲವಾಗಿದ್ದರೂ ಕಾರಣಾಂತರಗಳಿAದ ಈ ಹಿಂದೆ ಸಮಾಪನಗೊಳಿಸಲಾಗಿದ್ದ ದಿ ಮೈಸೂರು ಕಾಫಿ ಸಂಸ್ಕರಣಾ ಸಹಕಾರ ಸಂಘ (ಎಂ.ಸಿ.ಪಿ.ಸಿ.ಎಸ್.)ದ ಸಮಾಪನಾ ಆದೇಶವನ್ನು ಇದೀಗ ವಾಪಸ್ಸು ಪಡೆಯಲಾಗಿದೆ. ಸಂಘದ ಸದಸ್ಯರು ಈ ಬಗ್ಗೆ ಹೋರಾಟ ಸಮಿತಿಯೊಂದನ್ನು ರಚಿಸಿ ಇದರ ಮೂಲಕ ಕಳೆದ ಹಲವು ವರ್ಷಗಳಿಂದ ನಡೆಸಿದ ಪ್ರಯತ್ನದ ಫಲವಾಗಿ ಇದೀಗ ಸಮಾಪನಾ ಆದೇಶವನ್ನು ಹಿಂಪಡೆದು ವಿಶೇಷಾಧಿಕಾರಿ ನೇಮಕದೊಂದಿಗೆ ಮೂರು ತಿಂಗಳಲ್ಲಿ ಆಡಳಿತ ಮಂಡಳಿಗೆ ಚುನಾವಣೆ ನಡೆಸುವುದರೊಂದಿಗೆ ಸಂಘದ ಪುನಶ್ಚೇತನದ ನಿರ್ಧಾರ ಕೈಗೊಂಡಿರುವುದು ಮಹತ್ವದ ಬೆಳವಣಿಗೆಯಾಗಿದೆ.
ಈ ಕುರಿತಾಗಿ ಕೆಲ ದಿನಗಳ ಹಿಂದೆ ರಾಜ್ಯ ಸಹಕಾರ ಸಂಘಗಳ ನಿಬಂಧಕರಾದ ಕ್ಯಾಪ್ಟನ್ ಡಾ|| ಕೆ. ರಾಜೇಂದ್ರ ಅವರು ಆದೇಶ ಹೊರಡಿಸಿದ್ದಾರೆ. ಸಮಾಪನಾ ಆದೇಶ ವಾಪಸಾತಿಯೊಂದಿಗೆ ಕೆಲವೊಂದು ಷರತ್ತಿಗೆ ಒಳಪಟ್ಟು ಸಂಘವನ್ನು ಪುನಶ್ಚೇತನಗೊಳಿಸಲು ತೀರ್ಮಾನಿಸಲಾಗಿದೆ. ಸಮಾಪನಾಧಿಕಾರಿಯವರ ಜಾಗದಲ್ಲಿ ಮೈಸೂರು ಜಿಲ್ಲೆಯ ಸಹಕಾರ ಸಂಘಗಳ ಉಪ ನಿಬಂಧಕರನ್ನು ಸಂಘದ ಆಡಳಿತ ಮಂಡಳಿಗೆ ಚುನಾವಣೆ ನಡೆಸುವವರೆಗೆ ಅಂದರೆ ಮೂರು ತಿಂಗಳ ಅವಧಿಗೆ ವಿಶೇಷಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.
ಹಿನ್ನೆಲೆ ಏನು...?
೧೯೫೩ರಲ್ಲಿ ಕೊಡಗು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಕಾಫಿ ಬೆಳೆಗಾರರು ಮೈಸೂರು ಕಾಫಿ ಸಂಸ್ಕರಣಾ ಸಹಕಾರ ಸಂಘವನ್ನು ಅಸ್ತಿತ್ವಕ್ಕೆ ತಂದಿದ್ದರು. ಮೈಸೂರಿನ ಹೊರವಲಯದಲ್ಲಿರುವ ವರ್ತುಲ ರಸ್ತೆ ಬಳಿ ಕೆ.ಆರ್.ಎಸ್. ರಸ್ತೆಯಲ್ಲಿ ಕೋಟ್ಯಂತರ ಮೌಲ್ಯದ ಹಲವು ಎಕರೆ ಜಾಗವನ್ನು ಸಂಘ ಹೊಂದಿತ್ತು. ಈ ಘಟಕ ಅನೇಕ ವರ್ಷ ಉತ್ತಮವಾಗಿಯೇ ಕಾರ್ಯಚಟುವಟಿಕೆ ನಡೆಸುತ್ತಿತ್ತಾದರೂ, ಕಾಫಿ ಮುಕ್ತ ಮಾರುಕಟ್ಟೆ ಬಂದ ನಂತರ ನಷ್ಟದ ಹಾದಿ ಹಿಡಿಯಿತು. ಇದನ್ನೇ ಮುಂದಿಟ್ಟುಕೊAಡು ದಿವಾಳಿ ನೆಪದಲ್ಲಿ ಕೋಟ್ಯಂತರ ಮೌಲ್ಯದ ಐದು ಎಕರೆ ಜಾಗವನ್ನು ಸರಕಾರದ ಮೂಲಕ ಹರಾಜು ಮಾಡಲು ಮುಂದಾಗಿ ಕೆಲ ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದರಿಂದ ಈ ವಿಚಾರ ಬೆಳಕಿಗೆ ಬಂದಿತ್ತು. ಇದು ನಡೆದದ್ದು ೨೦೧೫ರ ಸಂದರ್ಭದಲ್ಲಿ. ಇದರಿಂದ ಎಚ್ಚೆತ್ತುಕೊಂಡ ಕಾಫಿ ಬೆಳೆಗಾರ ಸದಸ್ಯರು ಸಂಘದ ಆಸ್ತಿಯನ್ನು ಉಳಿಸಿ ಸಂಘದ ಪುನಶ್ಚೇತನದ ಚಿಂತನೆಯೊAದಿಗೆ ಇತ್ತೀಚೆಗಷ್ಟೇ ದೈವಾಧೀನರಾದ ಅಮ್ಮತ್ತಿಯ ಮೂಕೋಂಡ ಬೋಸ್ ದೇವಯ್ಯ ಅವರ ನೇತೃತ್ವದಲ್ಲಿ ಅಮ್ಮತ್ತಿಯಲ್ಲಿ ಸಂಘದ ಸರ್ವ ಸದಸ್ಯರ ಹಿತರಕ್ಷಣಾ ಸಭೆಯನ್ನು ಆಯೋಜಿಸಲಾಗಿತ್ತು. ನಂತರದಲ್ಲಿ ಹೋರಾಟ ಸಮಿತಿಯೊಂದನ್ನು ರಚಿಸಿ ಬೋಸ್ ದೇವಯ್ಯ ಅವರನ್ನು ಸಮಿತಿ ಅಧ್ಯಕ್ಷರನ್ನಾಗಿ ಹಾಗೂ ಕೋಲತಂಡ ಸುಬ್ರಮಣಿ ಅವರನ್ನು ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿತ್ತು. ಆಗಿನ ಸಚಿವ ಸಂಪುಟದಲ್ಲೂ ಐದು ಎಕರೆ ಜಾಗದ ಹರಾಜಿಗೆ ತೀರ್ಮಾನಿಸಿದ್ದು, ಆಸ್ತಿ ಹರಾಜಿನ ಉದ್ದೇಶದ ಹಿಂದೆ ಕೆಲ ಪ್ರಭಾವಿ ಜನಪ್ರತಿನಿಧಿಗಳು ಹಾಗೂ ಕೆಲ ಅಧಿಕಾರಿಗಳ ಕೈವಾಡವಿರುವುದಾಗಿಯೂ ಆ ಸಂದರ್ಭ ಸಂಶಯ ವ್ಯಕ್ತಗೊಂಡಿತ್ತು. ಹೋರಾಟ ಸಮಿತಿ ರಚನೆ ಬಳಿಕ ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲನ್ನೂ ಏರಿದ್ದು, ಪ್ರಕರಣ ಈಗಲೂ ಮುಂದುವರಿಯುತ್ತಿರುವುದನ್ನು ಸ್ಮರಿಸಬಹುದಾಗಿದೆ. ಸಂಘದ ಸಮಾಪನಾ ಆದೇಶ ರದ್ಧತಿಯೊಂದಿಗೆ, ಆಡಳಿತ ಮಂಡಳಿಗೆ ಚುನಾವಣೆ ನಡೆಸಿ, ಸಂಘದ ಆಸ್ತಿಯನ್ನು ಸದಸ್ಯರಿಗೆ ಬಿಟ್ಟುಕೊಡುವಂತೆ ಬೇಡಿಕೆ ಮುಂದಿರಿಸಲಾಗಿತ್ತು.
ಇತ್ತೀಚೆಗೆ ನಡೆದಿದ್ದ ಸಭೆ
ಈ ಬಗ್ಗೆ ಈ ಹಿಂದಿನ ಶಾಸಕರುಗಳ ಮೂಲಕವೂ ಪ್ರಯತ್ನ ನಡೆಸಲಾಗಿತ್ತು. ಅಲ್ಲದೆ ನೂತನ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರೂ ಆಗಿರುವ ಎ.ಎಸ್. ಪೊನ್ನಣ್ಣ ಅವರೊಂದಿಗೂ ಸಮಿತಿ
(ಮೊದಲ ಪುಟದಿಂದ) ಪ್ರಮುಖರು, ಸಂಘದ ಸದಸ್ಯರು ಚರ್ಚೆ ನಡೆಸಿ ಗಮನ ಸೆಳೆದಿದ್ದರು. ಇದೀಗ ಕೆಲ ದಿನಗಳ ಹಿಂದೆ ಬೆಳಗಾವಿಯಲ್ಲಿ ಅಧಿವೇಶನ ನಡೆದ ಸಂದರ್ಭ ಡಿಸೆಂಬರ್ ೧೨ರಂದು ರಾಜ್ಯ ಸಹಕಾರ ಸಚಿವರಾದ ಕೆ.ಎನ್. ರಾಜಣ್ಣ ಅವರು, ಶಾಸಕ ಎ.ಎಸ್. ಪೊನ್ನಣ್ಣ ಉಪಸ್ಥಿತಿ ಯಲ್ಲಿ ಬೆಳಗಾವಿಯ ಸುವರ್ಣ ಸೌಧದಲ್ಲಿ ಸಂಬAಧಿಸಿದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಸಂಘದ ಪುನಶ್ಚೇತನದ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸಲು ಸೂಚನೆ ನೀಡಲಾಗಿತ್ತು. ಈ ಬೆಳವಣಿಗೆಯ ಬಳಿಕ ೨೬.೧೨.೨೦೨೩ರಲ್ಲಿ ಕರ್ನಾಟಕ ರಾಜ್ಯ ಸಹಕಾರ ಸಂಘಗಳ ನಿಬಂಧಕರಾದ ಐ.ಎ.ಎಸ್. ಅಧಿಕಾರಿ ಕ್ಯಾಪ್ಟನ್ ಡಾ|| ಕೆ. ರಾಜೇಂದ್ರ ಅವರು ನೂತನ ಆದೇಶ ಹೊರಡಿಸಿದ್ದಾರೆ. ಸಮಾಪನಾದೇಶ ವಾಪಸಾತಿ, ವಿಶೇಷಾಧಿಕಾರಿ ನೇಮಕ ಸಂಘಕ್ಕೆ ಚುನಾವಣೆ ನಡೆಸುವ ಸೂಚನೆಯೊಂದಿಗೆ ಕೆಲವು ಷರತ್ತುಗಳನ್ನೂ ವಿಧಿಸಲಾಗಿದೆ.
ಷರತ್ತುಗಳು ಇಂತಿವೆ:
೧. ಸಮಾಪನಾಧಿಕಾರಿಯವರು ವಿಶೇಷಾಧಿಕಾರಿಗಳಿಗೆ ಸಂಘದ ಪ್ರಬಾರವನ್ನು ವಹಿಸಿಕೊಡತಕ್ಕದ್ದು ಹಾಗೂ ವಿಶೇಷಾಧಿಕಾರಿಗಳು ಸಂಘದ ಪ್ರಭಾರ ಪಡೆದು ಸಹಕಾರ ಸಂಘಗಳ ನಿಯಮ ಹಾಗೂ ಸಂಘದ ಬೈಲಾದಂತೆ ಆಡಳಿತ ಮಂಡಳಿಯನ್ನು ರಚಿಸಿ ಸಂಘದ ಪ್ರಬಾರವನ್ನು ನಿಯಮಾನುಸಾರ ವಹಿಸಿಕೊಡಬೇಕು.
೨. ಸಂಘದ ಬೈಲಾ ರೀತ್ಯಾ ಉದ್ದೇಶಗಳನ್ನು ಈಡೇರಿಸುವುದು ಹಾಗೂ ಸಂಘವನ್ನು ಮುನ್ನಡೆಸಿಕೊಂಡು ಹೋಗಲು ವಿಶೇಷಾಧಿಕಾರಿಯು ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡುವುದು.
೩. ಸಹಕಾರ ಸಂಘಗಳ ಕಾಯಿದೆ ಮತ್ತು ನಿಯಮಗಳನುಸಾರ ಆಡಳಿತ ಮಂಡಳಿ ಚುನಾವಣೆಯನ್ನು ನಿಗದಿತ ಅವಧಿಯಲ್ಲಿ ನಡೆಸಿ ಇಲಾಖೆಗೆ ವರದಿ ಸಲ್ಲಿಸತಕ್ಕದ್ದು.
೪. ಸಹಕಾರ ಚುನಾವಣಾ ಪ್ರಾಧಿಕಾರಕ್ಕೆ ಸಂಘದ ಆಡಳಿತ ಮಂಡಳಿ ಚುನಾವಣೆ ನಡೆಸಲು ಪ್ರಸ್ತಾವನೆ ಸಲ್ಲಿಸಲು ಕ್ರಮವಿಡುವುದು.
೫. ಈ ಪುನಶ್ಚೇತನದ ಆದೇಶದ ನಂತರವೂ ಸಹ ಸಂಘದಲ್ಲಿ ಯಾವುದೇ ಕಾರ್ಯಚಟುವಟಿಕೆಗಳು ಜರುಗದೇ ಮತ್ತೊಮ್ಮೆ ಸ್ಥಗಿತಗೊಂಡಲ್ಲಿ ಸಂಘದ ಸದಸ್ಯರಿಗೆ ಯಾವುದೇ ಮುನ್ಸೂಚನೆ ನೀಡದೆ ಸಂಘವನ್ನು ಸಮಾಪನೆ ಗೊಳಿಸಲಾಗುವುದು.
೬. ವಿಶೇಷಾಧಿಕಾರಿಗಳು ಸಂಘದ ಆಡಳಿತ ಮಂಡಳಿಯು ಎಲ್ಲಾ ದಾವಾ ಪ್ರಕರಣಗಳಿಗೆ ಜಂಟಿ ಮೆಮೋವನ್ನು ನ್ಯಾಯಾಲಯಗಳಿಗೆ ಸಲ್ಲಿಸಿ ದಾವಾ ಪ್ರಕರಣಗಳನ್ನು ಹಿಂಪಡೆಯುವುದು.
೭. ಸಂಘದ ಹೆಸರಿನಲ್ಲಿರುವ ೦೫ ಎಕರೆ ಜಮೀನನ್ನು ಮಾತ್ರ ಪುನಶ್ಚೇತನಗೊಂಡ ನಂತರ ಸಂಘದ ವಶಕ್ಕೆ ನಿಯಮಾನುಸಾರ ನೀಡುವುದು.
೮. ಸಂಘದ ಪ್ರಗತಿ ವರದಿಯನ್ನು ಪ್ರತಿ ತಿಂಗಳು ಸಹಕಾರ ಸಂಘಗಳ ಅಪರ ನಿಬಂಧಕರು (ಬಳಕೆ ಮತ್ತು ಮಾರಾಟ)ರವರಿಗೆ ಸಲ್ಲಿಸಬೇಕು.