ಕೂಡಿಗೆ, ಜ. ೬: ಶುಂಠಿ ಬೆಳೆಗೆ ಮಾರುಕಟ್ಟೆಯಲ್ಲಿ ಕಳೆದ ಹತ್ತು ವರ್ಷಗಳಿಂದಲೂ ಸಿಗದ ಬೆಲೆ ಈ ಸಾಲಿನಲ್ಲಿ ದೊರೆತ ಹಿನ್ನೆಲೆಯಲ್ಲಿ ಕುಶಾಲನಗರ ತಾಲೂಕು ವ್ಯಾಪ್ತಿಯ ಅರೆ ಮಲೆನಾಡು ಪ್ರದೇಶಗಳಲ್ಲಿ ಈಗಾಗಲೇ ರೈತರು ಜನವರಿ ಕೊನೆಯ ವಾರದಲ್ಲೇ ಅಥವಾ ಫೆಬ್ರವರಿ ತಿಂಗಳಲ್ಲಿ ಶುಂಠಿ ಬಿತ್ತನೆಗೆ ಅನುಕೂಲವಾಗುವಂತೆ ಈಗಾಗಲೇ ಭೂಮಿಯ ಸಿದ್ಧತೆಯಲ್ಲಿ ತೊಡಗಿದ್ದಾರೆ.

ಕಳೆದ ೨೦ ವರ್ಷಗಳಿಂದಲೂ ಶುಂಠಿ ಬೇಸಾಯದಲ್ಲಿ ತೊಡಗಿರುವ ರೈತರು ಬೆಳೆಯ ಏರಿಳಿತಗಳ ನಡುವೆ ಶುಂಠಿ ಬೇಸಾಯವನ್ನು ಬಿಡದೆÀ ಸತತವಾಗಿ ಬೇಸಾಯ ಮಾಡಿದ ಹಿನ್ನೆಲೆಯಲ್ಲಿ ಈ ಬಾರಿ ರೈತರಿಗೆ ಉತ್ತಮ ಬೆಲೆ ದೊರಕಿದೆ.

ಶುಂಠಿ ೬೦ ಕೆ.ಜಿ. ತೂಕದ ಒಂದು ಮೂಟೆಗೆ ೫ ಸಾವಿರಕ್ಕೂ ಅಧಿಕ ಬೆಲೆ ದೊರೆತ ಹಿನ್ನೆಲೆಯಲ್ಲಿ ಬಿತ್ತನೆಯ ಬೀಜ ಶುಂಠಿಗೆ ಇನ್ನೂ ಅಧಿಕ ಬೆಲೆ ಸಿಗಬಹುದೆಂದು ಇನ್ನೂ ಅನೇಕ ರೈತರು ಶುಂಠಿ ಬೆಳೆಯನ್ನು ಕೀಳದೆ ಜಮೀನಿನಲ್ಲಿ ಉಳಿಸಿಕೊಂಡಿದ್ದಾರೆ. ಕಳೆದ ೧೦ ವರ್ಷಗಳಿಂದಲೂ ಶುಂಠಿ ಬೆಲೆಯಲ್ಲಿ ಏರಿಳಿತಗಳು ಆದರೂ ಸಹ ಎರಡು ಸಾವಿರದ ಮೇಲೆ ಬೆಲೆ ಏರಿಕೆಯಾಗಿರಲ್ಲಿಲ್ಲ.್ಲ ಆದರೆ ಈ ಬಾರಿ ಶುಂಠಿ ಬೆಲೆಯಲ್ಲಿ ಏರಿಕೆಯಾದ ಹಿನ್ನೆಲೆಯಲ್ಲಿ ಮತ್ತೆ ರೈತರು ಭೂಮಿ ಸಿದ್ಧತೆಯಲ್ಲಿ ತೊಡಗಿದ್ದಾರೆ.

ಕೊಡಗಿನ ಕುಶಾಲನಗರ ತಾಲೂಕು ವ್ಯಾಪ್ತಿಯ ೯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೨೭ಕ್ಕೂ ಉಪಗ್ರಾಮಗಳ ರೈತರು ಈಗಾಗಲೇ ಹಾಸನ ಜಿಲ್ಲೆಯ ಕೆಲ ತಾಲೂಕು ಮತ್ತು ಮೈಸೂರು, ಚಾಮರಾಜನಗರ ಜಿಲ್ಲೆಯ ಕೆಲ ಪ್ರದೇಶಗಳಿಗೆ ತೆರಳಿ ಜಮೀನಿನಲ್ಲಿರುವ ಶುಂಠಿಯ ಬೆಳೆಯನ್ನು ವೀಕ್ಷಣೆ ಮಾಡಿ ಖರೀದಿಸಲೂ ಮುಂದಾಗಿರುತ್ತಾರೆ.

ಕುಶಾಲನಗರ ತಾಲೂಕು ವ್ಯಾಪ್ತಿಯ ಅನೇಕ ಗ್ರಾಮಗಳಲ್ಲಿ ರೈತರು ಶುಂಠಿ ಬೇಸಾಯ ಮಾಡುವ ಉದ್ದೇಶದಿಂದ ಈಗಾಗಲೇ ಕೊಳವೆ ಬಾವಿಯ ನೀರನ್ನು ಬಳಕೆ ಮಾಡಿಕೊಂಡು ಉಳುಮೆ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಭೂಮಿಯಲ್ಲಿ ಫಲವತ್ತತೆ ಹೆಚ್ಚು ಬರಬೇಕೆಂದು, ಮಣ್ಣಿನ ಆಧಾರದ ಮೇಲೆ ಸಗಣಿ ಗೊಬ್ಬರ, ಸುಣ್ಣ, ಸಾರಜನಕ ಮತ್ತು ಸಾವಯವ ಗೊಬ್ಬರವನ್ನು ಹಾಕಿ ಮಣ್ಣಿನಲ್ಲಿ ಮಿಶ್ರಣವಾಗುವಂತೆ ಟ್ರಾö್ಯಕ್ಟರ್ ಮೂಲಕ ಉಳುಮೆ ಕಾರ್ಯವನ್ನು ಆರಂಭ ಮಾಡಿದ್ದಾರೆ.

- ಕೆ.ಕೆ. ನಾಗರಾಜಶೆಟ್ಟಿ.