ಸೋಮವಾರಪೇಟೆ, ಜ. ೪: ಅರೇಬಿಕಾ ಕಾಫಿಯನ್ನು ಅತೀ ಹೆಚ್ಚು ಬೆಳೆಯುವ ಉತ್ತರ ಕೊಡಗಿನ ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿ ಅಕಾಲಿಕ ಮಳೆ, ಮೋಡ ಮುಸುಕಿದ ವಾತಾವರಣ ಮೂಡಿದ್ದು, ಅರೇಬಿಕಾ ಕಾಫಿ ಬೆಳೆಗಾರರು ಅಡಕತ್ತರಿಗೆ ಸಿಲುಕಿದಂತಾಗಿದೆ.
ಕಳೆದ ಒಂದು ವಾರದಿಂದಲೇ ಚಳಿಯೊಂದಿಗೆ ಮೋಡ ಮುಸುಕಿದ ವಾತಾವರಣವಿತ್ತು. ಇಂದು ಬೆಳಗ್ಗಿನಿಂದಲೇ ಮಳೆ ಆರಂಭಗೊAಡು ಕಾಫಿ ಫಸಲಿಗೆ ಸಂಚಕಾರವಾಗಿ ಪರಿಣಮಿಸಿತು. ಎಲ್ಲೆಡೆ ಕಾಫಿ ಕೊಯ್ಲು ಪ್ರಗತಿಯಲ್ಲಿದ್ದು, ಕಾರ್ಮಿಕರ ಕೊರತೆಯ ನಡುವೆಯೂ ಬೆಳೆಗಾರರು ಲಭ್ಯವಿರುವ ಕಾರ್ಮಿಕರನ್ನು ಬಳಸಿಕೊಂಡು ಕೊಯ್ಲು ಮಾಡುತ್ತಿದ್ದಾರೆ.
ಎರಡು ಮೂರು ದಿನಕ್ಕೊಮ್ಮೆ ಪಲ್ಪಿಂಗ್ ಮಾಡುವ ಮೂಲಕ ಮೋಡಮುಸುಕಿದ ವಾತಾವರಣದ ನಡುವೆಯೂ ಕಾಫಿ ಪಾರ್ಚಮೆಂಟ್ ಬೇಳೆಯನ್ನು ಒಣಗಿಸಿ ಫಸಲು ಮನೆತುಂಬಿಸಿಕೊಳ್ಳುವ ದಾವಂತದಲ್ಲಿದ್ದ ಬೆಳೆಗಾರರಿಗೆ ಇಂದು ಸುರಿದ ಅಕಾಲಿಕ ಮಳೆ ಸಮಸ್ಯೆಯನ್ನು ತಂದೊಡ್ಡಿತು.
ಕೆಲವು ಭಾಗಗಳಲ್ಲಿ ಮಧ್ಯಾಹ್ನದವರೆಗೆ ಕೊಯ್ಲು ಮಾಡಿ, ಮಳೆಯ ಕಾರಣದಿಂದ ಕೆಲಸವನ್ನು ಸ್ಥಗಿತಗೊಳಿಸಲಾಯಿತು. ಮನೆಯ ಮುಂಭಾಗ, ಕಣದಲ್ಲಿ ಒಣಗಿಸಲು ಹಾಕಿದ್ದ ಪಾರ್ಚಮೆಂಟ್ ಬೇಳೆ ಮಳೆಯಿಂದ ತೊಯ್ದು ಹೋದ ಪರಿಣಾಮ, ಗುಣಮಟ್ಟವನ್ನು ಕಾಯ್ದುಕೊಳ್ಳಲು ಸಾಧ್ಯವಾಗುವುದಿಲ್ಲ. ಪರಿಣಾಮ ಬೇಡಿಕೆ ಕಳೆದುಕೊಂಡು ನಷ್ಟ ಅನುಭವಿಸುವ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಬೆಳೆಗಾರರು ಅಭಿಪ್ರಾಯಿಸಿದ್ದಾರೆ.
ತಾಲೂಕಿನಾದ್ಯಂತ ಅಕಾಲಿಕ ಮಳೆ ಬೀಳುತ್ತಿರುವುದರಿಂದ ಕಾಫಿ ಕೊಯ್ಲಿಗೆ ತಡೆಯಾಗಿದೆ. ಮಳೆ ಹೀಗೆಯೇ ಮುಂದುವರೆದರೆ ಗಿಡಗಳಲ್ಲಿ ಇರುವ ಕಾಫಿ ಉದುರುತ್ತವೆ. ಉದುರಿದ ಕಾಫಿಯನ್ನು ಪಲ್ಪಿಂಗ್ ಮಾಡಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ಕೊಯ್ಲು ಮಾಡಿದ ಕಾಫಿಯನ್ನು ಪಲ್ಪಿಂಗ್ ಮಾಡಿದರೂ ಮೋಡ-ಮಳೆಯಿಂದಾಗಿ ಒಣಗಿಸಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಬೇಳೆ ಕಪ್ಪು ಬಣ್ಣಕ್ಕೆ ತಿರುಗಿ ಗುಣಮಟ್ಟ ಕಳೆದುಕೊಳ್ಳುತ್ತದೆ. ಪರಿಣಾಮ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಬೇಕಾಗುತ್ತದೆ ಎಂದು ಬೆಳೆಗಾರರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಎಲ್ಲಡೆ ಕಾಫಿ ಹಣ್ಣು ಕೊಯ್ಲಿಗೆ ಬಂದಿದ್ದು, ಕಾರ್ಮಿಕರ ಕೊರತೆ ಬಹುವಾಗಿ ಕಾಡುತ್ತಿದೆ. ಕಾಫಿ ಕೊಯ್ಲು ಮಾಡುವ ಕಾರ್ಮಿಕರಿಗೆ ಬೇಡಿಕೆ ಅಧಿಕವಾಗಿದೆ. ದಿನಗೂಲಿಗಾದರೆ ೪೦೦ ರಿಂದ ೪೫೦, ಟಿನ್ಗಾದರೆ ೧೧೦ ರಿಂದ ೧೨೦, ಕೆ.ಜಿ. ಲೆಕ್ಕದಲ್ಲಾದರೆ ಒಂದು ಕೆ.ಜಿ.ಗೆ ೭ ರಿಂದ ೮ ರೂಪಾಯಿ ನೀಡಲಾಗುತ್ತಿದೆ. ಸ್ಥಳೀಯ ಕಾರ್ಮಿಕರೊಂದಿಗೆ ರಾಜ್ಯದ ಕೊಪ್ಪಳ, ಬೀದರ್, ಹಾವೇರಿ ಸೇರಿದಂತೆ ಉತ್ತರ ಕರ್ನಾಟಕದ ಕಾರ್ಮಿಕರು, ಬಿಹಾರ, ಅಸ್ಸಾಂನ ಕಾರ್ಮಿಕರನ್ನು ಕಾಫಿ ಕೊಯ್ಲಿನ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ.
ಕೆಲವು ಬೆಳೆಗಾರರು ಶೇ.೫೦ರಷ್ಟು ಕಾಫಿ ಕೊಯ್ಲು ಮಾಡಿಕೊಂಡಿದ್ದರೆ, ಉಳಿದ ಹಲವಷ್ಟು ಮಂದಿ ಇನ್ನಷ್ಟೇ ಕೊಯ್ಲು ಆರಂಭಿಸಬೇಕಿದೆ. ಇಂತಹ ಸನ್ನಿವೇಶದಲ್ಲಿ ಅಕಾಲಿಕ ಮಳೆ ಬೀಳುತ್ತಿರುವುದು ಬೆಳೆಗಾರ ವರ್ಗ ಕಂಗೆಡುವAತೆ ಮಾಡಿದೆ. ಇಂದು ಬೆಳಗ್ಗಿನಿಂದಲೂ ತಾಲೂಕು ವ್ಯಾಪ್ತಿಯಲ್ಲಿ ಮಳೆ ಬಿದ್ದಿದೆ.
ಮಳೆಯಿಂದಾಗಿ ಕಾಫಿ ಕೆಲಸ ಸ್ಥಗಿತಗೊಂಡಿದೆ. ಮಳೆ ಹೀಗೆ ಮುಂದುವರೆದರೆ ಕೊಯ್ಲು ಮಾಡಲು ಸಾಧ್ಯವಾಗುವುದಿಲ್ಲ. ಮಳೆಗಾಲದಲ್ಲಿಯೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಇದು ಫಸಲಿನ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಅಳಿದುಳಿದ ಫಸಲು ಕೈಸೇರಬೇಕೆನ್ನುವಷ್ಟರಲ್ಲಿ ಅಕಾಲಿಕ ಮಳೆಯಾಗುತ್ತಿದೆ. ಒಟ್ಟಾರೆ ಬೆಳೆಗಾರ ವರ್ಗ ನಷ್ಟದ ಮೇಲೆ ನಷ್ಟ ಅನುಭವಿಸುವಂತಾಗಿದೆ ಎಂದು ಹರಗ ಗ್ರಾಮದ ಕೃಷಿಕ ಶರಣ್ ಗೌಡ ಅಭಿಪ್ರಾಯಿಸಿದ್ದಾರೆ.