ನಾಪೋಕ್ಲು, ಜ. ೫: ಉತ್ತಮ ಫಲಿತಾಂಶಕ್ಕಾಗಿ ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಪೋಷಕರ ಪಾತ್ರವೂ ಮುಖ್ಯ ಎಂದು ಮಡಿಕೇರಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ ಹೇಳಿದರು. ಇಲ್ಲಿನ ಕೆಪಿಎಸ್ ಶಾಲೆಯಲ್ಲಿ ಆಯೋಜಿಸಲಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ತಾಯಂದಿರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿ, ಮಕ್ಕಳೊಂದಿಗೆ ತಾಯಿಯಂದಿರು ಹೆಚ್ಚಿನ ಸಮಯ ಕಳೆಯುವ ಮೂಲಕ ಮಕ್ಕಳು ಬೆಳಿಗ್ಗೆ ಬೇಗ ಎದ್ದು ಓದಲು ಸಹಕರಿಸಬೇಕು. ಅವರ ಓದಿನೊಂದಿಗೆ ಆರೋಗ್ಯವೂ ಕೂಡ ಅಷ್ಟೇ ಪ್ರಮುಖವಾಗಿದ್ದು, ಉತ್ತಮ ಆರೋಗ್ಯ ಸೂತ್ರಗಳನ್ನು ಅನುಸರಿಸುವಂತೆ ಸಲಹೆ ನೀಡಿದರು.

ಸಮೂಹ ಸಂಪನ್ಮೂಲ ಸಮನ್ವಯಾಧಿಕಾರಿ ಗುರುರಾಜ ಪ್ರಾಸ್ತಾವಿಕ ನುಡಿಯಾಡಿದರು. ಬಿಆರ್‌ಪಿ ಮಂಜುಳಾ ಚಿತ್ರಾಪುರ, ಕೆಪಿಎಸ್ ಶಾಲೆಯ ಎಸ್‌ಡಿಎಂಸಿ ಉಪಾಧ್ಯಕ್ಷರು, ಸದಸ್ಯರು, ಕೆಪಿಎಸ್ ಪ್ರೌಢಶಾಲೆಯ ಉಪಪ್ರಾಂಶುಪಾಲ ಶಿವಣ್ಣ ಮಾತನಾಡಿದರು. ಈ ಸಂದರ್ಭ ಶಾಲೆಗಳ ಮುಖ್ಯ ಶಿಕ್ಷಕರು, ಹಾಗೂ ಕೆಪಿಎಸ್ ನಾಪೋಕ್ಲು, ಶ್ರೀ ರಾಮ ಟ್ರಸ್ಟ್, ಸೇಕ್ರೆಡ್ ಹಾರ್ಟ್ಸ್, ಸರ್ಕಾರಿ ಪ್ರೌಢಶಾಲೆ ಹೊದವಾಡ ಶಾಲೆಗಳ ವಿದ್ಯಾರ್ಥಿಗಳ ತಾಯಂದಿರು ಹಾಜರಿದ್ದರು.