ಮಡಿಕೇರಿ, ಜ. ೬: ಅಪ್ರಾಪ್ತೆಯನ್ನು ಪುಸಲಾಯಿಸಿ ಅತ್ಯಾಚಾರ ಮಾಡಿದ್ದ ಅಪರಾಧಿಗೆ ೧ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಜಿ. ಪ್ರಶಾಂತಿ ಅವರು ೨೦ ವರ್ಷ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.

ಪ್ರಕರಣದ ಅಪರಾಧಿ ಸುಂಟಿಕೊಪ್ಪ ವ್ಯಾಪ್ತಿಯ ನಿವಾಸಿ ಅಬ್ದುಲ್ ನಾಸಿರ್‌ಗೆ ೨೦ ವರ್ಷ ಶಿಕ್ಷೆ ಜೊತೆ ನೊಂದ ಬಾಲಕಿಗೆ ಸರಕಾರ ಸೂಕ್ತ ಪರಿಹಾರ ನೀಡಬೇಕೆಂದು ಆದೇಶಿಸಿದ್ದಾರೆ.

೨೦೨೨ರಲ್ಲಿ ಆರೋಪಿ ಅಬ್ದುಲ್ ನಾಸಿರ್ ೧೧ ವರ್ಷದ ವಿದ್ಯಾರ್ಥಿನಿಯನ್ನು ಸಲುಗೆಯಿಂದ ಮಾತನಾಡಿಸಿ ಮೊಬೈಲ್ ಸಂಖ್ಯೆ ನೀಡಿ ಆಕೆಯನ್ನು ರಾತ್ರಿ ವೇಳೆಯಲ್ಲಿ ತನ್ನ ಮನೆಗೆ ಕರೆಸಿಕೊಂಡು ೨ ಬಾರಿ ಅತ್ಯಾಚಾರ ಮಾಡಿದ್ದಾನೆ. ಮನೆಯಲ್ಲಿ ಬಾಲಕಿ ಇಲ್ಲದ ಬಗ್ಗೆ ಆತಂಕಗೊAಡ ತಂದೆ-ತಾಯಿ ಹುಡುಕಾಟ ಆರಂಭಿಸಿದ್ದಾರೆ. ಅರ್ಧ ಗಂಟೆ ಬಳಿಕ ಮನೆಗೆ ಬಾಲಕಿ ಹಿಂತಿರುಗಿ ಬಂದಿದ್ದು, ಆಕೆಯನ್ನು ವಿಚಾರಿಸಿದಾಗ ಅತ್ಯಾಚಾರವಾಗಿರುವ ವಿಷಯ ತಿಳಿಸಿದ್ದಾಳೆ. ನಂತರ ಸಂತ್ರಸ್ತೆಯ ತಾಯಿ ಸುಂಟಿಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅಂದಿನ ಡಿವೈಎಸ್‌ಪಿ ಶೈಲೇಂದ್ರ ಅವರು ಪ್ರಕರಣ ತನಿಖೆ ನಡೆಸಿ ಆರೋಪಿ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಜಿ. ಪ್ರಶಾಂತಿ ಆರೋಪಿ ಅಬ್ದುಲ್ ನಾಸಿರ್ ಪೋಕ್ಸೊ ಹಾಗೂ ಎಸ್.ಸಿ./ಎಸ್.ಟಿ. ಕಾಯ್ದೆಯಡಿ ಅಪರಾಧವೆಸಗಿದ ಹಿನ್ನೆಲೆ ಶಿಕ್ಷೆ ವಿಧಿಸಿದ್ದಾರೆ. ಸಂತ್ರಸ್ತೆ ಪರ ಸರಕಾರಿ ಅಭಿಯೋಜಕ ಎಸ್.ಪಿ. ದೇವೇಂದ್ರ ವಾದ ಮಂಡಿಸಿದರು.