ನಾಪೋಕ್ಲು, ಜ. ೪: ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿದ್ದರೆ ಮಾತ್ರ ಸ್ವಸ್ಥ ಸಮಾಜ ನಿರ್ಮಾಣ ಆಗಲು ಸಾಧ್ಯ ಎಂದು ನಿವೃತ್ತ ಪ್ರಾಂಶುಪಾಲರಾದ ಬಡ್ಡಿರ ನಳಿನಿ ಪೂವಯ್ಯ ಹೇಳಿದರು.

ಇಲ್ಲಿನ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಸೋಮವಾರ ಪಾಲ್ಗೊಂಡು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸತ್ಯ, ಪ್ರಾಮಾಣಿಕತೆ, ಆತ್ಮವಿಶ್ವಾಸ, ಮಾನವೀಯತೆ ಹೊಂದಿದ ಮಾನವನನ್ನಾಗಿ ರೂಪಿಸುವುದು ಶಿಕ್ಷಕರ ಜವಾಬ್ದಾರಿ. ಪ್ರತಿಯೊಂದು ಮಗುವಿನ ಬುದ್ಧಿವಂತಿಕೆ ಭಿನ್ನವಾಗಿರುತ್ತದೆ. ಪೋಷಕರು ಮಗುವನ್ನು ಇನ್ನೊಂದು ಮಗುವಿನೊಂದಿಗೆ ಹೋಲಿಸಬಾರದು ಮಗುವಿನಲ್ಲಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು.

ಶಾಲೆಯ ಪ್ರಾಂಶುಪಾಲ ಬಿ.ಸಿ. ಗಪ್ಪಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಮಡಿಕೇರಿಯ ಸಮಾಜ ಸೇವಕ ಹಿದಾಯತುಲ್ಲ (ಬ್ಲಡ್ ಬಯ್ಯ) ಹಾಗೂ ಕಾರ್ಯದರ್ಶಿ ಜಯ ಗಪ್ಪಣ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭ ಸಮಾರಂಭದ ವೇದಿಕೆಯಲ್ಲಿದ್ದ ಗಣ್ಯರು ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು. ಶಾಲಾ ವರದಿಯನ್ನು ಶಿಕ್ಷಕ ಪೊರ್ಕೋಂಡ ಸುನಿಲ್ ವಾಚಿಸಿ, ಶಿಕ್ಷಕಿ ತಂಗಮ್ಮ ಸ್ವಾಗತಿಸಿದರು. ಶಿಕ್ಷಕಿ ದಿವ್ಯ ಅತಿಥಿ ಪರಿಚಯ ಮಾಡಿ, ಶಿಕ್ಷಕಿಯರಾದ ವಸಂತ ಲಕ್ಷಿö್ಮ ಮತ್ತು ದಮಯಂತಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಕಿರಣ್ ಟಿ.ಬಿ. ವಂದಿಸಿದರು. ಬಳಿಕ ವಿವಿಧ ಆಕರ್ಷಕ ಉಡುಗೆ ತೊಡುಗೆ ಧರಿಸಿದ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.