ನಾಪೋಕ್ಲು, ಜ. ೩: ಸಮೀಪದ ಹೊದವಾಡ ಗ್ರಾಮದ ರಾಫೆಲ್ಸ್ ಇಂಟರ್ ನ್ಯಾಷನಲ್ ಪಿಯು ಕಾಲೇಜು ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ವಾರ್ಷಿಕೋತ್ಸವ ನಡೆಯಿತು. ಕಾರ್ಯಕ್ರಮವನ್ನು ಸಾಹಿತಿ ನಾಗೇಶ್ ಕಾಲೂರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಪ್ರಕೃತಿಯಲ್ಲಿರುವ ಗಾಳಿ, ನೀರು, ಬೆಳಕು ವಾತಾವರಣ ಎಲ್ಲವೂ ಜೀವಿಗಳ ಬದುಕಿಗೆ ಅತ್ಯವಶ್ಯಕ. ಪ್ರಕೃತಿಯ ಪಾಠಗಳನ್ನು ಮಕ್ಕಳಿಗೆ ಹೇಳಿಕೊಡಬೇಕು. ಇನ್ನೊಬ್ಬರನ್ನು ನಾವು ನೋಯಿಸದೆ ಇರುವಂತಹ ಗುಣಗಳನ್ನು ಮಕ್ಕಳಿಗೆ ಕಲಿಸಬೇಕೆಂದರು.
ಮತೋರ್ವ ಮುಖ್ಯ ಅತಿಥಿ ಮಂಗಳೂರಿನ ಮೋಟಿವೇಶನಲ್ ಸ್ಪೀಕರ್ ರಫೀಕ್ ಮಾಸ್ಟರ್ ಮಾತನಾಡಿ, ಈ ದೇಶಕ್ಕೆ ಶಕ್ತಿ ಆಗಬೇಕಾದ ಮಕ್ಕಳು ದಾರಿತಪ್ಪುತ್ತಿದ್ದಾರೆ. ಮೊಬೈಲ್ ಸಂಸ್ಕೃತಿಗೆ ಮಾರುಹೋಗುತ್ತಿದ್ದಾರೆ. ಮಕ್ಕಳು ಮನೆಗೆ ಬೆಳಕಾಗಬೇಕು. ಪುಸ್ತಕದ ಬಗ್ಗೆ ನಿಷ್ಠೆ ಇರಿಸಿ ಜ್ಞಾನ ಸಂಪಾದಿಸುವತ್ತ ಮಕ್ಕಳನ್ನು ಪೋಷಕರು, ಶಿಕ್ಷಕರು, ಪ್ರೇರೇಪಿಸಬೇಕು ಎಂದರು.
ಈ ಸಂದರ್ಭ ಪಂಚಾಯತ್ ಪರಿಷತ್ ಅತ್ಯುತ್ತಮ ಪಿಡಿಓ ಪ್ರಶಸ್ತಿ ವಿಜೇತ ಹೊದ್ದೂರು ಪಿಡಿಓ ಎ.ಎ ಅಬ್ದುಲ್ಲ ಅವರನ್ನು ಸಂಸ್ಥೆಯ ಪರವಾಗಿ ಗಣ್ಯರು ಸನ್ಮಾನಿಸಿದರು. ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ವೇದಿಕೆಯಲ್ಲಿದ್ದ ಗಣ್ಯರು ಬಹುಮಾನ ವಿತರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಉಪಾಧ್ಯಕ್ಷ ಮೆಹಬೂಬ್ ಸಾಬ್ ವಹಿಸಿದ್ದರು. ವೇದಿಕೆಯಲ್ಲಿ ನಾಪೋಕ್ಲು ಜುಮ್ಮಾ ಮಸೀದಿಯ ಅಧ್ಯಕ್ಷ ಎಂ.ಎಚ್ ಅಬ್ದುಲ್ ರೆಹಮಾನ್, ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿ ಸಂಘದ ಅಧ್ಯಕ್ಷ ಹುಸೇನಾರ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಪ್ರಾರಂಭಗೊAಡ ಕಾರ್ಯಕ್ರಮದಲ್ಲಿ ಶಿಕ್ಷಕಿ ಸೌಜನ್ಯ ಸ್ವಾಗತಿಸಿದರು. ಸಂಸ್ಥೆಯ ಪ್ರಾಂಶುಪಾಲರಾದ ತನ್ವೀರ್ ಶಾಲಾ ವರದಿ ವಾಚಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.